ಜಯ ಸಾವಿನ ತನಿಖೆಗೆ ತಡೆ ನೀಡುವಂತೆ ಕೋರಿ ಕೋರ್ಟ್​ ಮೊರೆ ಹೋಗಿದ್ದೇಕೆ ಚೆನ್ನೈನ ಅಪೊಲೋ ಆಸ್ಪತ್ರೆ?

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಕೋರಿ ಚೆನ್ನೈನ ಅಪೋಲೊ ಆಸ್ಪತ್ರೆ ಮದ್ರಾಸ್​ ಹೈಕೋರ್ಟ್​ಗೆ ಮೊರೆ ಹೋಗಿದೆ.

ಜಯಲಲಿತಾ ಅವರ ಸಾವಿನ ಕುರಿತು ಆರ್ಮುಗಸ್ವಾಮಿ ಆಯೋಗ ತನಿಖೆ ನಡೆಸುತ್ತಿದ್ದು, ಈ ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಆಸ್ಪತ್ರೆ ಆಡಳಿತ ಅರ್ಜಿ ಸಲ್ಲಿಸಿದೆ.

“ತನಿಖಾ ಆಯೋಗವು ಪೂರ್ವಾಗ್ರಹಪೀಡಿತವಾಗಿದೆ. ಒಂದು ವೇಳೆ ತನಿಖೆಗೆ ತಡೆ ನೀಡದೇ ಹೋದರೆ ಆಸ್ಪತ್ರೆಯ ಘನತೆಗೆ ಚ್ಯುತಿಯುಂಟಾಗಲಿದೆ. ಆ ಮೂಲಕ ಆಸ್ಪತ್ರೆಯು ಸಂಕಷ್ಟ ಎದುರಿಸಬೇಕಾಗುತ್ತದೆ,”ಎಂದು ಆಸ್ಪತ್ರೆ ಹೇಳಿದೆ.

2016ರ ಸೆ.22ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೊಲೋ ಆಸ್ಪತ್ರೆ ಸೇರಿದ್ದ ಜಯಲಲಿತಾ ಅವರು ಸತತ 75 ದಿನಗಳ ಚಿಕಿತ್ಸೆಯ ಹೊರತಾಗಿಯೂ 2016ರ ಡಿ.5ರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದರು. ಅದರೆ, ಅವರ ಚಿಕಿತ್ಸಾ ಅವಧಿಯ ಘಟನಾವಳಿಯ ಕುರಿತು ರಾಜ್ಯಾದ್ಯಂತ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಆಡಳಿತಾರೂಡ ಎಐಎಡಿಎಂಕೆ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಆರ್ಮುಗ ಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚನೆ ಮಾಡಿದೆ.