ವಿಜಯಪುರ: ವಕ್ಫ್ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು ಪಾಲ್ಗೊಂಡಿದ್ದು ನೂರಕ್ಕೆ ನೂರರಷ್ಟು ಸರಿಯಾಗಿದೆ. ಯಾವಾಗ ದೇಶಕ್ಕೆ ಮತ್ತು ಧರ್ಮಕ್ಕೆ ಅನ್ಯಾಯವಾಗಲಿದೆಯೋ ಆಗೆಲ್ಲ ಮಠಾಧೀಶರುಗಳು ಸಿಡಿದೆದ್ದಿರುವುದು ಸಾಮಾನ್ಯ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರಗೆ ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತದ ಪ್ರಮುಖ ಸುನೀಲ ಭೈರವಾಡಗಿ ತಿರುಗೇಟು ನೀಡಿದ್ದಾರೆ.
ಸ್ವಾಮೀಜಿಯವರು ಯಾವುದೇ ಪಕ್ಷ, ಪಂಗಡ ಪರವಿಲ್ಲದೆ ಅವರು ನೇರವಾಗಿ ಮಠ, ಮಂದಿರಗಳ ಮೇಲೆ ಅನ್ಯಾಯವಾದಲ್ಲಿ ಹೋರಾಟಕ್ಕೆ ಇಳಿಯುತ್ತಾರೆ. ವಕ್ಫ್ ಬೋರ್ಡ್ ಇದು ಸಂವಿಧಾನ ಬದ್ಧವಾದ ಬೋರ್ಡ್ ಅಲ್ಲ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ವಕ್ಫ್ ಬೋರ್ಡ್ ಎಂಬುದರ ಉಲ್ಲೇಖವಿಲ್ಲ. ಆದಾಗ್ಯೂ 1954 ರಲ್ಲಿ ಜವಾಹರಲಾಲ್ ನೆಹರು ನೇತೃತ್ವದ ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.
ವಕ್ಫ ಬೋರ್ಡ್‌ಗೆ ಕಾಲ ಕಾಲಕ್ಕೆ ಸಂಪೂರ್ಣ ಅಧಿಕಾರ ಕೊಟ್ಟು ದೇಶದಲ್ಲಿಯ ರೈತ, ಜನರ, ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯ ವಿಜಯಪುರ ನಗರದ 43 ಆಸ್ತಿಗಳನ್ನು ವಕ್ಫ್ ಎಂದು ಕಾನೂನು ಬಾಹಿರವಾಗಿ ಘೋಷಣೆ ಮಾಡಿದೆ. ಮತ್ತು ಇಡೀ ಕರ್ನಾಟಕದ ಅನೇಕ ರೈತರ ಜಮೀನುಗಳನ್ನು ಕೂಡ ವಕ್ಫ್ ಎಂದು ಕಾನೂನು ಬಾಹಿರವಾಗಿ ಘೋಷಣೆ ಮಾಡಿದೆ. ಪಡಗಾನೂರಿನ ದೇವಸ್ಥಾನ, ಸಿಂದಗಿಯ ವಿರಕ್ತಮಠ, ಬಿ.ಕೆ.ಯರಗಲ್ ಮಠ ವಕ್ಫ ಎಂದು ಘೋಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ದೂರದ ಕೊಲ್ಹಾಪುರದಿಂದ ಆಗಮಿಸಿದ ಶ್ರೀಗಳು ನಡೆಯುತ್ತಿರುವ ಸತ್ಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲಿ ತಪ್ಪೇನಿಲ್ಲ ಎಂದು ಭೈರವಾಗಿ ತಿಳಿಸಿದ್ದಾರೆ.
ಅನ್ಯಾಯಕ್ಕೊಳಗಾದವರ ನೋವಿಗೆ ಸ್ಪಂದಿಸುವ ಔದಾರ್ಯತೆಯನ್ನು ಸ್ವಾಮೀಜಿಯವರಿಗೆ ರಕ್ತಗತವಾಗಿಯೇ ಬಂದಿದೆ. ಇದನ್ನು ಎಸ್.ಎಂ. ಪಾಟೀಲ ಗಣಿಹಾರ ತಿಳಿದುಕೊಳ್ಳಬೇಕು ಎಂದಿದ್ದಾರಲ್ಲದೇ, ಎಸ್.ಎಂ. ಪಾಟೀಲ ಯಾರ ಕುಮ್ಮಕ್ಕಿನಿಂದ ಈ ರೀತಿ ಹೇಳಿಕೆ ನೀಡಿದ್ದಾರೆಂಬುದು ನಮಗೆ ಗೊತ್ತಿದೆ ಎಂದಿದ್ದಾರೆ. ಮುಂದುವರಿದು ಸ್ವಾಮೀಜಿಗೆ ಅಗೌರವ ತೋರಿರುವುದನ್ನು ವಿಹಿಂಪ ಉಗ್ರವಾಗಿ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.