ಜೈಪುರ: ರಾಜಸ್ಥಾನದ ಉಪಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದೂ, ಪಕ್ಷದಿಂದ ಹೊರಹೋಗಲು ಒಂದು ಹೆಜ್ಜೆಯನ್ನು ಹೊರಗಿಟ್ಟಿದ್ದ ಸಚಿನ್ ಪೈಲಟ್ ಇದೀಗ ತಮ್ಮ ಹೆಜ್ಜೆಯನ್ನು ಹಿಂತೆಗೆದುಕೊಂಡಿದ್ದಾರೆ. ಇದರಿಂದಾಗಿ ಇನ್ನೇನು ಪತನಗೊಂಡಿತು ಎಂದೇ ಹೇಳಲಾಗುತ್ತಿದ್ದ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಸದ್ಯ ಬೀಸುವ ದೊಣ್ಣೆಯಿಂದ ಪಾರಾಗಿದೆ. ಆದರೂ ಎಲ್ಲವೂ ಸರಿಯಾಗಿದೆ ಎಂದು ಅನ್ಯಥಾ ಭಾವಿಸುವುದು ತಪ್ಪಾಗುತ್ತದೆ.
ಮನೆಯಿಂದ ಹೊರಹೋಗಲು ಒಂದು ಹೆಜ್ಜೆ ಮುಂದಿಟ್ಟಿದ್ದ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರು ಹೆಜ್ಜೆಯನ್ನು ಹಿಂತೆಗೆದುಕೊಂಡು ಪಕ್ಷದಲ್ಲೇ ಉಳಿಯುತ್ತಿರುವ ರೀತಿ, ತಾವು ಕೊಟ್ಟಿರುವ ಮತ್ತು ಕೊಡುತ್ತಿರುವ ಸಂದರ್ಶನಗಳಲ್ಲಿ ಹೋರಾಟವನ್ನು ಮುಂದುವರಿಸುವ ಅರ್ಥದ ಮಾತುಗಳನ್ನು ಆಡುತ್ತಿರುವ ಸಚಿನ್ ಪೈಲಟ್ ಅವರ ಪರಿ ಅಶೋಕ್ ಗೆಹ್ಲೋಟ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶಾಸಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಹೀಗಾಗಿ ಅವರು ಪೈಲಟ್ ಬಳಗದ ಬಗ್ಗೆ ಭಾರಿ ಅಪನಂಬಿಕೆ ಮೂಡಿಸಿಕೊಂಡಿದ್ದು, ಅವರ ವಿರುದ್ಧ ಗೆಹ್ಲೋಟ್ ಅವರ ಕಿವಿಕಚ್ಚಲಾರಂಭಿಸಿದ್ದಾರೆ.
ಇಷ್ಟು ಸಾಲದು ಎಂಬಂತೆ ತಮ್ಮ ಅಪನಂಬಿಕೆಯನ್ನು ವ್ಯಕ್ತಪಡಿಸಿ ಮತ್ತು ಅಳಲನ್ನು ತೋಡಿಕೊಂಡು ಪಕ್ಷದ ಹೈಕಮಾಂಡ್ಗೂ ಪತ್ರ ಬರೆದಿರುವ ಕೆಲ ಶಾಸಕರು, ಪೈಲಟ್ ಮತ್ತು ಅವರ ಬೆಂಬಲಿಗ 18 ಶಾಸಕರಿಗೆ ರಾಜಕೀಯ ಪುನರುಜ್ಜೀವನ ಕೊಡಲಾಗುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ರಾಜಕಾರಣಕ್ಕೆ ಪೈಲಟ್ ಮತ್ತು ಅವರ ಬೆಂಬಲಿಗರು ಮರಳುತ್ತಿರುವ ವೇಗ ಮತ್ತು ಮರಳಲು ತೋರುತ್ತಿರುವ ಆವೇಗದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಚೀನಾ ಮೂಲದ ವ್ಯಕ್ತಿಯಿಂದ ಭಾರತದಲ್ಲಿ 1 ಸಾವಿರ ಕೋಟಿ ರೂಪಾಯಿ ಹವಾಲಾ ದಂಧೆ
ಪೈಲಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವವರಲ್ಲಿ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಖಚಾರಿಯಾವಾಸ್ ಪ್ರಮುಖರಾಗಿದ್ದಾರೆ. ಒಂದು ಕಾಲದಲ್ಲಿ ಇವರು ಪೈಲಟ್ ಅವರ ಆಪ್ತರಾಗಿದ್ದವರು. ಇದೀಗ ಇವರು ಗೆಹ್ಲೋಟ್ ಪಾಳೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಂಡಿದ್ದಾರೆ. ಪೈಲಟ್ ಬಂಡಾಯ ಎದ್ದಾಗಿನಿಂದ ಅವರು ಪಕ್ಷದಲ್ಲೇ ಉಳಿಯುವವರೆಗಿನ ಒಂದು ತಿಂಗಳಲ್ಲಿ ಪೈಲಟ್ ವಿರುದ್ಧ ಎತ್ತರದ ಸ್ಥಾಯಿಯಲ್ಲಿ ನಿರಂತರವಾಗಿ ಟೀಕಿಸಿದವರು ಇವರು.
ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಂಡು ಅವರಿಗೆ ಹೆಚ್ಚಿನ ಸ್ಥಾನಮಾನ ನೀಡುವ ಹೈಕಮಾಂಡ್ನ ನಿರ್ಧಾರದ ಬಗ್ಗೆ ಪಕ್ಷದ ಶಾಸಕರಲ್ಲಿ ಭಾರಿ ಆಕ್ರೋಶ ಮನೆ ಮಾಡಿದ್ದು, ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂದು ಹೇಳಲಾಗುತ್ತಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಹೊರತಾಗಿಯೂ ಪೈಲಟ್ ಬಂಡಾಯ ಎದ್ದು ಸರ್ಕಾರವನ್ನು ಪತನದ ಅಂಚಿಗೆ ಕೊಂಡೊಯ್ದಿದ್ದರು. ಇದಕ್ಕಾಗಿ ಅವರು ಒಂದು ತಿಂಗಳು ತಮ್ಮ ಬೆಂಬಲಿಗೆ ಶಾಸಕರೊಂದಿಗೆ ಹೋಟೆಲ್ನಲ್ಲಿ ತಂಗಿದ್ದರು ಎಂಬು ಖಚಾರಿಯಾವಾಸ್ ಅವರ ಪ್ರಮುಖ ಆರೋಪವಾಗಿದೆ. ಆದರೆ ಈ ಆರೋಪಗಳು ಪಕ್ಷದ ಕಾರ್ಯಕರ್ತರ ಬೇಗುದಿಯಾಗಿವೆಯೇ ಹೊರತು ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯಗಳಲ್ಲ ಎಂದು ತಿಪ್ಪೆ ಸಾರಿಸಲು ಅವರು ಪ್ರಯತ್ನಿಸಿದ್ದಾರೆ.
ಸಂಪುಟ ಪುನರಾಚನೆ ವೇಳೆ ಅಸಮಾಧಾನ ಸ್ಫೋಟ: ಬಂಡಾಯ ಎದ್ದ ಸಂದರ್ಭದಲ್ಲಿ ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಲಾಗಿತ್ತು. ಇದೀಗ ಅವರನ್ನು ಪಕ್ಷದಲ್ಲೇ ಉಳಿದುಕೊಂಡಿರುವುದರಿಂದ ಅವರಿಗೆ ಸಚಿವ ಸ್ಥಾನ ಕೊಡಲೇ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಶೋಕ್ ಗೆಹ್ಲೋಟ್ ಸಚಿವ ಸಂಪುಟವನ್ನು ಪುನಾರಚಿಸುವುದು ಅನಿವಾರ್ಯವಾಗುತ್ತದೆ. ಈ ಸಂದರ್ಭದಲ್ಲಿ ಪೈಲಟ್ ಮತ್ತು ಅವರ ಬೆಂಬಲಿಗರಿಗೆ ಅದು ಯಾವ ಬಗೆಯ ಸ್ಥಾನಮಾನ ಲಭಿಸುತ್ತದೆ ಎಂಬುದನ್ನು ಅವಲಂಬಿಸಿ ಅವರನ್ನು ಸಮಾಧಾನಪಡಿಸಲು ಪಕ್ಷದ ಹೈಕಮಾಂಡ್ ನೀಡಿರುವ ಭರವಸೆಗಳು ಏನೆಂಬುದು ಸ್ಪಷ್ಟವಾಗಲಿದೆ.
ಇದೇ ವೇಳೆ ಈ ಪ್ರಕ್ರಿಯೆಯಲ್ಲಿ ಗೆಹ್ಲೋಟ್ ಆಪ್ತರು ಮತ್ತು ಪೈಲಟ್ ಆಪ್ತರ ನಡುವೆ ಅಸಮಾಧಾನ ಸ್ಫೋಟಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಮೇಲ್ನೋಟಕ್ಕೆ ರಾಜಸ್ಥಾನ ರಾಜಕೀಯ ಸಮುದ್ರ ಪ್ರಶಾಂತವಾಗಿರುವಂತೆ ಕಾಣುತ್ತಿದ್ದರೂ, ಹಠಾತ್ತನೆ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇಲ್ಲದಿಲ್ಲ.
ಮಂಗಳವಾರ ರಾತ್ರಿ ನಡೆದ ಭಯಾನಕ ಕ್ರೌರ್ಯದ ಇಂಚಿಂಚೂ ಬಿಚ್ಚಿಟ್ಟ ಡಿಜೆ ಹಳ್ಳಿ ಠಾಣಾ ಇನ್ಸ್ಪೆಕ್ಟರ್