ಎನಿ ಟೈಂ, ಎನಿವೇರ್‌ ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಿದ್ಧ: ನಿಖಿಲ್‌ಗೆ ಟಾಂಗ್‌ ನೀಡಿದ ಸುಮಲತಾ

ಮಂಡ್ಯ: ಮಂಡ್ಯ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ‌. ಕೇವಲ ಆರೋಪ ಮಾಡುತ್ತಾರೆ ಎಂಬ ಮೈತ್ರಿ ಅಭ್ಯರ್ಥಿ ನಿಖಿಲ್ ಹೇಳಿಕೆಗೆ ಎನಿ ಟೈಮ್, ಎನಿವೇರ್ ಅವರೊಂದಿಗೆ ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾನು ಸಿದ್ಧಳಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ತಿಳಿಸಿದ್ದಾರೆ.

ಜೆಡಿಎಸ್ ನಾಯಕರು ಟೀಕೆಗಳನ್ನು ಮಾಡುವಾಗ ಮಂಡ್ಯ ಅಭಿವೃದ್ಧಿ ನೆನಪಾಗಲಿಲ್ವಾ? ಈಗ ಅವರು ಮಂಡ್ಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಜೆಡಿಎಸ್ ನಾಯಕರ ಹೇಳಿಕೆಗಳನ್ನು ಜನ ಕೇಳಿದ್ದಾರೆ. ಅವರಿಗೆ ಕೋಪ‌ ಇದೆ. ಈಗ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಜನ ನಂಬುವುದಿಲ್ಲ ಎಂದರು.

ದರ್ಶನ್, ಯಶ್‌ಗೆ ಎಲ್ಲ ಪಕ್ಷದಲ್ಲೂ ಅಭಿಮಾನಿಗಳಿದ್ದಾರೆ. ದರ್ಶನ್ ಅಭಿಮಾನಿಗಳು ಈಗ ಜೆಡಿಎಸ್‌ ಸೇರಿದ್ದಾರೆಂದರೆ ಯೋಚನೆ ಮಾಡಬೇಕು. ಅದರ ಹಿಂದೆ ಏನಿದೆ ಎಂದು. ಅನ್ಯಾಯದ ವಿರುದ್ಧ ಎತ್ತಿದ ಧ್ವನಿಗೆ ನ್ಯಾಯ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ವರ್ಗಾವಣೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿದ್ದಾಗ ಇವರು ಯಾರನ್ನೂ ವರ್ಗಾವಣೆ ಮಾಡಿಲ್ವಾ ಎಂದು ಪ್ರಶ್ನಿಸಿದರು.

ಅಧಿಕಾರದಲ್ಲಿರುವ ಪಕ್ಷಗಳು ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಚುನಾವಣಾ ಆಯೋಗ ಮಂಡ್ಯ ಡಿಸಿ ಅವರನ್ನು ವರ್ಗಾಯಿಸಿದೆ. ಡಿಸಿ ವರ್ಗಾವಣೆಯಿಂದ ಇವರಿಗಾದ ನಷ್ಟ ಏನು? ಯಾಕೆ ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. (ದಿಗ್ವಿಜಯ ನ್ಯೂಸ್)