ತಿಂಗಳ ವಿಶೇಷ ಪೂಜೆಗಾಗಿ ನಾಳೆ ಶಬರಿಮಲೆ ಬಾಗಿಲು ಓಪನ್​: ಭಕ್ತರಲ್ಲಿ ಮನೆ ಮಾಡಿದ ಆತಂಕ

ತಿರುವನಂತಪುರ: ತಿಂಗಳ ವಿಶೇಷ ಪೂಜೆಗಾಗಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಬಾಗಿಲು ಮಂಗಳವಾರ ಮತ್ತೆ ತೆರೆಯಲಿದ್ದು, ಅಸಂಖ್ಯಾತ ಭಕ್ತರ ಮನದಲ್ಲಿ ಆತಂಕ ಮನೆ ಮಾಡಿದೆ.

ಮಲಯಾಳಂನ ಕುಂಭಂ ತಿಂಗಳ ವಿಶೇಷ ಪೂಜೆಗಾಗಿ ಬೆಟ್ಟದ ತುದಿಯಲ್ಲಿರುವ ಅಯ್ಯಪ್ಪನ ದೇಗುಲ ಫೆ.17 ರಿಂದ ಐದು ದಿನಗಳ ಕಾಲ ತೆರೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ಸೋಮವಾರ ಮಾಹಿತಿ ನೀಡಿದೆ.

ಎಲ್ಲ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲವನ್ನು ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ ಶಬರಿಮಲೆ ವಿವಾದದ ಕೇಂದ್ರ ಬಿಂದುವಾಗಿದ್ದು, ಅಸಂಖ್ಯಾತ ಭಕ್ತಗಣ, ಸಂಘಟನೆಗಳು ಸೇರಿ ದೇವಸ್ವಂ ಮಂಡಳಿ ತೀರ್ಪನ್ನು ವಿರೋಧಿಸಿತ್ತು. ಕೇರಳ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯು ವ್ಯಕ್ತವಾಗಿತ್ತು. ಸಾಕಷ್ಟು ಬಾರಿ ಮಹಿಳೆಯರು ದೇಗುಲ ಪ್ರಯತ್ನಿಸಲು ಹೋಗಿ ವಿಫಲರಾಗಿದ್ದರು. ಆದರೆ, ಜನವರಿ 1ರ ಹೊಸ ವರ್ಷದಂದೇ ಕನಕದುರ್ಗಾ ಹಾಗೂ ಬಿಂದು ಅಮ್ಮಿನಿ ದೇಗುಲ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದರು. ಇದು ಪರ ವಿರೋಧದ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಸುಪ್ರೀಂ ನೀಡಿರುವ ತೀರ್ಪನ್ನು ಮರುಪರಿಶೀಲಿಸಲು ಸಾಕಷ್ಟು ಅರ್ಜಿಗಳು ಬಂದಿದ್ದು, ಕಳೆದ ಬುಧವಾರ ವಿಚಾರಣೆ ನಡೆಸಿರುವ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿದೆ. (ಏಜೆನ್ಸೀಸ್​)