ಆನ್ವರಿಯಲ್ಲಿ ಕಳ್ಳರ ಪತ್ತೆಗಾಗಿ ಶ್ವಾನದಳ ತಂಡದಿಂದ ಪರಿಶೀಲನೆ

ಹಟ್ಟಿಚಿನ್ನದಗಣಿ: ಆನ್ವರಿ ಗ್ರಾಮದಲ್ಲಿ ಕಳ್ಳರಿಂದ ಚಾಕು ಇರಿತಕ್ಕೊಳಗಾದ ಹನುಮಂತಿ ಹನುಮಂತ ಅವರ ಮನೆಗೆ ಶ್ವಾನದಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗುರುವಾರ ತಡರಾತ್ರಿ 3-4 ಜನ ಮುಸುಕುಧಾರಿಗಳು ದರೋಡೆ ಮಾಡಲು ಹನುಮಂತಿ ಅವರ ಮನೆಗೆ ನುಗ್ಗಿ, ಮನೆಯಲ್ಲಿದ್ದ ಇಬ್ಬರಿಗೆ ಚಾಕುವಿನಿಂದ ಬಲವಾಗಿ ಇರಿದಿದ್ದಾರೆ. ಇವರ ಚೀರಾಟ ಜೋರಾಗುತ್ತಿದ್ದಂತೆ ಕಳ್ಳರು ಕಪ್ಪು ವಸ್ತ್ರ, ಚಾಕುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ಗಂಭೀರಗಾಯಗೊಂಡ ಹನುಮಂತಿ ಅವರ ಪತಿ ಹನುಮಂತನನ್ನು ರಾಯಚೂರು ರಿಮ್ಸ್ ಆಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಶಿವಮೊಗ್ಗ ಮೂಲದ ನಾಲ್ಕು ಕಳ್ಳರು ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರವೇ ಸಿಕ್ಕಿಬಿದ್ದಿದ್ದಾರೆ. ಈ ನಾಲ್ವರು ಕಳ್ಳರಿಗೆ ಇವರು ಸಂಬಂಧಿಸಿದ್ದಾರೆ ಎಂದು ಶಂಕಿಸಲಾಗಿದೆ. ಶ್ವಾನದಳ ತಂಡದಲ್ಲಿ ಪೊಲೀಸ್ ಉಪವಿಭಾಗಾಧಿಕಾರಿ ಶರಣಬಸಪ್ಪ ಸುಬೇದಾರ, ವೃತ್ತ ನಿರೀಕ್ಷಕ ಯಶವಂತ ಬಿಸನಹಳ್ಳಿ ಇದ್ದರು.