ಸಪೂರ ಸುಂದರಿ ಅನುಷ್ಕಾ

ದಕ್ಷಿಣ ಭಾರತದ ಜನಪ್ರಿಯ ತಾರೆಯರಲ್ಲಿ ನಟಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು. ‘ಸೈಜ್ ಝೀರೋ’ ಸಿನಿಮಾದ ನಂತರ ಅವರ ದೇಹತೂಕ ಹೆಚ್ಚಾಗಿತ್ತು. ಅದು ಯಾವ ಮಟ್ಟಕ್ಕೆಂದರೆ, ‘ಬಾಹುಬಲಿ 2’ ಚಿತ್ರೀಕರಣ ಸಮಯದಲ್ಲಿ ತೂಕ ಕಡಿಮೆ ಮಾಡಿಕೊಳ್ಳುವಂತೆ ಸ್ವತಃ ನಿರ್ದೇಶಕ ರಾಜಮೌಳಿ ಸೂಚಿಸಿದ್ದರಂತೆ. ಕಳೆದ ವರ್ಷ ಪ್ರಾರಂಭದಲ್ಲಿ ‘ಭಾಗಮತಿ’ ಸಿನಿಮಾ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡಿದ್ದ ಅನುಷ್ಕಾ, ಆ ಬಳಿಕ ಸುದೀರ್ಘ ಒಂದು ವರ್ಷ ಕಾಣೆಯಾಗಿದ್ದರು. ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ವಿದೇಶಕ್ಕೆ ಹಾರಿದ್ದರು. ಈಗ ಆ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಮತ್ತೆ ಎಂದಿನ ಸ್ಲಿಮ್ ಲುಕ್​ನಲ್ಲಿ ಮಿರಿಮಿರಿ ಮಿಂಚುತ್ತಿದ್ದಾರೆ ಅನುಷ್ಕಾ.

ಕಳೆದ ವರ್ಷವೇ ಆಸ್ಟ್ರಿಯಾಕ್ಕೆ ತೆರಳಿದ್ದ ಅನುಷ್ಕಾ, ಸಾಕಷ್ಟು ಕಸರತ್ತು ಮಾಡಿ ದೇಹತೂಕ ಇಳಿಸಿದ್ದಾರೆ. ಪ್ರೇಕ್ಷಕರಿಗೆ ಹಳೆಯ ಲುಕ್​ನಲ್ಲೇ ಸಪೂರ ಸುಂದರಿಯಂತೆ ಕಾಣಿಸಿಕೊಳ್ಳಬೇಕೆಂಬ ಉದ್ದೇಶದಿಂದ ಇಷ್ಟು ದಿನ ಮಾಧ್ಯಮಗಳಿಂದ ಅವರು ದೂರ ಉಳಿದಿದ್ದರು. ಇದೀಗ ಅವರ ಹೊಸ ಫೋಟೋಗಳು ಇಂಟರ್​ನೆಟ್​ನಲ್ಲಿ ವೈರಲ್ ಆಗಿವೆ. ಸದ್ಯ ಹಾರರ್ ಥ್ರಿಲ್ಲರ್ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ‘ಸೈಲೆನ್ಸ್’ ಶೀರ್ಷಿಕೆಯ ಈ ಸಿನಿಮಾದಲ್ಲಿ ಅವರ ಜತೆಗೆ ಆರ್. ಮಾಧವನ್, ಅಂಜಲಿ, ಶಾಲಿನಿ ಪಾಂಡೆ, ಸುಬ್ಬರಾಜು ಮುಂತಾದವರು ನಟಿಸಲಿದ್ದು, ಹೇಮಂತ್ ಮಧುಕರ್ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು, ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ಈ ಸಿನಿಮಾ ನಿರ್ವಣವಾಗಲಿದೆ. ಇಡೀ ಚಿತ್ರದಲ್ಲಿ ಅನುಷ್ಕಾ ಮೂಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್​ನ ಕೆಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆಗಳಿವೆ. ಮಾರ್ಚ್​ನಲ್ಲಿ ಶೂಟಿಂಗ್ ಶುರುವಾಗಲಿದೆ.- ಏಜೆನ್ಸೀಸ್