ಟೀಮ್ ಇಂಡಿಯಾ ಜತೆ ಅನುಷ್ಕಾ ಶರ್ಮ ಪೋಸ್​ಗೆ ಕಿಡಿ

ನವದೆಹಲಿ: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಮಂಗಳವಾರ ಲಂಡನ್​ನಲ್ಲಿ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿತ್ತು. ಈ ಚಿತ್ರವನ್ನು ಬಿಸಿಸಿಐ ಟ್ವಿಟರ್​ನಲ್ಲಿ ಪ್ರಕಟ ಮಾಡಿದ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದೆ. ಬಿಸಿಸಿಐ ಪ್ರಕಟಿಸಿದ ಟೀಮ್ ಇಂಡಿಯಾ ಚಿತ್ರದಲ್ಲಿ ನಾಯಕ ವಿರಾಟ್ ಕೊಹ್ಲಿಯ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮ ಕೂಡ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದು ರಾಷ್ಟ್ರೀಯ ಕ್ರಿಕೆಟ್ ತಂಡದ ಅಧಿಕೃತ ಕಾರ್ಯಕ್ರಮ, ಇದರಲ್ಲಿ ಅನುಷ್ಕಾ ಶರ್ಮ ಭಾಗವಹಿಸಿದ್ದೇಕೆ? ಅನುಷ್ಕಾ ಶರ್ಮ ಕೂಡ ಟೀಮ್ ಇಂಡಿಯಾದ ಭಾಗವಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಸಿಸಿಐ ಪ್ರಕಟಿಸಿರುವ ಚಿತ್ರಕ್ಕೆ ಪರ-ವಿರೋಧದ ಹಲವು ಪ್ರತಿಕ್ರಿಯೆಗಳು ಬಂದಿದ್ದರೂ, ಹೆಚ್ಚಿನವರು ಅನುಷ್ಕಾ ಶರ್ಮ ಟೀಮ್ ಇಂಡಿಯಾದ ಅಧಿಕೃತ ಔತಣ ಕೂಟದ ಭಾಗವಾಗಿರುವುದು ತಪು್ಪ ಎಂದು ಹೇಳಿದ್ದಾರೆ. ಅದಲ್ಲದೆ, ಬಿಸಿಸಿಐ ಈಗಾಗಲೇ ತಂಡದ ಆಟಗಾರರ ಜತೆ ಇರಲು ಪತ್ನಿಯರಿಗೆ ಬ್ಯಾನ್ ಮಾಡಿದ್ದು, 3ನೇ ಟೆಸ್ಟ್ ಪಂದ್ಯದ ಬಳಿಕವಷ್ಟೇ ಆಟಗಾರರನ್ನು ಕೂಡಿಕೊಳ್ಳಬಹುದು ಎಂದು ಸೂಚನೆ ನೀಡಿದೆ. ಹಾಗಿದ್ದರೂ, ಅನುಷ್ಕಾ ಶರ್ಮ, ವಿರಾಟ್ ಕೊಹ್ಲಿ ಜತೆ ಇಂಗ್ಲೆಂಡ್​ನಲ್ಲಿ ಉಳಿದುಕೊಳ್ಳಲು ಅನುಮತಿ ಹೇಗೆ ಸಿಕ್ಕಿದೆ. ಇದು ತಾರತಮ್ಯಕ್ಕೆ ಎಡೆ ಮಾಡಿಕೊಡುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಭಾರತ ತಂಡ ವಿದೇಶ ಪ್ರವಾಸಕ್ಕೆ ಹೋದಾಗ ರಾಯಭಾರಿ ಕಚೇರಿಯ ಕಾರ್ಯಕ್ರಮಗಳಿಗೆ ಟೀಮ್ ಇಂಡಿಯಾ ಆಟಗಾರರೊಂದಿಗೆ ಅವರ ಕುಟುಂಬಕ್ಕೂ ಆಹ್ವಾನವಿರುತ್ತದೆ. ಆದರೆ, ಲಂಡನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಳಿದೆಲ್ಲ ಆಟಗಾರರು ಏಕಾಂಗಿಯಾಗಿ ಬಂದಿದ್ದರೆ, ಕೊಹ್ಲಿ ಮಾತ್ರವೇ ಪತ್ನಿಯ ಜತೆ ಬಂದಿದ್ದರು. ಅದಲ್ಲದೆ, ಅನುಷ್ಕಾ ಶರ್ಮಗೆ ಚಿತ್ರದಲ್ಲಿ ಮೊದಲ ಸಾಲಿನಲ್ಲಿ ಸ್ಥಾನ ನೀಡಲಾಗಿದೆ. ತಂಡದ ಉಪನಾಯಕ ಅಜಿಂಕ್ಯ ರಹಾನೆ ಕೊನೆಯ ಸಾಲಿನಲ್ಲಿ ನಿಂತಿದ್ದು, ಅವರ ಮುಖ ಸಹ ಕಾಣದೇ ಇರುವುದು ಇನ್ನಷ್ಟು ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ. –ಏಜೆನ್ಸೀಸ್