ಟೀಂ ಇಂಡಿಯಾ ಜತೆ ಫೋಟೊ: ಟ್ರೋಲ್‌ಗಳಿಗೆ ಅನುಷ್ಕಾ ಶರ್ಮಾ ಕೊಟ್ಟ ಉತ್ತರ ಹೀಗಿದೆ

ಮುಂಬೈ: ಲಂಡನ್‌ನ್ ನಲ್ಲಿ ಟೀಂ ಇಂಡಿಯಾ ಜತೆ ಗ್ರೂಪ್ ಫೋಟೊದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಮತ್ತು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿರುದ್ಧ ನೆಟ್ಟಿಗರಿಂದ ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿಯೇ ಪ್ರತಿಕ್ರಿಯಿಸಿರುವ ಅನುಷ್ಕಾ, ನಾನು ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿ, ಪೋಟೊ ಸಂಬಂಧ ಪ್ರತಿಕ್ರಿಯಿಸಬೇಕಿರುವವರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಇದೆಲ್ಲ ಟ್ರೋಲಿಗರ ಕೆಲಸ ಮತ್ತು ಟ್ರೋಲ್‌ಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

ವಿರಾಟ್‌ ಕೊಹ್ಲಿ ಮತ್ತು ಟೀಂ ಇಂಡಿಯಾದ ಆಟಗಾರರು ಬಿಸಿಸಿಐನ ನಿಯಮಾವಳಿ ಪ್ರಕಾರವೇ ಔತಣಕೂಟದಲ್ಲಿ ಭಾಗವಹಿಸಿದ್ದರು. ಈಗ ಏನೇ ಸಂಭವಿಸಿದ್ದರೂ ಅದು ಭಾರತೀಯ ಕ್ರಿಕೆಟ್‌ ಮಂಡಳಿಯ ಮಾರ್ಗದರ್ಶಿ ಸೂತ್ರದ ಅನುಸಾರವಾಗಿಯೇ ಇದೆ. ಇದಕ್ಕಿಂತ ಹೆಚ್ಚಿಗೆ ಈ ವಿಚಾರದಲ್ಲಿ ಇನ್ನೇನು ಹೇಳಲಾರೆ. ಚಿಕ್ಕದೊಂದು ವಿಚಾರವನ್ನು ಇಟ್ಟುಕೊಂಡು ಬಹುದೊಡ್ಡ ವಿವಾದವನ್ನು ಸೃಷ್ಟಿಸಬೇಡಿ ಎಂದು ಮನವಿ ಮಾಡಿದ್ದರು.

ಅನುಷ್ಕಾ ಮತ್ತು ಅವರ ಪತಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಲಂಡನ್ ನ ಭಾರತೀಯ ಹೈಕಮಿಷನರ್ ಕಚೇರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಏರ್ಪಡಿಸಿದ್ದ ವಿಶೇಷ ಔತಣಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ತೆಗೆದಿದ್ದ ಭಾರತ ಕ್ರಿಕೆಟ್‌ ತಂಡದ ಜತೆಗಿನ ಫೋಟೋವನ್ನು ಕಳೆದ ವಾರ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿತ್ತು. ಈ ಫೋಟೊ ವೈರಲ್‌ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಬಿಸಿಸಿಐ ವಿರುದ್ಧ ಕಿಡಿಕಾರಿದ್ದರು. (ಏಜೆನ್ಸೀಸ್)