ಬೆಂಗಳೂರು: ‘ತ್ರಯಂಬಕಂ’ ನಂತರ ಅನುಪಮಾ ಗೌಡ ನಟಿಸಿರುವ ಇನ್ನೊಂದು ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಅದೇ ‘ಬೆಂಕಿಯಲ್ಲಿ ಅರಳಿದ ಹೂವು’. ಈ ಚಿತ್ರ ಒಂದೂವರೆ ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು, ಕಾರಣಾಂತರಗಳಿಂದ ಬಿಡುಗಡೆ ಸ್ವಲ್ಪ ತಡವಾಗಿದೆ.
‘ಬೆಂಕಿಯಲ್ಲಿ ಅರಳಿದ ಹೂವು’ ಎಂದರೆ ಕನ್ನಡಿಗರಿಗೆ ನೆನಪಾಗುವುದು ಕೆ. ಬಾಲಚಂದರ್ ನಿರ್ದೇಶನದಲ್ಲಿ ಸುಹಾಸಿನಿ ಅಭಿನಯಿಸಿರುವ ಚಿತ್ರ. 80ರ ದಶಕದಲ್ಲಿ ಬಿಡುಗಡೆಯಾದ ಆ ಚಿತ್ರ ಯಶಸ್ವಿಯಾಗುವುದಷ್ಟೇ ಅಲ್ಲ, ಎಲ್ಲರಿಂದ ಮೆಚ್ಚುಗೆ ಪಡೆದಿತ್ತು. ಈಗ ಅದೇ ಹೆಸರಿನ ಇನ್ನೊಂದು ಚಿತ್ರ ಎಂದರೆ, ಅದರ ರೀಮೇಕ್ ಇರಬಹುದಾ ಎಂಬ ಪ್ರಶ್ನೆ ಬರಬಹುದು. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ ಅನುಪಮಾ.
ಇತ್ತೀಚೆಗೆ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅನುಪಮಾ, ‘ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಹೆಸರು ಒಂದೇ ಎನ್ನುವುದು ಬಿಟ್ಟರೆ, ಎರಡೂ ಕಥೆಗಳು ಬೇರೆ ಬೇರೆ. ಇನ್ನು ಆ ಚಿತ್ರದೊಂದಿಗೆ ಹೋಲಿಸುವುದು ಸಹಜ. ಅದರಲ್ಲೂ ಸುಹಾಸಿನಿ ಮೇಡಮ್ ಮತ್ತು ನನ್ನ ಪಾತ್ರ ಮತ್ತು ಅಭಿನಯದ ಬಗ್ಗೆ ಹೋಲಿಕೆ ಆಗಬಹುದು. ದಯವಿಟ್ಟು ಆ ಹೋಲಿಕೆ ಬೇಡ. ಎರಡೂ ಚಿತ್ರಗಳು ವಿಭಿನ್ನವಾಗಿವೆ.
ಸಾಕಷ್ಟು ನಟಿಯರಿಂದ ಸ್ಪೂರ್ತಿಗೊಂಡು ಈ ಪಾತ್ರ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ನಟಿಯರು ಇತಿಹಾಸ ಸೃಷ್ಟಿಸಿದ್ದಾರೆ. ನಮಗೆ ಆ ಮಟ್ಟಕ್ಕೆ ತಲುಪುವುದಕ್ಕೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ ಅನುಪಮಾ. ಈ ಚಿತ್ರದಲ್ಲಿ ಅನುಪಮಾ, ಗಾರ್ವೆಂಟ್ಸ್ನಲ್ಲಿ ಕೆಲಸ ಮಾಡುವ ಯುವತಿಯ ಪಾತ್ರ ಮಾಡಿದ್ದಾರೆ. ಆ ಕಡೆ ಸಾಂಸಾರಿಕ ಜೀವನದಲ್ಲಿ ಸಾಕಷ್ಟು ಏರು-ಪೇರುಗಳನ್ನು ಎದುರಿಸುವುದರ ಜತೆಗೆ, ಕೆಲಸದಲ್ಲಿ ಆಕೆ ಏನೆಲ್ಲ ಎದುರಿಸುತ್ತಾಳೆ ಎನ್ನುವುದು ಚಿತ್ರದ ಕಥೆ. ಹಿಂದೊಮ್ಮೆ ಅನುಪಮಾ ಅವರ ತಾಯಿ, ಗಾರ್ವೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರಂತೆ. ‘ಅವರನ್ನು ಹತ್ತಿರದಿಂದ ನೋಡಿದ್ದರಿಂದ ಎಷ್ಟೋ ಕಡೆ ಅಭಿನಯಿಸುವ ಪ್ರಮೇಯ ಇರಲಿಲ್ಲ. ಆ ದೃಶ್ಯವನ್ನು ಅರ್ಥ ಮಾಡಿಕೊಂಡರೆ ಅಭಿನಯ ಸಹಜವಾಗಿಯೇ ಮೂಡಿಬರುತಿತ್ತು’ ಎನ್ನುತ್ತಾರೆ ಅನುಪಮಾ. ‘ಅಂದಿನ ‘ಬೆಂಕಿಯಲ್ಲಿ ಅರಳಿದ ಹೂವು’ ಲೆಜೆಂಡ್ ಸಿನಿಮಾ. ಅದಕ್ಕೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಹಿತೈಷಿಗಳು ಕೆಲವರು ಟೈಟಲ್ ಬದಲಾಯಿಸಲು ಸೂಚಿಸಿದ್ದರಿಂದ, ಶೀರ್ಷಿಕೆ ಬದಲಿಸಲೂ ಯೋಚಿಸಿದ್ದೆವು. ಆದರೆ ನಮ್ಮ ತಂಡದ ಪರಿಶ್ರಮದ ಮೇಲಿನ ನಂಬಿಕೆಯಿಂದ ಅದೇ ಶೀರ್ಷಿಕೆ ಉಳಿಸಿಕೊಂಡು ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದೇವೆ’ ಎನ್ನುತ್ತ ಸಿನಿಮಾ ಬಗ್ಗೆ ಹೇಳಿಕೊಂಡರು ನಿರ್ದೇಶಕ ದೇವಿಶ್ರೀ ಪ್ರಸಾದ್. ವಿಶು ಆಚಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಡಾ. ದೊಡ್ಡರಂಗೇಗೌಡ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಇರುವ ಈ ಸಿನಿಮಾಗೆ ವಿ. ಮನೋಹರ್ ಸಂಗೀತ ಸಂಯೋಜಿಸಿದ್ದಾರೆ.