ಅನುಪಾಲನಾ ವರದಿ ನೀಡದ್ದಕ್ಕೆ ಗರಂ: ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ತಾಪಂ ಅಧ್ಯಕ್ಷೆ ಸೂಚನೆ

blank

ನೆಲಮಂಗಲ: ಅಧಿಕಾರಿಗಳು ಇಲಾಖೆ ಯೋಜನೆ ಮಾಹಿತಿಗಳನ್ನು ಸಾರ್ವಜನಿಕರ ಜತೆಗೆ ಜನಪ್ರತಿನಿಧಿಗಳಿಗೂ ನೀಡಿದರೆ ಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಸಹಕಾರಿ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಗೋವಿಂದರಾಜು ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸರ್ವಸದಸ್ಯರ ಸಾಮಾನ್ಯಸಭೆಯಲ್ಲಿ ಮಾತನಾಡಿದರು.

ಹಿಂದಿನ ಸಭೆಯಲ್ಲಿ ಚರ್ಚಿಸಿದ್ದ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತ ಅನುಪಾಲನಾ ವರದಿಯನ್ನು ಮುಂದಿನ ಸಭೆಯೊಳಗೆ ನೀಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ವರದಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅನುಪಾಲನಾ ವರದಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಸರ್ಕಾರಿ ಶಾಲೆಗಳಲ್ಲಿನ ಕೆಲ ಶಿಕ್ಷಕರು ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ತಾರತಮ್ಯ ಮಾಡುತ್ತಿರುವ ಬಗ್ಗೆ ಉಪಾಧ್ಯಕ್ಷ ಬಿಂಧುರಂಗನಾಥ್ ಸಭೆಯ ಗಮನಕ್ಕೆ ತಂದರು. ತಾಲೂಕಿನ ಎಲೆಕ್ಯಾತನಹಳ್ಳಿಯಲ್ಲಿನ ಆರೋಗ್ಯಕೇಂದ್ರವನ್ನು ಮರಳುಕುಂಟೆ ಗ್ರಾಮಪಂಚಾಯಿತಿ ಕೇಂದ್ರ ಸ್ಥಾನಕ್ಕೆ ಸ್ಥಳಾಂತರಿಸುವಲ್ಲಿ ವಿಳಂಬವಾಗುತ್ತಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಸದಸ್ಯ ನಾಗಭೂಷಣ್ ಮನವಿ ಮಾಡಿದರು.

ಕಂದಾಯ ಇಲಾಖೆಯಿಂದ ಸರ್ಕಾರಿ ಜಾಗಗಳ ಒತ್ತುವರಿ ತೆರವುಗೊಳಿಸದಿರುವುದು, ಅಂಗನವಾಡಿ, ಶಾಲೆ, ಆರೋಗ್ಯ ಕೇಂದ್ರ ಇನ್ನಿತರ ಸರ್ಕಾರದ ಕಟ್ಟಡ ನಿರ್ಮಿಸಲು ದಾನ ನೀಡಿದ್ದ ಜಾಗಗಳನ್ನು ದಾನಿಗಳ ಕುಟುಂಬದವರೇ ಹಿಂಪಡೆಯುತ್ತಿರುವ ವಿಚಾರಗಳು ಸಭೆಯಲ್ಲಿ ಪ್ರಸ್ಥಾಪವಾದವು.

ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರ ಕೊರತೆ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳದಿರುವುದು ಸಭೆಯಲ್ಲಿ ಪ್ರತಿಧ್ವನಿಸಿತು.

ತಾಪಂ ಇಒ ಲಕ್ಷ್ಮೀನಾರಾಯಣ್ ಮಾತನಾಡಿ, ಅಧಿಕಾರಿಗಳು ಸರ್ಕಾರದ ಸೌಲಭ್ಯಗಳ ಸಮಗ್ರ ಮಾಹಿತಿ ಇರುವ ಕರಪತ್ರಗಳನ್ನು ಮುದ್ರಿಸಿ ಚುನಾಯಿತ ಸದಸ್ಯರಿಗೆ ತಲುಪಿಸುವ ಜತೆಗೆ ಯೋಜನೆಗಳಡಿ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಆಯಾಕ್ಷೇತ್ರದಲ್ಲಿರುವ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು ಎಂದರು.
ಸರ್ಕಾರಿ ಸ್ವಾಮ್ಯದ ಸ್ವತ್ತುಗಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಇಲಾಖೆಗಳ ವಶಕ್ಕೆ ಪಡೆಯುವುದು ಸೇರಿದಂತೆ ಸ್ವಂತಜಾಗದಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ದತಿ ಅಳವಡಿಸಬೇಕು ಎಂದು ತಿಳಿಸಿದರು.

ಸದಸ್ಯರ ಬೇಸರ: ಸೋಮವಾರ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ ಒಂದೂವರೆ ಗಂಟೆ ವಿಳಂಬವಾಗಿದ್ದು, ಸದಸ್ಯರ ಬೇಸರಕ್ಕೆ ಕಾರಣವಾಯಿತು. ಸಭೆಯಲ್ಲಿ ಸದಸ್ಯರು ಚರ್ಚಿಸುವ ಕೆಲ ವಿಚಾರಗಳನ್ನು ಸಭೆಯ ನಡವಳಿಯಲ್ಲಿ ಸಮರ್ಪಕವಾಗಿ ದಾಖಲು ಮಾಡುತ್ತಿಲ್ಲದಿರುವುದು ಸಮಸ್ಯೆಗಳ ಪರಿಹಾರವಾಗುತ್ತಿಲ್ಲ ಎಂದು ಸದಸ್ಯ ಪ್ರಕಾಶ್ ಆರೋಪಿಸಿದರು.

ಮೃತರ ಅಂತ್ಯಕ್ರಿಯೆಗಿಲ್ಲ ಸ್ಮಶಾನ: ತಾಲೂಕಿನ ದಾಬಸ್‌ಪೇಟೆ ಸುತ್ತಮುತ್ತಲ ರೈತರ ಭೂಮಿಯ ಜತೆಗೆ ಸರ್ಕಾರಿ ಜಾಗಗಳನ್ನು ಕೈಗಾರಿಕಾಭಿವೃದ್ಧಿ ಮಂಡಳಿ ಸ್ವಾಧೀನಪಡಿಸಿಕೊಂಡಿದ್ದು, ಹಳ್ಳಿಗಳಲ್ಲಿ ಮೃತರ ಅಂತ್ಯಕ್ರಿಯೆಗೆ ಸ್ಮಶಾನವಿಲ್ಲದಂತಾಗಿದೆ. ಸ್ಮಶಾನಕ್ಕೆ ಜಾಗ ಸರ್ಕಾರದಿಂದ ಮಂಜೂರಾಗಿದ್ದರೂ ಕಂದಾಯ ಇಲಾಖೆ ಈ ಬಗ್ಗೆ ಗಮನಹರಿಸುತ್ತಿಲ್ಲ. ಮತ್ತೊಂದೆಡೆ ಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನಿನಲ್ಲಿರುವ ಮರಗಿಡಗಳಿಗೆ ಬೆಲೆ ನಿಗದಿಪಡಿಸುವಲ್ಲಿ ಕೆಐಡಿಬಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಚಂದ್ರಶೇಖರ್ ಗಮನ ಸೆಳೆದರು.
ಟಿ.ಬೇಗೂರು ಗ್ರಾಮದ ಸ.ನಂ.246ರಲ್ಲಿ ಸರ್ಕಾರಿ ಜಾಗದಲ್ಲಿ ನಿವೇಶನ ಹಂಚಿಕೆ ಮಾಡುವಂತೆ ಸರ್ಕಾರದಿಂದ ಬಂದಿರುವ ಆದೇಶದನ್ವಯ ಅಗತ್ಯಕ್ರಮಕೈಗೊಳ್ಳುವಂತೆ ಸದಸ್ಯ ಮುನಿರಾಜು ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷ ಬಿ.ರಂಗನಾಥ್, ಸದಸ್ಯರಾದ ಬೆಟ್ಟೆಗೌಡ, ಟಿ.ವೆಂಕಟೇಗೌಡ, ರುದ್ರೇಶ್, ಸಲೀಂಪಾಷ, ಶಿವಕುಮಾರಿ, ಅನಿತಾ, ಭಾಗ್ಯಮ್ಮ, ಶಿವಮ್ಮ, ಶಾರದಮ್ಮ, ನರಸೀಪುರ ಗ್ರಾಪಂ ಅಧ್ಯಕ್ಷ ನಾಗರಾಜು, ಅಗಲುಕುಪ್ಪೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಹಸಿರುವಳ್ಳಿ ನರಸಿಂಹಮೂರ್ತಿ, ಶಿವಗಂಗೆ ಗ್ರಾಪಂ ಅಧ್ಯಕ್ಷ ಹನುಮಂತರಾಜು ಮತ್ತಿತರರು ಇದ್ದರು.

Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…