ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾದಿಂದ ಬಿಡುಗಡೆಯಾದ ಮೊದಲ ಗೀತೆ ‘ರಾ ರಾ ರಕ್ಕಮ್ಮ..’ ಸಾಹಿತ್ಯದ ಮೂಲಕ ಮೋಡಿ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ, ಇದೇ ಚಿತ್ರದ ಎರಡನೇ ಗೀತೆಯ ಮೂಲಕ ಮತ್ತೊಂದು ಮಜಲನ್ನು ಏರಿದ್ದಾರೆ.
ಅದೇನೆಂದರೆ ‘ವಿಕ್ರಾಂತ್ ರೋಣ’ ಚಿತ್ರದಿಂದ ಎರಡನೆಯದಾಗಿ ಬಿಡುಗಡೆಯಾಗಿರುವ ‘ರಾಜಕುಮಾರಿ’ ಹಾಡಿನ ಮೂಲಕ ಅನೂಪ್ ಭಂಡಾರಿ ಹಿಂದಿ ಚಿತ್ರರಂಗಕ್ಕೆ ಮತ್ತೊಂದು ರೀತಿಯಲ್ಲಿ ಪ್ರವೇಶ ಮಾಡಿದ್ದಾರೆ. ಈ ಜೋಗುಳದ ಹಾಡಿನ ಮೂಲಕ ಅವರು ಚಿತ್ರಸಾಹಿತಿಯಾಗಿ ಬಾಲಿವುಡ್ಗೆ ಮೊದಲ ಹೆಜ್ಜೆ ಇರಿಸಿದ್ದಾರೆ.
‘ರಾಜಕುಮಾರಿ’ ಗೀತೆಯ ಕನ್ನಡ ಆವೃತ್ತಿ ಜುಲೈ 2ರಂದು ಬಿಡುಗಡೆ ಆಗಿದ್ದು, ಜು. 3ರಂದು ಇದರ ಮಲಯಾಳಂ, ಜು. 4ರಂದು ತೆಲುಗು ಆವೃತ್ತಿ ಬಿಡುಗಡೆ ಆಗಿದ್ದು, ಇಂದು ಹಿಂದಿ ವರ್ಷನ್ ಬಿಡುಗಡೆ ಆಗಿದೆ. ವಿಶೇಷವೆಂದರೆ ಕನ್ನಡದ ಮೂಲ ‘ರಾಜಕುಮಾರಿ’ ಗೀತೆಯನ್ನು ಬರೆದಿದ್ದ ಅನೂಪ್, ತಾವೇ ಅದನ್ನು ಹಿಂದಿಯಲ್ಲೂ ಬರೆದಿದ್ದಾರೆ. ನಾಳೆ ಇದೇ ಹಾಡಿನ ತಮಿಳು ವರ್ಷನ್ ಬಿಡುಗಡೆ ಆಗಲಿದೆ.
‘ಹಿಂದಿಯಲ್ಲಿ ನಾನು ಬರೆಯುವ ಯೋಚನೆ ಇರಲಿಲ್ಲ. ಹಿಂದಿಯ ಚಿತ್ರಸಾಹಿತಿಗಳಿಂದ ಯಾರಿಂದಲಾದರೂ ಇದರ ಹಿಂದಿಯ ವರ್ಷನ್ ಬರೆಸಬೇಕು ಎಂದುಕೊಂಡು ನಾನು ಹಿಂದಿಯಲ್ಲಿ ಇದನ್ನು ಅನುವಾದಿಸಿದ್ದೆ. ಅದು ಚೆನ್ನಾಗಿದೆ ಅನಿಸಿತು, ಮಾತ್ರವಲ್ಲ ಅದು ಎಲ್ಲರಿಗೂ ಇಷ್ಟ ಆಯಿತು. ಹೀಗಾಗಿ ‘ಗಡಂಗ್ ರಕ್ಕಮ್ಮ’ ಸಾಂಗ್ ಒಂದನ್ನು ಬಿಟ್ಟು ಈ ಚಿತ್ರದ ಎಲ್ಲ ಗೀತೆಯನ್ನು ಹಿಂದಿಯಲ್ಲೂ ನಾನೇ ಬರೆದಿದ್ದೇನೆ’ ಎಂದು ಅನೂಪ್ ಭಂಡಾರಿ ತಿಳಿಸಿದ್ದಾರೆ.
‘ಜೇಮ್ಸ್’ ಚಿತ್ರದ ನಿರ್ಮಾಪಕ ಅಸ್ವಸ್ಥ; ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು