ಒಮ್ಮೆ ಶ್ರೀಕೃಷ್ಣ-ಅರ್ಜುನರು ಲೋಕಾಭಿರಾಮ ಮಾತನಾಡುತ್ತಿದ್ದರು. ಮಾತಿನ ಮಧ್ಯೆ ಅರ್ಜುನನು, ‘ಕೃಷ್ಣ, ಕರ್ಣನ ಔದಾರ್ಯವನ್ನು ಎಲ್ಲರೂ ಪ್ರಶಂಸಿಸುತ್ತಾರೆ. ನಾನೂ ಬೇಕಾದಷ್ಟು ದಾನ ಮಾಡಿದ್ದೇನೆ’ ಎಂದನು. ಕೃಷ್ಣನು ನಸುನಗುತ್ತ, ‘ಇಲ್ಲ ಪಾರ್ಥ. ದಾನದಲ್ಲಿ ನೀನು ಎಂದಿಗೂ ಕರ್ಣನನ್ನು ಮೀರಿಸಲಾರೆ’ ಎಂದುಬಿಟ್ಟನು. ಇದರಿಂದ ಅರ್ಜುನನಿಗೆ ಬೇಸರವಾಯಿತು. ಕರ್ಣನನ್ನು ಕಂಡರೆ ಅರ್ಜುನನಿಗೆ ಮಾತ್ಸರ್ಯವಿದೆ ಎಂದರಿತ ಕೃಷ್ಣ, ಅವನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದನು.
ಕೃಷ್ಣನು ‘ಪಾರ್ಥ, ನಾಳೆ ಒಂದು ಸ್ಪರ್ಧೆ ಏರ್ಪಡಿಸುತ್ತೇನೆ. ಅದರಲ್ಲಿ ಕರ್ಣ ಮತ್ತು ನಿನ್ನಲ್ಲಿ ಯಾರು ಗೆಲ್ಲುತ್ತಾರೋ ನೋಡೋಣ’ ಎಂದನು. ಮರುದಿನ ಕೃಷ್ಣನು ಚಿನ್ನ ಹಾಗೂ ಬೆಳ್ಳಿ ಗಟ್ಟಿಗಳ ಎರಡು ಬೆಟ್ಟಗಳನ್ನು ಸೃಷ್ಟಿಸಿ, ‘ಸಂಜೆಯೊಳಗೆ ಈ ಎರಡೂ ಬೆಟ್ಟಗಳನ್ನು ದಾನ ಮಾಡಿ ಮುಗಿಸಿದರೆ ಕರ್ಣನಿಗೆ ಸಮ ಎಂದು ಒಪ್ಪುತ್ತೇನೆ’ ಎಂದನು. ‘ಇದನ್ನು ಸುಲಭವಾಗಿ ಮಾಡುತ್ತೇನೆ’ ಎಂದ ಅರ್ಜುನನು ದಾರಿಯಲ್ಲಿ ಬರುವ ಜನರನ್ನು ಕರೆದು ಕರೆದು ಸಾಕಷ್ಟು ಚಿನ್ನ-ಬೆಳ್ಳಿ ಗಟ್ಟಿಗಳನ್ನು ಕೊಟ್ಟನು. ಆದರೂ ಸಂಜೆಯ ವೇಳೆಗೆ ಪೂರ್ಣವಾಗಿ ದಾನ ಮಾಡಲಾಗಲಿಲ್ಲ. ಅವನು ದುಃಖದಿಂದ, ‘ಕೃಷ್ಣ, ಸೋತೆ, ಕ್ಷಮಿಸು’ ಎಂದು ಪ್ರಾರ್ಥಿಸಿದನು. ಕೃಷ್ಣನು ನಗುತ್ತಾ, ‘ನೋಡು, ಕರ್ಣನಾಗಿದ್ದರೆ ಯಾವಾಗಲೋ ಕೊಟ್ಟು ಮುಗಿಸುತ್ತಿದ್ದ’ ಎಂದನು. ಮೊದಲೇ ಸೋತು ಬೇಸರದಲ್ಲಿದ್ದ ಅರ್ಜುನನಿಗೆ ಈ ಮಾತುಗಳನ್ನು ಕೇಳಲು ಸಾಧ್ಯವಾಗದೆ, ‘ನಿಲ್ಲಿಸು ಕೃಷ್ಣ. ಕರ್ಣನೂ ಈ ಪರೀಕ್ಷೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ’ ಎಂದನು. ಕೃಷ್ಣನು ಹೇಳಿಕಳುಹಿಸಿದ್ದರಿಂದ ಬಂದ ಕರ್ಣನು ಆತನಿಗೆ ನಮಸ್ಕರಿಸಿದ. ಕೃಷ್ಣನು, ‘ಕರ್ಣ, ಅಲ್ಲಿ ನೋಡು. ಚಿನ್ನ ಮತ್ತು ಬೆಳ್ಳಿ ಗಟ್ಟಿಗಳುಳ್ಳ ಎರಡು ಬೆಟ್ಟಗಳಿವೆ. ರಾತ್ರಿಯಾಗುವುದರೊಳಗೆ ದಾನ ಮಾಡಿ ಮುಗಿಸುವೆಯಾ?’ ಎಂದು ಪ್ರಶ್ನಿಸಿದನು. ಅದಕ್ಕೆ ಸಮ್ಮತಿಸಿದ ಕರ್ಣನು ದಾರಿಯಲ್ಲಿ ಹೋಗುತ್ತಿದ್ದ ಇಬ್ಬರನ್ನು ಕರೆದು, ‘ಅಲ್ಲಿ ಎರಡು ಬೆಟ್ಟಗಳಿವೆ. ಒಂದು ಬೆಳ್ಳಿಯದು. ಇನ್ನೊಂದು ಚಿನ್ನದ್ದು. ನಿಮ್ಮಿಬ್ಬರಿಗೂ ಒಂದೊಂದು ಬೆಟ್ಟದ ರಾಶಿಯನ್ನು ದಾನ ಮಾಡಿರುವೆ. ಇದರಿಂದ ಸಂತೋಷವಾಗಿರಿ’ ಎಂದು ದಾನ ಮಾಡಿ ಮುಗಿಸಿದನು. ಅವರು ಸಂತೋಷದಿಂದ ದಾನವೀರ ಕರ್ಣನಿಗೆ ಜಯವಾಗಲಿ ಎನ್ನುತ್ತ ಹೋದರು.
‘ನೀನು ಹೇಳಿದ ಕೆಲಸ ಮುಗಿಸಿರುವೆ. ನನಗೆ ಹೋಗಲು
ಅನುಮತಿ ನೀಡು’ ಎಂದು ಕರ್ಣನು ಕೃಷ್ಣನಿಗೆ ಹೇಳಿ ಹೊರಟನು. ಅರ್ಜುನನಿಗೆ ತನ್ನ ತಪ್ಪಿನ ಅರಿವಾಯಿತು.