ಸಿಖ್​ ವಿರೋಧಿ ದಂಗೆಯಲ್ಲಿ 88 ಜನರಿಗೆ ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್​

ನವದೆಹಲಿ: ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ನಡೆದಿದ್ದ ಸಿಖ್​ ವಿರೋಧಿ ಗಲಭೆ ಪ್ರಕರಣದಲ್ಲಿ 88 ಜನರಿಗೆ ದೆಹಲಿ ಸ್ಥಳೀಯ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಹೈಕೋರ್ಟ್​ ಎತ್ತಿಹಿಡಿದಿದೆ.

ಇದನ್ನೊಂದು ಮಹತ್ವದ ತೀರ್ಪು ಎಂದು ಪರಿಗಣಿಸಲಾಗಿದೆ ಎಂದು ಹೇಳಿರುವ ಹಿರಿಯ ವಕೀಲ ಎಚ್​.ಎಸ್​.ಫುಲ್ಕಾ, ಗಲಭೆಯಲ್ಲಿ 95 ಜನರು ಮೃತಪಟ್ಟಿದ್ದು ಅವರ ದೇಹಗಳು ಸಿಕ್ಕಿವೆ. ಆದರೆ, ಈ 88 ಜನರಲ್ಲಿ ಯಾರೊಬ್ಬರೂ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ ಎಂದಿದ್ದಾರೆ.

ಇಂದಿರಾಗಾಂಧಿಯವರನ್ನು ಅವರ ಬಾಡಿಗಾರ್ಡ್​ ಆಗಿದ್ದ ಸಿಖ್​ ಜನಾಂಗದವನೇ 1984ರಲ್ಲಿ ಹತ್ಯೆಗೈದ ಬಳಿಕ ಈ ಸಿಖ್​ ವಿರೋಧಿ ದಂಗೆ ದೇಶಾದ್ಯಂತ ಎದ್ದಿತ್ತು.

ಸಿಖ್​ರೇ ಹೆಚ್ಚಾಗಿರುವ ದೆಹಲಿಯ ತ್ರಿಲೋಕ್​ಪುರಿಯಲ್ಲಿ ತುಂಬ ದೊಡ್ಡ ಪ್ರಮಾಣದಲ್ಲಿ ಗಲಭೆಯಾಗಿ ಸುಮಾರು 95 ಜನರು ಮೃತಪಟ್ಟಿದ್ದರು. 100 ಮನೆಗಳಿಗೆ ಬೆಂಕಿ ಇಡಲಾಗಿತ್ತು.

ಗಲಭೆಗೆ ಸಂಬಂಧಪಟ್ಟಂತೆ 100 ಜನರನ್ನು ಬಂಧಿಸಲಾಗಿತ್ತು. ಅದರಲ್ಲಿ 88 ಜನರು ದೋಷಿಗಳು ಎಂದು 1996ರಲ್ಲಿ ದೆಹಲಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಆ 88 ಜನರಲ್ಲಿ ಕೆಲವರು ಈಗಾಗಲೇ ಮೃತಪಟ್ಟಿದ್ದು ಉಳಿದವರು ಶಿಕ್ಷೆಯನ್ನು ಪ್ರಶ್ನಿಸಿ ದೆಹಲಿ ಹೈ ಕೋರ್ಟ್​ ಮೊರೆ ಹೋಗಿದ್ದರು. ಈಗ ಹೈಕೋರ್ಟ್ ಕೂಡ 88 ಜನರ ವಿರುದ್ಧ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ.