ನ್ಯಾಯಪ್ರಾಪ್ತಿಗಾಗಿ ಸುದೀರ್ಘ ಹೋರಾಟ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಸಿಖ್ ವಿರೋಧಿ ಗಲಭೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಮಂಗಳವಾರ ಶಿಕ್ಷೆ ಪ್ರಕಟವಾಗಿದೆ. ಓರ್ವನಿಗೆ ಗಲ್ಲು ಹಾಗೂ ಮತ್ತೋರ್ವನಿಗೆ ಜೀವಿತಾವಧಿ ಜೈಲು ಶಿಕ್ಷೆಯನ್ನು ಪಟಿಯಾಲ ವಿಶೇಷ ಕೋರ್ಟ್ ವಿಧಿಸಿದೆ. ತನ್ನಿಮಿತ್ತ 1984ರ ಸಿಖ್ ಗಲಭೆ ಪ್ರಕರಣದ ತನಿಖೆಯ ಅವಲೋಕನ ಇಲ್ಲಿದೆ.

1984ರ ಅಕ್ಟೋಬರ್ 31ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಬೆಂಗಾವಲು ಪಡೆಯ ನಾಲ್ವರು ಸಿಖ್​ರೇ ಹತ್ಯೆ ಮಾಡಿದರು. ಈ ಹತ್ಯೆಗೆ ಪ್ರತೀಕಾರವಾಗಿ 1984ರ ಅ.31ರಿಂದ ನ.3ರವರೆಗೆ ಸಿಖ್​ರ ಮೇಲೆ ದಾಳಿ ನಡೆಯಿತು. ಪರಿಣಾಮ, ಸಾವಿರಾರು ಜನರು ಸಾವಿಗೀಡಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಯಿತು. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಈ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 3,325. ಈ ಪೈಕಿ 2,733 ಜನರು ದೆಹಲಿಯಲ್ಲಿ ನಡೆದ ಗಲಭೆಗಳಲ್ಲಿ ಮೃತರಾದರು. ಸಿಖ್ ಹೋರಾಟಗಾರರ ಪ್ರಕಾರ ಗಲಭೆಗೆ ಬಲಿಯಾದವರ ಸಂಖ್ಯೆ 10 ಸಾವಿರಕ್ಕಿಂತಲೂ ಹೆಚ್ಚು.

ಹಲವು ತನಿಖಾ ತಂಡ-ಸಮಿತಿ

ಸಿಖ್ ವಿರೋಧಿ ಗಲಭೆೆ ಸಂಬಂಧ ಕಳೆದ 3 ದಶಕಗಳಲ್ಲಿ ಹಲವು ತನಿಖಾ ತಂಡಗಳು ಹಾಗೂ ಸಮಿತಿಗಳು ವಿಚಾರಣೆ ನಡೆಸಿ ವರದಿ ನೀಡಿವೆ. ಆದರೂ ನಿಜವಾದ ಅಪರಾಧಿಗಳು ಶಿಕ್ಷೆಯಿಂದ ಬಚಾವಾಗಿದ್ದಾರೆ ಎಂಬುದು ಗಲಭೆ ಸಂತ್ರಸ್ತರು ಹಾಗೂ ಅವರ ಕುಟುಂಬವರ್ಗದವರ ಆರೋಪ.

ಮಿಶ್ರಾ ಆಯೋಗ

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ರಂಗನಾಥ್ ಮಿಶ್ರಾ ನೇತೃತ್ವದ ಆಯೋಗವನ್ನು 1985ರ ಮೇ ತಿಂಗಳಲ್ಲಿ ನೇಮಿಸ ಲಾಯಿತು. 1986ರ ಆಗಸ್ಟ್​ನಲ್ಲಿ ಸಲ್ಲಿಕೆಯಾದ ಈ ಆಯೋಗದ ವರದಿಯನ್ನು ಸರ್ಕಾರ ಆರು ತಿಂಗಳ ನಂತರ ಅಂದರೆ 1987ರ ಫೆಬ್ರವರಿಯಲ್ಲಿ ಬಹಿರಂಗಗೊಳಿಸಿತು. ಗಲಭೆ ತಡೆಯುವಲ್ಲಿ ಪೊಲೀಸರ ವೈಫಲ್ಯ ಅಥವಾ ನಿರ್ಲಕ್ಷ್ಯನ್ನು ಈ ವರದಿ ತಳ್ಳಿಹಾಕಿತು.

ಜೈನ್-ಅಗರ್​ವಾಲ್ ಸಮಿತಿ

ದೆಹಲಿ ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶ ಜೆ.ಡಿ. ಜೈನ್ ಮತ್ತು ಉತ್ತರಪ್ರದೇಶದ ನಿವೃತ್ತ ಡಿಜಿಪಿ ಡಿ.ಕೆ. ಅಗರ್​ವಾಲ್ ಅವರನ್ನೊಳಗೊಂಡ ಸಮಿತಿಯನ್ನು 1990ರ ಡಿಸೆಂಬರ್​ದಲ್ಲಿ ರಚಿಸಲಾಯಿತು. ಕಾಂಗ್ರೆಸ್ ನಾಯಕರಾದ ಎಚ್.ಕೆ.ಎಲ್. ಭಗತ್, ಸಜ್ಜನ್​ಕುಮಾರ್, ಜಗದೀಶ್ ಟೈಟ್ಲರ್, ಧರ್ಮದಾಸ್ ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲಿಸುವಂತೆ ಈ ಸಮಿತಿ ಶಿಫಾರಸು ಮಾಡಿತು. ಇಡೀ ಪ್ರಕರಣದ ತನಿಖೆಯ ಮೇಲುಸ್ತುವಾರಿಗೆ ದೆಹಲಿ ಪೊಲೀಸ್ ಇಲಾಖೆ ವ್ಯಾಪ್ತಿಯ 2-3 ವಿಶೇಷ ತನಿಖಾ ತಂಡಗಳನ್ನು ನೇಮಿಸುವಂತೆಯೂ ಸಮಿತಿ ಶಿಫಾರಸು ಮಾಡಿತು. 1993ರ ಆಗಸ್ಟ್ ದಲ್ಲಿ ಈ ಸಮಿತಿಯ ಅವಧಿ ಮುಕ್ತಾಯವಾದರೂ, ಸಮಿತಿ ಸೂಚಿಸಿದ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿರಲಿಲ್ಲ.

ಕಪೂರ್ – ಮಿತ್ತಲ್ ಸಮಿತಿ

ಗಲಭೆಯಲ್ಲಿ ಪೊಲೀಸರ ಪಾತ್ರ ಮತ್ತು ನಿರ್ಲಕ್ಷ್ಯ ಬಗ್ಗೆ ತನಿಖೆ ನಡೆಸಲೆಂದೇ ಮತ್ತೊಂದು ಸಮಿತಿಯನ್ನು 1987ರ ಫೆಬ್ರವರಿಯಲ್ಲಿ ರಚಿಸಲಾಯಿತು. ಉತ್ತರ ಪ್ರದೇಶದ ನಿವೃತ್ತ ಕಾರ್ಯದರ್ಶಿಗಳಾದ ದಲೀಪ್ ಕಪೂರ್ ಮತ್ತು ಕುಸುಮ್ ಮಿತ್ತಲ್ ನೇತೃತ್ವದ ಈ ಸಮಿತಿ 1990ರಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಿ 72 ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿತು. ಅಲ್ಲದೆ ಈ ಪೈಕಿ 30 ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವಂತೆಯೂ ಶಿಫಾರಸು ಮಾಡಿತು. ಆದರೆ ಈವರೆಗೂ ಯಾವೊಬ್ಬ ಪೊಲೀಸ್ ಅಧಿಕಾರಿಯ ವಿರುದ್ಧವೂ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಕಟುವಾಸ್ತವ.

ಪೊಟ್ಟಿ ರೋಶಾ ಸಮಿತಿ

ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಮಾರ್ಚ್ 1990ರಲ್ಲಿ ಪೊಟ್ಟಿ ರೋಶಾ ಸಮಿತಿ ರಚಿಸಲಾಯಿತು. ಈ ಸಮಿತಿಯೂ ಆಗಸ್ಟ್ 1990ರಲ್ಲಿ ಸಜ್ಜನಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿತು. ಅದರಂತೆ ಸಿಬಿಐ ಅಧಿಕಾರಿಗಳು ಸಜ್ಜನಕುಮಾರ್ ಮನೆಗೆ ಹೋದಾಗ ಅವರ ಬೆಂಬಲಿಗರು ಭಾರಿ ದಾಂಧಲೆ ಎಬ್ಬಿಸಿ, ಅಧಿಕಾರಿಗಳಿಗೇ ಬೆದರಿಕೆ ಹಾಕಿದರು. 1990ರ ಸೆಪ್ಟೆಂಬರ್​ದಲ್ಲಿ ಪೊಟ್ಟಿ ರೋಶಾ ಸಮಿತಿಯ ಅವಧಿ ಮುಗಿದಿದ್ದರಿಂದ ತನಿಖೆ ರ್ತಾಕ ಅಂತ್ಯ ಕಾಣಲಿಲ್ಲ.

ಮಾರ್ವಾ ಆಯೋಗ

ಗಲಭೆಗಳ ಬೆನ್ನಲ್ಲಿ ಮೊದಲ ತನಿಖಾ ಆಯೋಗವನ್ನು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವೇದ ಮಾರ್ವಾ ನೇತೃತ್ವದಲ್ಲಿ 1984ರ ನವೆಂಬರ್​ನಲ್ಲಿ ನೇಮಿಸಲಾಯಿತು. ಗಲಭೆಯಲ್ಲಿ ಪೊಲೀಸರ ಪಾತ್ರ ಕುರಿತಂತೆ ತನಿಖೆ ನಡೆಸಿದ ಆಯೋಗವು 1985ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ವೇದ ಮಾರ್ವಾ ಕೈಬರಹದಲ್ಲಿ ಬರೆದ ಕೆಲ ಸಂಗತಿಗಳನ್ನು ವರದಿ ಜತೆ ನೀಡಿದ್ದರು. ಆದರೆ ಮುಂದಿನ ಆಯೋಗಕ್ಕೆ ಸರ್ಕಾರ ವರದಿ ಹಸ್ತಾಂತರಿಸಿದಾಗ ಆ ಹಸ್ತಪ್ರತಿಗಳು ಅದರಲ್ಲಿ ಇರಲಿಲ್ಲ.

7 ಪ್ರಕರಣಗಳು ಬಾಕಿ

1984ರಲ್ಲಿ ಸಿಖ್ ಹತ್ಯಾಕಾಂಡವಾದಾಗ ಒಟ್ಟು 650 ಪ್ರಕರಣಗಳು ದಾಖಲಾಗಿದ್ದವು. ಆದರೆ ಪೂರ್ಣ ಪ್ರಮಾಣದ ತನಿಖೆಯಾಗಿರಲಿಲ್ಲ. ಹೀಗಾಗಿ ಮತ್ತೆ 2015ರಲ್ಲಿ ವಿಶೇಷ ತನಿಖಾ ತಂಡ ರಚಿಸಿ, 293 ಪ್ರಕರಣಗಳ ಮರು ವಿಚಾರಣೆಗೆ ನಿರ್ಧರಿಸಲಾಗಿತ್ತು. ಇದರಲ್ಲಿ 60 ಪ್ರಕರಣಗಳು ಮಾತ್ರ ಮರು ವಿಚಾರಣೆಗೆ ಅರ್ಹ ಎಂದು ವಿಶೇಷ ತನಿಖಾ ತಂಡ ನಿರ್ಧರಿಸಿದ್ದರೂ, 52 ಪ್ರಕರಣಗಳ ಆರೋಪಿಗಳ ಪತ್ತೆ ಅಸಾಧ್ಯ ಎಂದು ಅಭಿಪ್ರಾಯಪಟ್ಟಿತ್ತು. ಕೋರ್ಟ್​ನಲ್ಲಿ ಇನ್ನೂ 7 ಪ್ರಕರಣಗಳ ವಿಚಾರಣೆ ಬಾಕಿ ಇದೆ.

ಜೈನ್-ಬ್ಯಾನರ್ಜಿ ಸಮಿತಿ

ಕಪೂರ್-ಮಿತ್ತಲ್ ಸಮಿತಿ ಅಸ್ತಿತ್ವದಲ್ಲಿ ಇರುವಾಗಲೇ ಹಿಂದಿನ ಮಿಶ್ರಾ ಆಯೋಗದ ಶಿಫಾರಸಿನಂತೆ ಗಲಭೆಗೆ ಸಂಬಂಧಿತ ಮತ್ತಷ್ಟು ಪ್ರಕರಣಗಳನ್ನು ದಾಖಲಿಸಿಕೊಳ್ಳಲು (ಬಿಟ್ಟುಹೋದ ಪ್ರಕರಣಗಳು) ದೆಹಲಿ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎಂ.ಎಲ್. ಜೈನ್ ಮತ್ತು ನಿವೃತ್ತ ಐಜಿಪಿ ಎ.ಕೆ. ಬ್ಯಾನರ್ಜಿ ಅವರನ್ನು ಒಳಗೊಂಡ ಸಮಿತಿಯನ್ನು 1987ರಲ್ಲಿ ರಚಿಸಲಾಯಿತು. ಗಲಭೆ ಸಂಬಂಧ ಕಾಂಗ್ರೆಸ್ ನಾಯಕ ಸಜ್ಜನ್​ಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಈ ಸಮಿತಿ 1987ರ ಆಗಸ್ಟ್​ದಲ್ಲಿ ಶಿಫಾರಸು ಮಾಡಿತು. ಈ ನಡುವೆ ಸಜ್ಜನ್​ಕುಮಾರ್ ಜತೆ ಸಹ-ಆರೋಪಿಯಾಗಿದ್ದ ಬ್ರಹ್ಮಾನಂದ ಗುಪ್ತಾ ಡಿಸೆಂಬರ್​ನಲ್ಲಿ ದೆಹಲಿ ಹೈಕೋರ್ಟ್ ಮೊರೆಹೋಗಿ ಸಮಿತಿ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿದರು. ಸರ್ಕಾರ ಈ ಮನವಿಗೆ ನ್ಯಾಯಾಲಯದಲ್ಲಿ ವಿರೋಧ ವ್ಯಕ್ತಪಡಿಸದ್ದರಿಂದ ಕೋರ್ಟ್ 1989ರ ಆಗಸ್ಟ್​ದಲ್ಲಿ ಸಮಿತಿಯನ್ನು ಅನೂರ್ಜಿತಗೊಳಿಸಿತು.

ನಾನಾವತಿ ಆಯೋಗ

2000ನೇ ಇಸವಿಯಲ್ಲಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶ ಜಿ.ಟಿ. ನಾನಾವತಿ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಗಲಭೆ ಸಂತ್ರಸ್ತರು ಹಾಗೂ ಘಟನೆಯ ಪ್ರತ್ಯಕ್ಷದರ್ಶಿಗಳನ್ನು ಮಾತನಾಡಿಸಿ ವಿವರ ಕಲೆಹಾಕಿದ ಆಯೋಗ 2005ರ ಫೆ. 9ರಂದು 185 ಪುಟಗಳ ವರದಿ ಸಲ್ಲಿಸಿತು. ‘ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸಿಖ್​ರ ವಿರುದ್ಧ ದಾಳಿಗೆ ಗಲಭೆಕೋರರನ್ನು ಉತ್ತೇಜಿಸಿದ್ದಾರೆ ಹಾಗೂ ಸಹಾಯ ಮಾಡಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಯಿತು. ಗಲಭೆಗೆ ಸಹಕರಿಸಿದ್ದರ ಬಗ್ಗೆ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಸೂಕ್ತ ಸಾಕ್ಷ್ಯಳನ್ನೂ ಸಮಿತಿ ಸಂಗ್ರಹಿಸಿ, ಒಪ್ಪಿಸಿತು.