ಮಥುರಾದಲ್ಲಿ ನರೇಂದ್ರ ಮೋದಿ ಸ್ವಚ್ಛತಾ ಸೇವೆ: ಕಸ ಆಯುವ ಮಹಿಳೆಯರ ಜತೆ ಪ್ರಧಾನಿ ಮಾತುಕತೆ, ಏಕಬಳಕೆ ಪ್ಲಾಸ್ಟಿಕ್ ತ್ಯಜಿಸಲು ಕರೆ

ಮಥುರಾ: ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ಮಥುರಾದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದರು. ನದಿ, ಕೆರೆ, ಸರೋವರಗಳಲ್ಲಿರುವ ಜೀವಿಗಳು ಪ್ಲಾಸ್ಟಿಕ್ ಸೇವನೆ ಮಾಡಿದರೆ ಬದುಕುಳಿಯುವ ಸಾಧ್ಯತೆ ಕಡಿಮೆ. ಹೀಗಾಗಿ ಅ. 2ರಿಂದ ಮನೆ, ಕಚೇರಿಗಳನ್ನು ಮರುಬಳಕೆಯಾಗದ ಪ್ಲಾಸ್ಟಿಕ್​ನಿಂದ ಮುಕ್ತಗೊಳಿಸ ಬೇಕೆಂದರು. ಮಥುರಾದಲ್ಲಿ ಕಸ ಆಯುವ ಮಹಿಳೆಯರನ್ನು ಭೇಟಿ ಮಾಡಿದರು. 1000 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಶಿಲಾನ್ಯಾಸ ನೆರವೇರಿಸಿದರು.

ಪಾಕ್ ವಿರುದ್ಧ ಮೋದಿ ಗುಡುಗು: ಉಗ್ರವಾದದ ನಿಯಂತ್ರಣಕ್ಕೆ ಭಾರತ ಶಕ್ತವಾಗಿದೆ. ಭವಿಷ್ಯದಲ್ಲಿ ಈ ಶಕ್ತಿಯನ್ನು ಪ್ರದರ್ಶಿಸಲಿದೆ ಎಂದು ಮೋದಿ ಹೇಳಿದರು. ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೆಯೇ ಚಾಟಿ ಬೀಸಿರುವ ಅವರು, ನಮ್ಮ ನೆರೆರಾಷ್ಟ್ರದಲ್ಲಿ ಉಗ್ರವಾದದ ಬೇರು ಅಭಿವೃದ್ಧಿಯಾಗುತ್ತಿದೆ. ಇದರ ವಿರುದ್ಧ ಜಾಗತಿಕ ಮಟ್ಟದ ಕ್ರಮ ಅಗತ್ಯ. ಯಾರು ಉಗ್ರವಾದಕ್ಕೆ ಬೆಂಬಲ ನೀಡುತ್ತಾರೋ, ಆಶ್ರಯ ನೀಡಿ ತರಬೇತಿ ನೀಡುತ್ತಾರೋ ಅವರ ವಿರುದ್ಧವೂ ಕ್ರಮ ಅಗತ್ಯ ಎಂದರು.

ಗೋವು, ಓಂ ಎಂದರೆ ಕೆಲವರಿಗೆ ಅಲರ್ಜಿ

ಭಾರತದಲ್ಲಿ ಶ್ರೀಕೃಷ್ಣನಂತಹ ಪ್ರೇರಣಾ ಶಕ್ತಿಯಿದೆ. ಗೋವು, ಹಾಲು, ಮೊಸರು, ಬೆಣ್ಣೆ ಇಲ್ಲದೆ ಗೋಪಾಲನನ್ನು ನೆನೆಯುವುದಕ್ಕೂ ಸಾಧ್ಯವಿಲ್ಲ. ನಮ್ಮ ಗ್ರಾಮೀಣ ಭಾಗದ ಅರ್ಥವ್ಯವಸ್ಥೆ ಗೋವನ್ನೂ ಅವಲಂಬಿಸಿದೆ. ಆದರೆ ಕೆಲವರಿಗೆ ಗೋವು, ಓಂ ಎನ್ನುವ ಶಬ್ದಗಳನ್ನು ಕೇಳಿದರೆ ರೋಮ ನಿಮಿರುತ್ತದೆ ಎಂದು ಕಾಂಗ್ರೆಸ್​ನ ಕೆಲ ನಾಯಕರನ್ನು ಕುಟುಕಿದರು.

ಇಂದು ವಿಮೆ ಯೋಜನೆಗೆ ಚಾಲನೆ

ಜಾರ್ಖಂಡಕ್ಕೆ ತೆರಳಲಿರುವ ಮೋದಿ ಅಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮಾನ್​ಧನ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ಪ್ರಧಾನಮಂತ್ರಿ ವ್ಯಾಪಾರಿ ಮಾನ್​ಧನ್ ಯೋಜನೆ ಮತ್ತು ಸ್ವ ರೋಜ್​ಗಾರ್ ಯೋಜನೆಗೂ ಹಸಿರು ನಿಶಾನೆ ತೋರಲಿದ್ದಾರೆ. ಜಾರ್ಖಂಡ ವಿಧಾನಸಭೆಯ ನೂತನ ಕಟ್ಟಡವನ್ನು ಅವರು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಮಾನ್​ಧನ್ ಯೋಜನೆ ರೈತರಿಗೆ ಪಿಂಚಣಿ ನೀಡುವ ಸಲುವಾಗಿ ರೂಪಿಸಲಾಗಿದೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ 18-40 ವರ್ಷದೊಳಗಿನ ರೈತರು ಹೆಸರು ನೋಂದಾಯಿಸಿದರೆ ಅವರಿಗೆ 60 ವರ್ಷಗಳಾದ ಬಳಿಕ ಮಾಸಿಕ 3000 ರೂ. ಪಿಂಚಣಿ ಸಿಗಲಿದೆ. ಪ್ರಧಾನಮಂತ್ರಿ ವ್ಯಾಪಾರಿಕ್ ಮಾನ್​ಧನ್ ಯೋಜನೆ ಮತ್ತು ಸ್ವರೋಜ್​ಗಾರ್ ಯೋಜನೆಯೂ ಪಿಂಚಣಿಗೆ ಸಂಬಂಧಿಸಿದ್ದಾಗಿದ್ದು, ಸಣ್ಣಮಟ್ಟದ ವ್ಯಾಪಾರಿಗಳಿಗೆ 60 ವರ್ಷಗಳ ಬಳಿಕ ಮಾಸಿಕ 3000 ರೂ. ಪಿಂಚಣಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

Leave a Reply

Your email address will not be published. Required fields are marked *