More

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ

    ತುಮಕೂರು: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ದಾಖಲೆ (ಎನ್‌ಪಿಆರ್) ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ನಗರದ ಸಾವಿರಾರು ಮಹಿಳೆಯರು ತ್ರಿವರ್ಣ ಧ್ವಜ ಹಿಡಿದು ಆಜಾದಿ ಘೋಷಣೆಗಳನ್ನು ಕೂಗಿದರಲ್ಲದೆ ರಾಷ್ಟ್ರಗೀತೆ ಹಾಡಿದರು.

    ನಗರದ ಟೌನ್‌ಹಾಲ್ ಬಳಿ ಗುರುವಾರ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಮಾವೇಶಗೊಂಡ ಮಹಿಳೆಯರು ತುಮಕೂರಿನ ಇತಿಹಾಸದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಸಿಎಎ ಜಾರಿ ವಿರುದ್ಧ ಆಕ್ರೋಶ ಹೊರಹಾಕಿದರು. ಹಿಂದೂಸ್ತಾನ್ ಹಮಾರ, ಹಮಾರ ಎಂದು ಒಕ್ಕೊರಲಿನಿಂದ ಹಾಡಿದರು.

    ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ ಮಾತನಾಡಿ, ಕೇಂದ್ರ ಸರ್ಕಾರವನ್ನು ನಂಬಲು ಸಾಧ್ಯವೇ ಇಲ್ಲ. ಈ ಕಾಯ್ದೆಗಳು ಮುಸ್ಲಿಂ ವಿರುದ್ಧವಷ್ಟೇ ಅಲ್ಲದೆ ಬಡವರ ವಿರುದ್ಧವಾಗಿಯೂ ಇವೆ. ಆದ್ದರಿಂದ ಈ ಕಾಯ್ದೆಗಳ ವಿರುದ್ಧ ಪ್ರಬಲ ಹೋರಾಟಗಳು ನಡೆಯಬೇಕು ಎಂದು ಕಿಡಿಕಾರಿದರು.

    ಎನ್‌ಆರ್‌ಸಿ, ಸಿಎಎಯಂತಹ ಕಾನೂನುಗಳು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿವೆ. ತಲೆತಲಾಂತರದಿಂದ ಇಲ್ಲಿಯೇ ಹುಟ್ಟಿ ಬದುಕಿ ಮಣ್ಣು ಸೇರಿದ್ದಾರೆ. ತಂದೆ-ತಾಯಿಗಳ ದಾಖಲೆಗಳನ್ನು ತೋರಿಸಿ ಎಂದರೆ ಹೇಗೆ? ನಾವು ಈ ದೇಶದ ಪೌರರಲ್ಲವೇ? ಜನರನ್ನು ಅನುಮಾನದಿಂದ ನೋಡುವ ದೃಷ್ಟಿಯನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

    ಸಂವಿಧಾನವೇ ಅಂತಿಮ: ಇದು ಪ್ರಭುತ್ವ ರಾಷ್ಟ್ರವಲ್ಲ, ಪ್ರಜಾಪ್ರಭುತ್ವ ರಾಷ್ಟ್ರ. ಸಂವಿಧಾನವೇ ನಮಗೆ ಪರಮೋಚ್ಛವಾದುದು. ನಾವೆಲ್ಲರೂ ಈ ದೇಶದಲ್ಲಿದ್ದೇವೆ, ಇಲ್ಲೇ ಇರುತ್ತೇವೆ ಎಂದು ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.

    ದೇಶವಿಂದು ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ಬಡತನ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯುಲು ಬಿಜೆಪಿ ಇಂತಹ ಕೆಲಸ ಮಾಡುತ್ತಿದೆ ಎಂದು ಝೈನಬ್ ಮೊಹಮ್ಮದಿ ಆರೋಪಿಸಿದರು.

    ಮಹಾನಗರ ಪಾಲಿಕೆ ಸದಸ್ಯೆ ಫರೀದಾ ಬೇಗಂ, ನಾಸಿರಾಬಾನು, ನೂರುನ್ನೀಸಾ, ನಾಜೀಮಾಬಿ, ಮುಜೀದಾ ಖಾನಂ, ಎಐಎಂಎಸ್‌ಎಸ್ ರಾಜ್ಯ ಉಪಾಧ್ಯಕ್ಷೆ ಹರಿಣಿ ಆಚಾರ್ಯ, ಕಲ್ಯಾಣಿ, ಹರ್ಷಿಯಾ ಹರ್ಷಫ್, ತಾಹೇರಾ ಬಾನು, ಉಲ್ಪತ್, ಭಾರತೀಯ ಮಹಿಳಾ ಒಕ್ಕೂಟದ ಭಾರತಿ, ಆಯಿಷಾ ಸುಲ್ತಾನ, ಸುಜಾತಾ, ನುಸರತ್ ಬಾನು, ದೀಪಿಕಾ, ನಾಹಿದಾ ಅಂಜುಂ ಇದ್ದರು.

    ನಾವೇನು ಪಂಕ್ಚರ್ ವಾಲಾಗಳಲ್ಲ: ಬಿಜೆಪಿ ಸಂಸದ ತೇಜಸ್ವಿಸೂರ್ಯ ಹೇಳಿರುವಂತೆ ನಾವೇನು ಪಂಕ್ಚರ್‌ವಾಲಾಗಳಲ್ಲ. ನಾವು ಈ ದೇಶದ ನಾಗರಿಕರು. ಈ ದೇಶದ ಸಂವಿಧಾನವು ಪ್ರತಿಭಟಿಸುವ ಹಕ್ಕನ್ನು ನಮಗೆ ನೀಡಿದೆ ಎಂದು ವಕ್ಫ್ ಬೋರ್ಡ್ ನ ಪ್ರಥಮ ಮಹಿಳಾ ಸದಸ್ಯೆ ಶೀಮಾ ಮೊಹಸೀನ್ ಅಸಮಾಧಾನ ಹೊರಹಾಕಿದರು.

    ಬಂದೋಬಸ್ತ್ : ಬೃಹತ್ ಪ್ರತಿಭಟನಾ ಸಮಾವೇಶ ಹಿನ್ನೆಲೆಯಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಇದೇ ವೇಳೆ ಕೇಂದ್ರದ ಕ್ರಮ ಸಂವಿಧಾನದ ಆಶಯಗಳಿಗೆ ವಿರುದ್ಧವಾದುದಾಗಿದೆ. ಮೂಲಹಕ್ಕು, ನೈಸರ್ಗಿಕ ಹಕ್ಕು ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುವಂತಿದ್ದು, ಈ ಕಾಯ್ದೆಗಳನ್ನು ಜಾರಿಗೊಳಿಸಬಾರದೆಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತುಮಕೂರು ಉಪವಿಭಾಗಾಧಿಕಾರಿ ಸಿ.ಎಲ್.ಶಿವಕುಮಾರ್ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts