ಅಂಟಾರ್ಟಿಕಾದಲ್ಲಿ 6 ಪಟ್ಟು ಹೆಚ್ಚು ವೇಗದಲ್ಲಿ ಹಿಮ ಕರಗುತ್ತಿದೆ

ವಾಷಿಂಗ್ಟನ್​: ಹವಾಮಾನ ವೈಪರೀತ್ಯ ಮತ್ತು ನಿರಂತರವಾಗಿ ಏರಿಕೆಯಾಗುತ್ತಿರುವ ತಾಪಮಾನದಿಂದಾಗಿ ಭೂಮಿಯ ದಕ್ಷಿಣ ಧ್ರುವದಲ್ಲಿರುವ ಅಂಟಾರ್ಟಿಕಾ ಖಂಡದಲ್ಲಿ ಹಿಮ 1980 ಕ್ಕೆ ಹೋಲಿಸಿದರೆ 6 ಪಟ್ಟು ಹೆಚ್ಚು ವೇಗದಲ್ಲಿ ಕರಗುತ್ತಿದೆ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ.

ವಿಜ್ಞಾನಿಗಳು ಅಂಟಾರ್ಟಿಕಾ ಖಂಡದ ವೈಮಾನಿಕ ಚಿತ್ರಗಳು, ಉಪಗ್ರಹ ಚಿತ್ರಗಳು, ಉಪಗ್ರಹ ನಕ್ಷೆ ಮತ್ತು ಕಂಪ್ಯೂಟರ್​ ಮಾದರಿಗಳನ್ನು ಆಧರಿಸಿ 1979 ರಿಂದ ಇಲ್ಲಿಯವರೆಗೆ ಹಿಮ ಕರಗುತ್ತಿರುವ ಪ್ರಮಾಣವನ್ನು ಲೆಕ್ಕ ಹಾಕಿದ್ದಾರೆ. ಈ ಸಂಶೋಧನೆಯಿಂದ ಆಘಾತಕಾರಿ ಸುದ್ದಿಯೊಂದು ತಿಳಿದು ಬಂದಿದ್ದು, ಮಾನವನ ಹಸ್ತಕ್ಷೇಪದಿಂದಾಗಿ 2009 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಅಂಟಾರ್ಕಿಕಾದಲ್ಲಿ ಜಮೆಯಾಗಿದ್ದ 278 ಬಿಲಿಯನ್​ ಟನ್​ ಹಿಮ ಕರಗಿ ಸಮುದ್ರ ಸೇರಿದೆ ಎಂದು ತಿಳಿದು ಬಂದಿದೆ.

1980 ರಲ್ಲಿ 44 ಬಿಲಿಯನ್​ ಟನ್​ ಹಿಮ ಕರಗುತ್ತಿತ್ತು. ಆದರೆ ಈ ಪ್ರಮಾಣ ಈಗ 6 ಪಟ್ಟು ಹೆಚ್ಚಿದೆ. 2017 ಕ್ಕೆ ಹೋಲಿಸಿದರೆ 2018ರಲ್ಲಿ ಹಿಮ ಕರಗುವ ಪ್ರಮಾಣ ಶೆ. 15ರಷ್ಟು ಹೆಚ್ಚಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಹಿಮ ಕರಗುವ ಅಪಾಯ ಎದುರಾಗಿದೆ. ಇದೇ ಪ್ರಮಾಣದಲ್ಲಿ ಹಿಮ ಕರಗಿದರೆ ಮುಂದಿನ ಶತಮಾನದ ವೇಳೆಗೆ ಸಮುದ್ರದ ಮಟ್ಟ ಕನಿಷ್ಠ 10 ಅಡಿ ಏರಿಕೆಯಾಗಲಿದೆ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಆಂತಕ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

One Reply to “ಅಂಟಾರ್ಟಿಕಾದಲ್ಲಿ 6 ಪಟ್ಟು ಹೆಚ್ಚು ವೇಗದಲ್ಲಿ ಹಿಮ ಕರಗುತ್ತಿದೆ”

  1. It’s indirect blackmail from these so called developed nation. To keep control over small and developing nations … Of course climate n earth changing …. That’s nature…

Comments are closed.