More

    ಅಂತರಂಗ| ಭರವಸೆ, ನಂಬಿಕೆ, ಪ್ರೀತಿ

    ಅಂತರಂಗ| ಭರವಸೆ, ನಂಬಿಕೆ, ಪ್ರೀತಿ

    ಸಂತ ಪೌಲರು ಬೈಬಲ್​ನಲ್ಲಿ ಹೇಳುವ ವಿಶಿಷ್ಟ ಮಾತೊಂದಿದೆ. ಭರವಸೆ, ನಂಬಿಕೆ ಮತ್ತು ಪ್ರೀತಿ ಇವು ಶ್ರೇಷ್ಠ ಮೌಲ್ಯಗಳು. ಈ ಮೂರರಲ್ಲಿ ಪ್ರೀತಿ ಯಾವತ್ತೂ ಬಾಳುತ್ತದೆ. ಭರವಸೆ (faith) ಎಂಬುದು ಕೇವಲ ವ್ಯಕ್ತಿಯ ಸಾಧನೆಯಿಂದ ಬರುವುದಲ್ಲ. ಅದನ್ನು ದೈವವೇ ವ್ಯಕ್ತಿಗೆ ವರದಾನವಾಗಿ ನೀಡಬೇಕಿದೆ. ಅಂದರೆ, ವ್ಯಕ್ತಿಯು ದೈವದ ಕೃಪೆಯಿಂದ ಕ್ರಮೇಣವಾಗಿ ಬೆಳೆಸಿಕೊಳ್ಳಬೇಕಾದ ಶ್ರೇಷ್ಠ ಗುಣವೇ ಭರವಸೆ. ನಂಬಿಕೆ (trust) ಎಂಬುದು ಕೂಡ ವ್ಯಕ್ತಿ ತನ್ನ ಸ್ವತ್ತನ್ನು, ಮತ್ತು ಕೆಲವೊಮ್ಮೆ ತನ್ನ ಇಡೀ ಜೀವವನ್ನು ಇತರರ ಕೈಯಲ್ಲಿ ಹಾಕುವ ಸಾಧನೆ. ಇತರರಲ್ಲಿ ನಮಗೆ ನಂಬಿಕೆ ಹುಟ್ಟಬೇಕಾದರೆ, ಮೊದಲು ನಾವು ನಂಬಿಕೆಗೆ ಯೋಗ್ಯರಾದ ವ್ಯಕ್ತಿಗಳಾಗಬೇಕು. ಯಾವಾಗ ಇತರರು ನಮ್ಮನ್ನು ನಂಬುತ್ತಾರೋ, ಆಗ ಅವರನ್ನು ನಂಬಲು ಕೂಡ ನಮಗೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಂಬಿಕೆಯನ್ನು ಬೆಳೆಸುವಲ್ಲಿ ಇತರರಿಗಿಂತ ನಮ್ಮ ಪಾತ್ರವೇ ಹಿರಿದು.

    ಆದರೆ, ಪೌಲರು ಇವೆರಡನ್ನೂ ಆದರಿಸುತ್ತರಾದರೂ, ಮೂರನೆಯ ಶ್ರೇಷ್ಠ ಮೌಲ್ಯ ಪ್ರೀತಿಯೇ ಯಾವತ್ತೂ ಬಾಳುತ್ತದೆ ಎನ್ನುತ್ತಾರೆ. ಇಲ್ಲಿ ಯಾವ ರೀತಿಯ ಪ್ರೀತಿ ಎಂಬುದು ಮುಖ್ಯ. ಬೈಬಲ್​ನ ಮೂಲ ಗ್ರೀಕ್ ಭಾಷೆಯಲ್ಲಿ ಪ್ರೀತಿ ಎಂಬ ಪದಕ್ಕೆ ಬೇರೆ ಬೇರೆ ಪದಗಳಿವೆ. ಅವೆಲ್ಲವನ್ನೂ ನಾವು ಪ್ರೀತಿ ಎಂದೇ ಭಾಷಾಂತರಿಸುವುದು ನಿಜಾರ್ಥವನ್ನು ಕೊಡಲಾರದು. ಉದಾಹರಣೆಗೆ, ಮೂಲ ಗ್ರೀಕ್ ಭಾಷೆಯಲ್ಲಿ ಇರೊಸ್ (Eros) ಎಂಬ ಪದದ ಅರ್ಥ ಪ್ರೇಮಿಗಳ ನಡುವೆ ಇರುವಂಥ ಪ್ರೀತಿ. ಅಂದರೆ ಇದೊಂದು ರಮ್ಯತೆಯಿಂದ ಕೂಡಿದ ಪ್ರೀತಿ. ಇನ್ನೊಂದು ಪದ ಫೀಲಿಯಾ (philia). ಇದು ಸ್ನೇಹಿತರ ನಡುವೆ ಇರುವಂಥ ಪ್ರೀತಿ. ಅಂದರೆ ಇದರಲ್ಲಿ ಆದರ, ಆತಿಥ್ಯ ಹೆಚ್ಚಿದೆ. ಸ್ಟೊರ್ಗೆ (storge) ಎನ್ನುವ ಇನ್ನೊಂದು ಪದದ ಅರ್ಥ ಒಂದು ಕುಟುಂಬದಲ್ಲಿ ತಂದೆ-ತಾಯಿ, ಅಣ್ಣ-ತಂಗಿ ನಡುವೆ ಇರುವಂಥ ಬಾಂಧವ್ಯದ ಪ್ರೀತಿ.

    ಈ ಎಲ್ಲ ರೀತಿಯ ಪ್ರೀತಿಗೆ ಅದರದೇ ಆದ ಸ್ಥಾನವಿದ್ದು ಅವುಗಳು ಬಾಳುತ್ತವೆ. ಆದರೆ ಇವೆಲ್ಲವುಗಿಂತ ಮಿಗಿಲಾದ ಪ್ರೀತಿಯಂತೂ ಅತ್ಯಂತ ಶ್ರೇಷ್ಠವಾದುದು. ಅದನ್ನು ಮೂಲ ಗ್ರೀಕ್​ನಲ್ಲಿ ಅಗಪೆ (agape) ಎಂದು ಬಣ್ಣಿಸಲಾಗಿದೆ. ಇದು ತ್ಯಾಗಮಯ ಪ್ರೀತಿ. ‘ತನ್ನ ಗೆಳೆಯನಿಗಾಗಿ ಜೀವ ಕೊಡುವ ಪ್ರೀತಿಗಿಂತ ಶ್ರೇಷ್ಠವಾದ ಪ್ರೀತಿ ಮತ್ತೊಂದಿಲ್ಲ’ ಎಂದು ಯೇಸು ನುಡಿಯುವ ಮಾತಿನ ಹಿಂದಿರುವ ಪ್ರೀತಿಯ ವ್ಯಾಖ್ಯಾನ ಈ ತ್ಯಾಗಮಯ ಪ್ರೀತಿ. ಯೇಸು ಕೂಡ ಕೊನೆಗೆ ಇದೇ ಪ್ರೀತಿಯಿಂದ ಸಂಪೂರ್ಣವಾಗಿ ತನ್ನನ್ನೇ ತಾನು ಬಲಿದಾನವಾಗಿ ನೀಡಿ ಶಿಲುಬೆ ಮೇಲೆ ಮಡಿದರು. ನಮ್ಮ ಬಾಳಿನಲ್ಲಿ ನಾವು ಕ್ರಮೇಣ ಇಂಥ ತ್ಯಾಗಮಯ ಪ್ರೀತಿಯತ್ತ ಬೆಳೆಯಬೇಕು ಎನ್ನುವುದು ಸಂತ ಪೌಲರ ಮಾತಿನ ತಾತ್ಪರ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts