More

    ಅಂತರಂಗ; ಗುರುವಿನ ಐದು ಲಕ್ಷಣಗಳು

    ‘ಪ್ರಶಾಂತತೆ, ಕ್ರೋಧರಾಹಿತ್ಯ, ಸದಾಚಾರಯೋಗ್ಯ, ಸಹೃದಯಿ, ತತ್ತ್ವದರ್ಶಿ’ – ಈ ಐದು ವಿಶೇಷ ಗುಣಗಳಿದ್ದವರು ಗುರು ಎಂದು ಕರೆಯಲ್ಪಡುತ್ತಾರೆ. ಪ್ರಶಾಂತತೆ: ಮನದ ದ್ವಂದ್ವಗಳು ಅಡಗಿದ್ದೇ ಪ್ರಶಾಂತತೆ. ಸಮುದ್ರದ ತರಂಗಗಳೆಲ್ಲ ಅಡಗಿದಾಗ ಸಮುದ್ರ ಹೇಗೆ ಪ್ರಶಾಂತವಾಗಿರುತ್ತದೆಯೋ ಹಾಗೆ ಮನದ ಸಂಕಲ್ಪ-ವಿಕಲ್ಪಗಳ ತೆರೆ ಅಡಗಿದ ಸ್ಥಿತಿಯೇ ಪ್ರಶಾಂತತೆ. ಮಿಥಿಲಾಪಟ್ಟಣಕ್ಕೆ ಬೆಂಕಿ ಹತ್ತಿ ಭಸ್ಮವಾದರೂ ಜನಕರಾಜನ ಮನ ಹೊಯ್ದಾಡಲಿಲ್ಲ. ಸುಖ-ದುಃಖಗಳ ಮಧ್ಯೆ ಸಮಸ್ಥಿತಿಯಿಂದ ಇರುವುದು ಗುರುವಿನ ಮೊದಲ ಲಕ್ಷಣ.

    ಕ್ರೋಧರಾಹಿತ್ಯ: ಕೋಪ ಅಂಟದ ತಪಸ್ಸು ಫಲಕಾರಿಯಾಗುತ್ತದೆ. ಕ್ರೋಧ ತನ್ನ ವೈರಿ. ಆ ಕ್ರೋಧದ ಇನ್ನೊಂದು ಮುಖವೇ ದ್ವೇಷ. ಕ್ರೋಧದ ಪರಿಣಾಮವೇ ಮಹಾಭಾರತ-ರಾಮಾಯಣ. ಗುರುವಿನಲ್ಲಿ ಪ್ರೀತಿ ವಾತ್ಸಲ್ಯಗಳು ಇದ್ದರೆ ಮಾತ್ರ ಗುರು-ಶಿಷ್ಯರ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಇಲ್ಲದಿದ್ದರೆ ಆ ಸಂಬಂಧ ವ್ಯಾವಹಾರಿಕವಾಗಿ ಮಾತ್ರ ಸೀಮಿತವಾಗುತ್ತದೆ.

    ಸದಾಚಾರಯೋಗ್ಯ: ಆಚಾರ-ವಿಚಾರದ ಕೊಂಡಿ ಕಳಚಬಾರದು. ಮಾತು ಬ್ರಹ್ಮ-ಮನ ಭ್ರಮೆಯಿಂದ ತುಂಬಿದ್ದರೆ ಏನು ಪ್ರಯೋಜನ? ಪುಣ್ಯಕ್ಷೇತ್ರದಲ್ಲಿದ್ದು ದುಷ್ಟ ವಿಚಾರಕ್ಕೆ ಕೈಹಾಕಿ ಅಧ್ಯಾತ್ಮಕ್ಷೇತ್ರವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವವರನ್ನು ನೋಡಿದರೆ ಮನಸ್ಸು ಜುಗುಪ್ಸೆಗೆ ಒಳಗಾಗುತ್ತದೆ. ಸಹೃದಯಿ: ಇನ್ನೊಬ್ಬರು ತೊಂದರೆಯಲ್ಲಿದ್ದಾಗ ಸಹಾಯ ಮಾಡಬೇಕು. ಆದರೆ ಅದಕ್ಕೆ ಪ್ರತಿಫಲ ಬಯಸದೆ ಇರುವುದೇ ಸಹೃದಯಿಯ ಲಕ್ಷಣ. ಉಪಕಾರ ಶಬ್ದವೇ ಗೊತ್ತಿಲ್ಲದವರು ಸ್ವಜನರ ಮನೆ ತುಂಬುತ್ತಾರೆ. ಅವರು ಸಮಾಜಮುಖಿಯಾಗಿ ಸಮಾಜದ ಮೇಲೆ ಬೆಳಕು ಚೆಲ್ಲಬೇಕು. ಅಸಹಾಯಕರ ನೋವಿಗೆ ಸ್ಪಂದಿಸಬೇಕು.

    ತತ್ತ್ವದರ್ಶಿ: ಗುರು ತತ್ತಾ್ವನುಭವಿಯಾಗಿರಬೇಕು. ಚಿತ್ರದ ಹುಲಿ, ಶಿಲೆಯ ಸಿಂಹ, ಪರಿಮಳವಿಲ್ಲದ ಪುಷ್ಪ, ರಸವಿಲ್ಲದ ಹಣ್ಣು, ವಿದ್ಯೆಯಿಲ್ಲದ ಗುರು ಇವೆಲ್ಲ ವ್ಯರ್ಥ. ಶಿಷ್ಯರ-ಭಕ್ತರ ಸಂದೇಹಗಳನ್ನು ದೂರ ಮಾಡಿ ತತ್ತ್ವವನ್ನು ಉಪದೇಶಿಸುವ ಗುರು ಬೇಕು. ಈ ಐದು ಲಕ್ಷಣಗಳಿರುವವನೇ ನಿಜವಾದ ಗುರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts