ತಂತ್ರಗಳ ನಾಲ್ಕು ಪಾದಗಳಲ್ಲಿ ಕೊನೆಯದು ಚರ್ಯಾಪಾದ: ವ್ಯಕ್ತಿಯೊಬ್ಬನು ತನ್ನ ಜೀವನದಲ್ಲಿ ಆಚರಿಸಬೇಕಾದ ಕರ್ಮಗಳನ್ನೂ, ವಿವಿಧ ಸಾಧನೆಗಳನ್ನೂ ಚರ್ಯಾಪಾದದಲ್ಲಿ ಹೇಳಿದೆ. ಪಾಲಿಸಬೇಕಾದ ಶಿಸ್ತು, ಸಂಯಮಗಳನ್ನು ಪ್ರಾರಂಭದ ಸಾಧಕನಿಗೂ, ನುರಿತ ಪಟುವಿಗೂ ಉಪಯೋಗವಾಗುವಂತೆ ಹೇಳಲಾಗಿದೆ. ಇವೇ ಅಲ್ಲದೆ, ಇತರ ಅನೇಕ ವಿಷಯಗಳನ್ನು ತಂತ್ರದಲ್ಲಿ ಪ್ರತಿಪಾದನೆ ಮಾಡಿದ್ದಾರೆ. ಅವುಗಳನ್ನು ಹೇಗೆ ಕ್ರೋಡೀಕರಿಸಬಹುದು: ವೇದಗಳ ಆಧಾರದ ಮೇಲೆ ರಚಿತವಾದ ತಂತ್ರಗಳ ಮತ್ತು ಆಗಮಗಳ ಪ್ರಾಮಾಣ್ಯ; ಜಗತ್ಸೃಷ್ಟಿ; ವೈಖರೀವಾಕ್ ಅಥವಾ ಮಾತಿನ ಆವಿರ್ಭಾವ; ವರ್ಣಮಾಲೆಯ ಅಕ್ಷರಗಳು; ದೀಕ್ಷಾಸಮಯದಲ್ಲಿ ಅನುಸರಿಸಬೇಕಾದ ಕರ್ಮವಿಧಿಗಳು (ಉದಾ: ವಾಸ್ತುಯಾಗ); ದೀಕ್ಷೆಯ ಪ್ರಕಾರಗಳು; ಹೋಮವಿಧಿ; ಹಿಂದುಧರ್ಮದಲ್ಲಿರುವ ನಾನಾ ದೇವತೆಗಳಿಗೆ ಸಂಬಂಧಪಟ್ಟಂತೆ ಇರುವ ನಾನಾ ಮಂತ್ರಗಳು (ಉದಾ: ಸರಸ್ವತೀ, ಶ್ರೀ ಅಥವಾ ಲಕ್ಷಿ್ಮೕ, ಭುವನೇಶ್ವರೀ, ದುರ್ಗಾ, ವಿಷ್ಣು, ಗಣಪತಿ, ಶಿವ ಮುಂತಾದ ದೇವತೆಗಳು ಮಂತ್ರಗಳು); ಮೇಲ್ಕಂಡ ದೇವತೆಗಳಿಗೆ ಸಂಬಂಧಪಟ್ಟಂತೆ ಯಂತ್ರಗಳು; ಕುಂಡಲಿನೀ-ಪಟ್ಚಕ್ರಗಳ ಅಥವಾ ಆಧ್ಯಾತ್ಮಿಕ ಕೇಂದ್ರಗಳ ವಿವರಣೆ ಸಹಿತ ಯೋಗಸಾಧನೆಗಳು, ಇತ್ಯಾದಿ.
ತಂತ್ರಗಳ ತತ್ತ್ವಗಳು: ಸಾಂಖ್ಯ ಮತ್ತು ವೇದಾಂತದರ್ಶನಗಳಲ್ಲಿ ಸೂತ್ರಗಳ ಮಿಲನ ಹಾಗೂ ಪರಿಷ್ಕರಣವೇ ತಂತ್ರಗಳ ತತ್ತ್ವವೆಂದು ತೋರುತ್ತದೆ. ಸಾಂಖ್ಯದ ಪ್ರಕೃತಿ ಜಡ ಹಾಗೂ ಸ್ಥೂಲ ಸ್ವಭಾವದ್ದು. ವೇದಾಂತದ ಮಾಯೆ – ಅದರಲ್ಲೂ ಅದ್ವೆ ೖತದಲ್ಲಿ ವಿವರಿಸಿರುವುದು – ವರ್ಣನಾತೀತ, ಅಗ್ರಾಹ್ಯವಸ್ತು. ಈ ತಂತ್ರಗಳಲ್ಲಿ ಹೇಳುವ ‘ಶಕ್ತಿ’ಯಾದರೋ ಶಿವನ ನಿಜವಾದ ಶಕ್ತಿ, ಅಂತರ್ಗತ ಶಕ್ತಿ, ಅಥವಾ ಸಾಕ್ಷಾತ್ ಕ್ರಿಯಾತ್ಮಕ ಶಿವನೇ! ಪ್ರಕೃತಿ-ಮಾಯೆಗೆ ಹೇಳಿರುವ ಉಳಿದ ಗುಣಗಳಾದ ತ್ರಿಗುಣಾತ್ಮಕತ್ವ (ಸತ್ತ್ವ-ರಜಸ್-ತಮಸ್) ಹಾಗೂ ಉಪಾದಾನಕಾರಣತ್ವ (ಭೌತಿಕ ಕಾರಣ) – ಇವು ತಂತ್ರದ ‘ಶಕ್ತಿ’ಗೂ ಅನ್ವಯವಾಗುತ್ತದೆ. ಅಂತಿಮವಾಗಿ ಇರುವುದೊಂದೇ ವಸ್ತು. ಅದೇ ‘ಏಕಮೇವಾದ್ವಿತೀಯ’ವಾದುದು. ಅದೇ ಶಿವ, ಅದೇ ಶಕ್ತಿ, ಅದೇ ಶಿವಶಕ್ತಿ. ಅದೇ ಪ್ರಜ್ಞಾನಸ್ವರೂಪ.