ಯೇಸುಕ್ರಿಸ್ತರು, ಈ ಹಿಂದೆ, ತಮ್ಮ ಬೋಧನಾ ವೇಳೆಯಲ್ಲಿ, ‘ನಮ್ಮ ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ’ ಎಂದು ಹೇಳಿದ್ದನ್ನು ಮೆಚ್ಚಿಕೊಂಡಿದ್ದ ಒಬ್ಬಾನೊಬ್ಬ ಯಹೂದಿ ಧರ್ಮಶಾಸ್ತ್ರಿ, ಒಮ್ಮೆ ಯೇಸುವಿನ ಬಳಿಗೆ ಆಗಮಿಸಿ ಆ ಘಟನೆಯನ್ನು ನೆನಪಿಸಿದ.
ಆಗ ಆತನ ಬಗ್ಗೆ ಗಮನ ಹರಿಸಿದ ಯೇಸುವಿಗೆ ಆ ಧರ್ಮಶಾಸ್ತ್ರಿ, ‘ಸ್ವಾಮಿ! ದೇವರ ಆಜ್ಞೆಗಳಲ್ಲೆಲ್ಲ ಪ್ರಧಾನ ಹಾಗೂ ಪ್ರಥಮ ಆಜ್ಞೆ ಯಾವುದು?’ ಎಂದು ಕೇಳಿದನು. ಆಗ ಯೇಸು ಆತನಿಗೆ, ‘ಇಸ್ರಯೇಲ್ ಸಮಾಜವೇ ಆಲಿಸು; ನಮ್ಮ ದೇವರಾದ ಸರ್ವೆಶ್ವರ ಏಕೈಕ ಸರ್ವೆಶ್ವರರಾಗಿದ್ದಾರೆ. ನಿಮ್ಮ ದೇವರಾದ ಆ ಸರ್ವೆಶ್ವರರನ್ನು ನಿಮ್ಮ ಪೂರ್ಣ ಹೃದಯದಿಂದಲೂ, ನಿಮ್ಮ ಪೂರ್ಣ ಆತ್ಮದಿಂದಲೂ, ನಿಮ್ಮ ಪೂರ್ಣ ಮನಸ್ಸಿನಿಂದಲೂ ಹಾಗೂ ನಿಮ್ಮ ಪೂರ್ಣ ಶಕ್ತಿಯಿಂದಲೂ ಪ್ರೀತಿಸಿ. ಇದೇ ಪ್ರಪ್ರಥಮ ಆಜ್ಞೆ’ ಎಂದರು.
ಆ ನಂತರ ಮುಂದುವರಿದು, ‘ನಿನ್ನನ್ನು ನೀನೆ ಪ್ರೀತಿಸಿಕೊಳ್ಳುವಂತೆ, ನಿನ್ನ ನೆರೆಯವರನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತಲೂ ಶ್ರೇಷ್ಠವಾದ ಆಜ್ಞೆ ಬೇರಾವುದೂ ಇಲ್ಲ’ ಎಂದರು. ಇದನ್ನು ಸಾವಕಾಶವಾಗಿ ಆಲಿಸಿದ ಆ ಧರ್ಮಶಾಸ್ತ್ರಿ, ಯೇಸುವನ್ನು ಕುರಿತು, ‘ಬೋಧಕರೇ, ನೀವು ದೇವರ ಪ್ರಧಾನ ಆಜ್ಞೆಗಳ ಬಗ್ಗೆ ಬಹಳ ಚೆನ್ನಾಗಿ ವ್ಯಾಖ್ಯಾನಿಸಿದಿರಿ. ಸರ್ವಶಕ್ತ ದೇವರು ಒಬ್ಬರೇ ಹೊರತು ಬೇರೆ ಯಾವ ದೇವರೂ ಇಲ್ಲ ಎಂದು ನೀವು ಹೇಳಿದ್ದು ಸತ್ಯವಾದ ಮಾತು.
ಆ ಏಕೈಕ ದೇವರನ್ನು ನಾವು ಪೂರ್ಣ ಹೃದಯದಿಂದಲೂ, ಪೂರ್ಣ ಜ್ಞಾನದಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇಷ್ಟೇ ಅಲ್ಲದೆ, ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲ ದಹನಬಲಿಗಳಿಗಿತಲೂ ಎಷ್ಟೋ ಮೇಲಾದುವು’ ಎಂದು ತನ್ನ ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸಿದನು. ಆಗ ಯೇಸು, ಅವನ ವಿವೇಕಪೂರ್ಣವಾದ ಉತ್ತರವನ್ನು ಶ್ಲಾಘಿಸುತ್ತ ಹೀಗೆಂದರು; ‘ಇದೋ! ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ.’ ಆ ಘಟನೆಯ ಬಳಿಕ, ಯೇಸುವನ್ನು ಆ ಬಗ್ಗೆ ಪ್ರಶ್ನಿಸುವುದಕ್ಕೆ ಬೇರೆ ಯಾರಿಗೂ ಧೈರ್ಯ ಉಂಟಾಗಲಿಲ್ಲ. ಹೀಗೆ ಯೇಸು ಸಂಚರಿಸುತ್ತಿದ್ದ ಇಸ್ರಯೇಲ್ ನಾಡಿನಲ್ಲೆಲ್ಲ ಜನಸಮೂಹವು ಸಂತಸಚಿತ್ತದಿಂದ ಅವರ ಮಾತುಗಳನ್ನು ಆಲಿಸುತ್ತಿತ್ತು.
ಹೀಗಿರುವಾಗ ಒಮ್ಮೆ ಕಪಟ ಧರ್ಮಶಾಸ್ತ್ರಿಗಳ ಪ್ರಸ್ತಾಪ ಬಂದಾಗ, ಯೇಸು ಆ ಬಗ್ಗೆ ಹೀಗೆಂದು ಜಾಗೃತಿಯ ಮಾತುಗಳನ್ನು ಹೇಳಿದರು; ‘ಇದೋ! ನಾನು ನಿಮಗೆ ಹೇಳುತ್ತಿದ್ದೇನೆ. ಕಪಟ ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆ ಇರಲಿ! ಅವರು ಉದ್ದನೆಯ ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆ ಬೀದಿಗಳಲ್ಲಿ ವಂದನೋಪಾಚಾರಗಳನ್ನೂ, ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ, ಔತಣ ಮುಂತಾದ ಸಮಾರಂಭಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಅಪೇಕ್ಷಿಸುತ್ತಾರೆ.
ವಿಧವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಈ ಜನ ನಟನೆಗಾಗಿ ದೀರ್ಘವಾಗಿ ಜಪತಪಗಳನ್ನು ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು’ ಎಂದು ಜನರಲ್ಲಿ ಅಂತಹ ಕಪಟಿಗಳ ಬಗ್ಗೆ ಎಚ್ಚರಿಕೆ ಮೂಡಿಸಿದರು.