ಯೇಸುವಿನ ಜನನದ ಸಂದೇಶ ಮೊದಲಿಗೆ ತಲುಪಿದ್ದು ಕುರುಬರಿಗೆ. ಆದರೆ, ತದನಂತರ ಪೂರ್ವದಿಕ್ಕಿನಿಂದ ಕೆಲವು ಜ್ಯೋತಿಷಿಗಳೂ ಮಗು ಯೇಸುವನ್ನು ಕಂಡು ನಮಿಸಲು ಬಂದರೆಂದು ಬೈಬಲ್ ಹೇಳುತ್ತದೆ. ಈ ಮೂರು ಜ್ಯೋತಿಷಿಗಳು ಯೇಸುವನ್ನು ಆರಾಧಿಸಲು ಬಂದಾಗ ಅರ್ಪಿಸಿದ ಕಾಣಿಕೆಗಳು ವಿಶೀಷ್ಟವಾದವು.
ಅವರು ಚಿನ್ನ, ಸಾಂಬ್ರಾಣಿಯಂಥ ಪರಿಮಳದ್ರವ್ಯ ಮತ್ತು ರಕ್ತಬೋಳವನ್ನು ಅರ್ಪಿಸಿದರು. ಈ ಮೂರೂ ಕಾಣಿಕೆಗಳಿಗೆ ಅದರದ್ದೇ ಆದ ಸಾಂಕೇತಿಕ ಅರ್ಥವಿರುವುದನ್ನು ನಾವು ಇಲ್ಲಿ ಗಮನಿಸಬೇಕು. ಚಿನ್ನವೆಂಬುದು ಐಶ್ವರ್ಯದ, ಒಡೆತನದ ಸಂಕೇತ. ಗದ್ದುಗೆಗೆ ಏರಿದ ರಾಜರನ್ನು ಹೆಚ್ಚಾಗಿ ಚಿನ್ನದಿಂದಲೇ ಅಲಂಕರಿಸುವ ಪ್ರತೀತಿ ಯೇಸುವಿನ ಕಾಲದಲ್ಲಿ ಸಾಮಾನ್ಯವಾಗಿತ್ತು.
ಯೇಸು ಕೂಡ ಒಂದರ್ಥದಲ್ಲಿ ರಾಜ. ಆದರೆ ತನ್ನ ಸಾಮ್ರಾಜ್ಯ ಈ ಲೋಕದ್ದಲ್ಲ, ಅದು ಸ್ವರ್ಗಸಾಮ್ರಾಜ್ಯ ಎಂದು ಯೇಸು ಕ್ರಮೇಣ ತನಗೆ ಮರಣದಂಡನೆ ನೀಡಿದ ಪಿಲಾತನ ಎದುರು ನುಡಿಯುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಸಾಂಬ್ರಾಣಿಯಂತಹ ಪರಿಮಳದ್ರವ್ಯ ಹೆಚ್ಚಾಗಿ ಪುರೋಹಿತರು ಉಪಯೋಗಿಸುವ ವಸ್ತು. ದೇವಾಲಯದಲ್ಲಿ ಬಲಿ ಅರ್ಪಿಸುವಾಗ, ಪೂಜೆ ಮಾಡುವಾಗ ಇಂಥ ಪರಿಮಳದ್ರವ್ಯದ ಬಳಕೆ ಹೆಚ್ಚಾಗಿ ಆಗುತ್ತಿತ್ತು. ಅಂದರೆ ಈ ಪರಿಮಳದ್ರವ್ಯ ಪೌರೋಹಿತ್ಯದ ಸಂಕೇತ. ಯೇಸು ಒಂದರ್ಥದಲ್ಲಿ ಪುರೋಹಿತರಾಗಿದ್ದರು.
ಆದರೆ, ಅವರ ಪೌರೋತ್ಯ ಸಾಂಪ್ರದಾಯಿಕ ಅರ್ಥದ ಪೌರೋಹಿತ್ಯ ಅಲ್ಲ. ಅವರು ಅರ್ಪಿಸಿದ ಬಲಿದಾನ ಯಾವುದೋ ಪ್ರಾಣಿಯದ್ದಲ್ಲ, ಬದಲಿಗೆ ತನ್ನನ್ನೇ ಶಿಲುಬೆಯ ಮೇಲೆ ಬಲಿ ಅರ್ಪಿಸಿದ ಘಟನೆಯ ಸಾಂಕೇತಿಕತೆ ಈ ಪರಿಮಳದ್ರವ್ಯದ ಕಾಣಿಕೆಯಲ್ಲಿ ಕಾಣುತ್ತದೆ. ರಕ್ತಬೋಳ ಎಂಬುದು ಹೆಣಕ್ಕೆ ಲೇಪ ಹಾಕಲು ಬಳಸುವ ವಸ್ತು. ಒಂದರ್ಥದಲ್ಲಿ ಯೇಸುವಿನ ಮರಣವನ್ನು ಅವರ ಜನನದಲ್ಲೇ ಕಾಣುವ ಸಾಂಕೇತಿಕತೆಯನ್ನು ಈ ಕಾಣಿಕೆಯಲ್ಲಿ ಕಾಣಬಹುದು. ಯೇಸು ಹುಟ್ಟಿ ಬಂದದ್ದು ಭೂಲೋಕದ ಸಾಮ್ರಾಜ್ಯ ಕಟ್ಟಿ ಅರಸೊತ್ತಿಗೆ ನಡೆಸಲು ಅಲ್ಲ, ಬದಲಿಗೆ ಈ ಲೋಕದಲ್ಲೇ ಸ್ವರ್ಗಸಾಮ್ರಾಜ್ಯ ಬೇರೂರಿಸಲು. ಆದರೆ ಆ ಪ್ರಕ್ರಿಯೆಯಲ್ಲಿ ಅವರು ತನ್ನ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬರ್ಥ ಈ ಕಾಣಿಕೆಯಲ್ಲಿದೆ.