ಉತ್ತರ ಪತ್ರಿಕೆ ಮೌಲ್ಯಮಾಪಕರಿಗೆ ಸಿಗದ ವೇತನ

ಹರೀಶ್ ಮೋಟುಕಾನ ಮಂಗಳೂರು
ಮಂಗಳೂರು ವಿಶ್ವವಿದ್ಯಾಲಯ ಪದವಿ ತರಗತಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ ಉಪನ್ಯಾಸಕರಿಗೆ ಅಧಿಕಾರಿಗಳ ಭರವಸೆಯಂತೆ ಹೊಸ ಪದ್ಧತಿಯ ಆನ್‌ಲೈನ್ ಮೂಲಕ ವೇತನ ಪಾವತಿ ಆಗಿಲ್ಲ, ಹಳೆಯ ವ್ಯವಸ್ಥೆಯಲ್ಲೂ ಚೆಕ್ ನೀಡಿಲ್ಲ!

ಕುಂದಾಪುರದಿಂದ ಕುಶಾಲನಗರದ ತನಕದ ಸಾವಿರಕ್ಕಿಂತಲೂ ಅಧಿಕ ಉಪನ್ಯಾಸಕರು ನ.27ರಿಂದ ಡಿ.21ರ ತನಕ ವಿವಿಧ ಕಾಲೇಜುಗಳಲ್ಲಿ ಪದವಿ ತರಗತಿಯ ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡಿದ್ದಾರೆ. ಪ್ರತಿವರ್ಷ ಮೌಲ್ಯಮಾಪನ ಮುಗಿಸಿ ಹೊರಡುವಾಗ ಚೆಕ್ ನೀಡುತ್ತಿದ್ದರು. ಈ ಬಾರಿ ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ (ನೆಫ್ಟ್) ಮಾಡುತ್ತೇವೆ ಎಂದು ವಿವಿ ಅಧಿಕಾರಿಗಳು ಭರವಸೆ ನೀಡಿದ್ದರು.

ಎಲ್ಲ ಮೌಲ್ಯಮಾಪಕರ ಬ್ಯಾಂಕ್ ದಾಖಲೆ ಪಡೆದುಕೊಂಡಿದ್ದರು. ಮೌಲ್ಯಮಾಪನ ಮುಗಿದ ಮರುದಿನವೇ ವೇತನ ಖಾತೆಗೆ ಜಮೆಯಾಗಲಿದೆ ಎಂದು ಭರವಸೆ ನೀಡಿದ್ದರು. ಆದರೆ ಇನ್ನೂ ವೇತನ ಜಮೆಯಾಗಿಲ್ಲ.
ಮೌಲ್ಯಮಾಪಕರಲ್ಲಿ ಅತಿಥಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಪಾಠ ಮಾಡಿದ ವೇತನ ಸಿಗದೆ ಮೂರು ತಿಂಗಳಾಗಿದೆ. ಈಗ ಮೌಲ್ಯಮಾಪನ ಮಾಡಿದ ಹಣವೂ ಸಿಗದೆ ಬದುಕು ನಿರ್ವಹಿಸುವುದೇ ಕಷ್ಟವಾಗುತ್ತಿದೆ. ಕುಂದಾಪುರ, ಉಡುಪಿ, ಮಡಿಕೇರಿ, ಕುಶಾಲನಗರಗಳಿಂದ ಬಂದು ಮಂಗಳೂರಿನಲ್ಲಿ ರೂಮ್, ಹೋಟೆಲ್‌ಗಾಗಿ ಸಾವಿರಾರು ರೂ. ವೆಚ್ಚ ಮಾಡಿ ಮೌಲ್ಯಮಾಪನ ಮಾಡಿದವರಿಗೆ ಸಕಾಲದಲ್ಲಿ ವೇತನ ಸಿಗದೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಉಪನ್ಯಾಸಕರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಮಂಗಳೂರು ವಿವಿ ದ್ವಿತೀಯ ಪದವಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪಕರಿಗೆ ವೇತನವನ್ನು ಬ್ಯಾಂಕ್‌ಗೆ ಜಮಾ ಮಾಡಲಾಗಿದೆ. ಬ್ಯಾಂಕ್ ರಜೆ ಹಾಗೂ ಸಾಫ್ಟ್‌ವೇರ್ ಸಮಸ್ಯೆಯಿಂದ ವಿಳಂಬವಾಗಿದೆ. ವಾಣಿಜ್ಯ ವಿಭಾಗದಲ್ಲಿ ಸುಮಾರು 600ರಷ್ಟು ಉಪನ್ಯಾಸಕರಿದ್ದು, ಎಲ್ಲವನ್ನು ಪರಿಶೀಲಿಸಿ ಜಮೆ ಮಾಡಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆ ಹರಿಯಲಿದೆ.
– ರವೀಂದ್ರ ಆಚಾರ್, ಕುಲಸಚಿವ (ಮೌಲ್ಯಮಾಪನ), ಮಂಗಳೂರು ವಿವಿ