ಆಪ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತೊಬ್ಬ ಪಂಜಾಬ್‌ ಶಾಸಕ ರಾಜೀನಾಮೆ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಬೆನ್ನಲ್ಲೇ ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಮತ್ತೊಬ್ಬ ನಾಯಕ ಬಲ್ದೇವ್‌ ಸಿಂಗ್‌ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಪಂಜಾಬ್‌ನ ಜೈಟೋ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿರುವ ಬಲ್ದೇವ್ ಸಿಂಗ್ ಅವರು ಆಪ್‌ನ ನಿರಂಕುಶ ಕಾರ್ಯಕಾರಿ, ದ್ವಿಮುಖ ನೀತಿ ಮತ್ತು ಪಕ್ಷವು ತನ್ನ ಮೂಲ ಸಿದ್ಧಾಂತ ಮತ್ತು ತತ್ತ್ವಗಳನ್ನು ಮರೆತಿರುವುದರಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಬುಧವಾರ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.

ಆಪ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿರುವುದನ್ನು ತಿಳಿಸಲು ವಿಷಾದಿಸುತ್ತೇನೆ. ಆದರೆ, ಪಕ್ಷವು ತನ್ನ ಮೂಲ ತತ್ತ್ವ ಮತ್ತು ಆದರ್ಶವನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಿದೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಇದಕ್ಕೂ ಮುನ್ನ ಜ.6ರಂದು ಆಮ್ ಆದ್ಮಿ ಪಕ್ಷದ ಶಾಸಕ ಸುಖ್ಪಾಲ್ ಸಿಂಗ್‌ ಖೈರಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರ ಸರ್ವಾಧಿಕಾರಿ ವರ್ತನೆಯಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಆರೋಪಿಸಿದ್ದರು.

ವಕೀಲ-ಕಾರ್ಯಕರ್ತ ಎಚ್.ಎಸ್. ಫುಲ್ಕಾ ಅವರು ಕೂಡ ಇತ್ತೀಚೆಗೆ ಎಎಪಿಯ ಪ್ರಾಥಮಿಕ ಸದಸ್ಯತ್ವದಿಂದ ಹೊರ ನಡೆದಿದ್ದರು. ಪಂಜಾಬ್‌ನ ಡಾಖಾ ವಿಧಾನಸಭೆ ಕ್ಷೇತ್ರದ ಆಪ್‌ ಶಾಸಕರಾಗಿದ್ದ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.