ಸಿಡ್ನಿಯಲ್ಲೂ ಪೂಜಾರ ಸೆಂಚುರಿ

ಸಿಡ್ನಿ: ಆಸೀಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಸನಿಹವಿರುವ ಭಾರತ ತಂಡ ಹೊಸ ವರ್ಷದಲ್ಲಿ ಆರಂಭಗೊಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ದಿಟ್ಟ ಆರಂಭ ಕಂಡಿದೆ. ಕ್ಲಾಸಿಕ್ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ (130*ರನ್, 250 ಎಸೆತ, 16 ಬೌಂಡರಿ ) ಅವರ ಮತ್ತೊಂದು ಮಾಸ್ಟರ್ ಕ್ಲಾಸ್ ಸೆಂಚುರಿ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ (77 ರನ್, 112 ಎಸೆತ, 7 ಬೌಂಡರಿ, 2 ಸಿಕ್ಸರ್) ಸಿಡಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿದೆ.

2-1 ಮುನ್ನಡೆಯ ಆತ್ಮವಿಶ್ವಾಸದೊಂದಿಗೆ ವಿರಾಟ್ ಕೊಹ್ಲಿ ಸರಣಿಯಲ್ಲಿ 3ನೇ ಬಾರಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಘಾತ ಕಂಡರೂ ಪೂಜಾರ ಹಾಗೂ ಮಯಾಂಕ್ ಜೋಡಿ ಆಸೀಸ್ ಬೌಲರ್​ಗಳ ಸತತ ಶಾರ್ಟ್ ಎಸೆತಗಳ ಉರಿ ದಾಳಿಯನ್ನು ದಿಟ್ಟವಾಗಿ ಎದುರಿಸುವುದರೊಂದಿಗೆ ಭಾರತ, ಮೊದಲ ದಿನದಂತ್ಯದ ವೇಳೆಗೆ 4 ವಿಕೆಟ್​ಗೆ 304 ರನ್ ಪೇರಿಸಿದೆ. ಪೂಜಾರ ಜತೆ ಹನುಮ ವಿಹಾರಿ (39*ರನ್, 58 ಎಸೆತ, 5 ಬೌಂಡರಿ) ಮುರಿಯದ 5ನೇ ವಿಕೆಟ್​ಗೆ 75 ರನ್ ಸೇರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ರಾಹುಲ್, ಕೊಹ್ಲಿ, ರಹಾನೆ ಫೇಲ್: ಸತತ ವೈಫಲ್ಯಗಳ ನಡುವೆಯೂ ಮತ್ತೊಮ್ಮೆ ಅವಕಾಶ ಪಡೆದ ಕನ್ನಡಿಗ ಕೆಎಲ್ ರಾಹುಲ್​ರದ್ದು ಅದೇ ರಾಗ ಅದೇ ತಾಳವಾಗಿತ್ತು. ಮಯಾಂಕ್ ಜತೆ ಇನಿಂಗ್ಸ್ ಆರಂಭಿಸಿದ ರಾಹುಲ್ 2 ಬೌಂಡರಿ ಬಾರಿಸಿ, 2ನೇ ಓವರ್​ನಲ್ಲೇ ಹ್ಯಾಸಲ್​ವುಡ್ ದಾಳಿಗೆ ಕೆಟ್ಟದಾಗಿ ಔಟಾದರು. ಔಟ್​ಸೈಡ್ ಆಫ್ ಹೋಗುತ್ತಿದ್ದ ಚೆಂಡನ್ನು ರಕ್ಷಣಾತ್ಮಕವಾಗಿ ಆಡಲು ವಿಫಲಗೊಂಡು ಸ್ಲಿಪ್​ನಲ್ಲಿ ಶಾನ್ ಮಾರ್ಷ್​ಗೆ ಕ್ಯಾಚ್ ಕೊಟ್ಟರು. ಮಯಾಂಕ್ ಮಿಂಚಿನ ಇನಿಂಗ್ಸ್ ನಂತರ ಪೂಜಾರಗೆ ಜತೆಯಾದ ನಾಯಕ ವಿರಾಟ್ ಕೊಹ್ಲಿ(23) 3ನೇ ವಿಕೆಟ್​ಗೆ 54ರನ್ ಸೇರಿಸಿ ಉತ್ತಮ ಲಯದಲ್ಲಿದ್ದರೂ, ಚಹಾ ವಿರಾಮದ ನಂತರದ ಮೊದಲ ಓವರ್​ನಲ್ಲೇ ಪೇನ್​ಗೆ ಕ್ಯಾಚ್ ಕೊಟ್ಟರು. ನಂತರ ಜವಾಬ್ದಾರಿಯುತವಾಗಿ ಆಡಬೇಕಿದ್ದ ಉಪನಾಯಕ ಅಜಿಂಕ್ಯ ರಹಾನೆ(18) ವೇಗಿ ಸ್ಟಾರ್ಕ್​ರ ಅನಿರೀಕ್ಷಿತ ಬೌನ್ಸರನ್ನು ಡಿಫೆಂಡ್ ಮಾಡಲಾಗದೆ ನಿರ್ಗಮಿಸಿದರು. -ಏಜೆನ್ಸೀಸ್

ಆಚ್ರೇಕರ್​ಗೆ ಭಾರತದ ಗೌರವ

ಟೀಮ್ ಇಂಡಿಯಾ ಆಟಗಾರರು ಗುರುವಾರ ತೋಳಿಗೆ ಕಪ್ಪು ಪಟ್ಟಿ ಧರಿಸುವ ಮೂಲಕ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಕೋಚ್ ರಮಾಕಾಂತ್ ಆಚ್ರೇಕರ್ ನಿಧನಕ್ಕೆ ಸಂತಾಪ ಸೂಚಿಸಿದರು. ಅತ್ತ ಆಸ್ಟ್ರೇಲಿಯಾ ತಂಡದ ಆಟಗಾರರು, ಮಾಜಿ ಕ್ರಿಕೆಟಿಗ ಬಿಲ್ ವ್ಯಾಟ್ಸನ್​ರ ನಿಧನಕ್ಕೆ ಸಂತಾಪ ಸೂಚಕವಾಗಿ ಕಪ್ಪು ಪಟ್ಟಿ ಕಟ್ಟಿ ಆಡಿದರು.

ಔಟಾದ ಬೆನ್ನಲ್ಲೇ ಅಭ್ಯಾಸಕ್ಕಿಳಿದ ರಾಹುಲ್!

ಕೆಎಲ್ ರಾಹುಲ್ ತಾಂತ್ರಿಕವಾಗಿ ಬ್ಯಾಟಿಂಗ್​ನಲ್ಲಿ ಎಷ್ಟು ದುರ್ಬಲಗೊಂಡಿದ್ದಾರೆಂದರೆ, ಔಟಾದ ಬೆನ್ನಲ್ಲೇ ನೇರವಾಗಿ ನೆಟ್ಸ್​ಗೆ ತೆರಳಿದರು. ಥ್ರೋ ಡೌನ್ ಎಸೆತಗಳನ್ನು ಡಿಫೆಂಡ್ ಮಾಡುವ ಕುರಿತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಕನಿಷ್ಠ 2ನೇ ಇನಿಂಗ್ಸ್ ನಲ್ಲಾದರೂ ಉತ್ತಮ ಇನಿಂಗ್ಸ್ ಆಡಲು ಮತ್ತು ವೇಗಿ ಮಿಚೆಲ್ ಸ್ಟಾರ್ಕ್ ದಾಳಿ ಎದುರಿಸಲು ಇದು ಪೂರ್ವ ಸಿದ್ಧತೆಯಾಗಿದೆ.

ನಿನಗೆ ಬೋರ್ ಆಗೋದಿಲ್ವಾ?!

ಸರಣಿಯಲ್ಲಿ ಸಾವಿರಕ್ಕೂ ಅಧಿಕ ಎಸೆತಗಳನ್ನು ಎದುರಿಸಿರುವ ಚೇತೇಶ್ವರ ಪೂಜಾರ ತಾಳ್ಮೆಯ ಇನಿಂಗ್ಸ್ ಆಸೀಸ್ ಬೌಲರ್​ಗಳನ್ನು ಎಷ್ಟು ಕಾಡಿದೆ ಎಂದರೆ, ‘ಇಷ್ಟು ಹೊತ್ತು ಬ್ಯಾಟಿಂಗ್ ಮಾಡಿರುವೆ, ನಿನಗೆ ಇನ್ನೂ ಬೋರ್ ಆಗೋದಿಲ್ವಾ’ ಎಂದು ಪೂಜಾರಗೆ ಸ್ವತಃ ನಾಥನ್ ಲ್ಯಾನ್ ಪ್ರಶ್ನೆ ಕೇಳಿಬಿಟ್ಟರು!

3 –  ಪೂಜಾರ ಆಸೀಸ್ ನೆಲದ ಸರಣಿಯೊಂದರಲ್ಲಿ ಅತ್ಯಧಿಕ 3 ಶತಕ ಸಿಡಿಸಿ, ಸುನೀಲ್ ಗಾವಸ್ಕರ್​ರ ದಾಖಲೆ ಸರಿಗಟ್ಟಿದರು. ಗಾವಸ್ಕರ್ 1977ರಲ್ಲಿ ಇಷ್ಟೇ ಶತಕ ಬಾರಿಸಿದ್ದರು. ವಿರಾಟ್ ಕೊಹ್ಲಿ 2014-15ರ ಸರಣಿಯಲ್ಲಿ 4 ಶತಕ ಬಾರಿಸಿರುವುದು ಭಾರತೀಯ ದಾಖಲೆ.

1 –  ಪೂಜಾರ ಸರಣಿಯೊಂದರಲ್ಲಿ ಅತ್ಯಧಿಕ ಎಸೆತಗಳನ್ನು ಎದುರಿಸಿದ ಸಾಧನೆ ಮಾಡಿದರು. ಹಾಲಿ ಸರಣಿಯಲ್ಲಿ ಇದುವರೆಗೆ ಪೂಜಾರ 1,135 ಎಸೆತಗಳನ್ನು ಎದುರಿಸಿದ್ದಾರೆ. ಕಳೆದ ವರ್ಷ ತವರಿನಲ್ಲಿ ಆಸೀಸ್ ಎದುರಿನ ಸರಣಿಯಲ್ಲಿ ಪೂಜಾರ 1,049 ಎಸೆತಗಳನ್ನೆದುರಿಸಿದ್ದರೆ, 2012-13ರಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 937 ಮತ್ತು 2016-17ರಲ್ಲಿ ಆಂಗ್ಲರ ಎದುರು 757 ಎಸೆತಗಳನ್ನು ಆಡಿದ್ದರು.

ಸಚಿನ್ ದಾಖಲೆ ಮುರಿದ ವಿರಾಟ್!

ದಾಖಲೆ ಸರದಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ನಿಂದ ವಂಚಿತರಾದರೂ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಕೇವಲ 382 ಇನಿಂಗ್ಸ್​ಗಳಲ್ಲಿ 19,000 ರನ್ ಪೂರೈಸಿ ಸಚಿನ್​ರನ್ನು ಹಿಂದಿಕ್ಕಿದರು. ಸಚಿನ್ ಈ ಸಾಧನೆಯನ್ನು 432 ಇನಿಂಗ್ಸ್ ಗಳಲ್ಲಿ ಮಾಡಿದ್ದರು.

ಮೆಕ್​ಗ್ರಾಥ್ ಫೌಂಡೇಷನ್​ಗೆ ವಿರಾಟ್ ಕೊಹ್ಲಿ ಬೆಂಬಲ

ವಿರಾಟ್ ಕೊಹ್ಲಿ ಪಂದ್ಯದಲ್ಲಿ ಪಿಂಕ್ ಬಣ್ಣದ ಮೂಲಕ ಗಮನ ಸೆಳೆದರು. ಆಸೀಸ್ ದಿಗ್ಗಜ ವೇಗಿ ಗ್ಲೆನ್ ಮೆಕ್​ಗ್ರಾಥ್ ಅವರ ಫೌಂಡೇಷನ್​ಗೆ ಬೆಂಬಲ ಪೂರಕವಾಗಿ ಕೊಹ್ಲಿಯ ಬ್ಯಾಟ್ ಗ್ರಿಪ್ ಮತ್ತು ಅದರ ಮೇಲೆ ಬರೆದಿರುವ ಎಂಆರ್​ಎಫ್ ಅಕ್ಷರ ಅಲ್ಲದೆ ಹ್ಯಾಂಡ್ ಗ್ಲೌ, ಪ್ಯಾಡ್, ಶೂನ ಕೆಲ ಭಾಗ ಕೂಡ ಪಿಂಕ್ ಬಣ್ಣದ್ದಾಗಿತ್ತು.

ಪೂಜಾರ, ಮಯಾಂಕ್ ಮಿಂಚು

ಮೊದಲ ದಿನದಾಟದ ಆರಂಭದಲ್ಲಿ ಮಯಾಂಕ್ ಅಗರ್ವಾಲ್ ಮತ್ತು ದಿನದಂತ್ಯದವರೆಗೆ ಪೂಜಾರ ಅವರ ಆಟ ಅಮೋಘವಾಗಿತ್ತು. ಕೇವಲ ಶಾರ್ಟ್ ಎಸೆತಗಳ ಯೋಜನೆಯೊಂದಿಗೆ ಸತತ ದಾಳಿ ಆರಂಭಿಸಿದ ಆಸೀಸ್ ಆರಂಭಿಕ ಹಂತದಲ್ಲಿ ಭಾರತಕ್ಕೆ ರನ್ ಕಸಿಯಲು ಸವಾಲೊಡ್ಡಿತು. ಆದರೆ ಮಯಾಂಕ್ ಇಂಥ ಎಸೆತಗಳನ್ನು ಅತ್ಯಂತ ಎಚ್ಚರಿಕೆಯಿಂದ ಎದುರಿಸಿ ಕ್ರೀಸಿನಲ್ಲಿ ತಳವೂರಿದರು. ಬೌಂಡರಿ ಬಾರಿಸಿ ಸರಣಿಯಲ್ಲಿ 2ನೇ ಅರ್ಧಶತಕ ಪೂರೈಸಿದ ಮಯಾಂಕ್ ವಿಶೇಷವಾಗಿ ಸ್ಪಿನ್ನರ್ ನಾಥನ್ ಲ್ಯಾನ್​ರನ್ನು ಗುರಿ ಮಾಡಿಕೊಂಡರು. 2ನೇ ವಿಕೆಟ್​ಗೆ ಮಯಾಂಕ್-ಪೂಜಾರ ಜೋಡಿ 116 ರನ್ ಜತೆಯಾಟವಾಡಿತು. ಲ್ಯಾನ್​ಗೆ ಲಾಂಗ್ ಆಫ್ ಮತ್ತು ಲಾಂಗ್ ಆನ್​ನತ್ತ 2 ಸಿಕ್ಸರ್ ಸಿಡಿಸಿದ ಮಯಾಂಕ್ ಕೊನೆಗೆ ಲ್ಯಾನ್ ಎಸೆತದಲ್ಲೇ ಸ್ಟಾರ್ಕ್​ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ನಂತರ ಪೂಜಾರ ಲಯಬದ್ಧ ಆಟ ಆಸೀಸ್ ಬೌಲರ್​ಗಳನ್ನು ಸುಸ್ತಾಗಿಸಿತು. ಲೆಗ್​ಸ್ಪಿನ್ನರ್ ಮಾರ್ನಸ್ ಲಬುಶೇನ್​ರ ಒಂದೇ ಓವರ್​ನಲ್ಲಿ 3 ಬೌಂಡರಿ ಬಾರಿಸಿದ ಪೂಜಾರ ಆಸೀಸ್ ನಾಯಕನ ಯೋಜನೆಯನ್ನು ಉಲ್ಟಾ ಮಾಡಿದರು. ಕೊಹ್ಲಿ, ರಹಾನೆಯ ಉಪಯುಕ್ತ ಬ್ಯಾಟಿಂಗ್ ಜತೆ ಎಲ್ಲೂ ವಿಚಲಿತರಾಗದೆ ಬ್ಯಾಟಿಂಗ್ ಮುಂದುವರಿಸಿದ ಪೂಜಾರ 73ನೇ ಓವರ್​ನಲ್ಲಿ ಸ್ಕೆ್ವೕರ್​ಲೆಗ್​ನತ್ತ ಮನಮೋಹಕ ಬೌಂಡರಿ ಸಿಡಿಸಿ ಟೆಸ್ಟ್ ಕ್ರಿಕೆಟ್​ನ 18ನೇ ಶತಕ ಪೂರೈಸಿದರು. ಬಳಿಕ ವಿಹಾರಿ ನೀಡಿದ ಸಾಥ್​ನಿಂದ ತಂಡದ ಮೊತ್ತವನ್ನು ಸುಲಭವಾಗಿ 300ರ ಗಡಿ ದಾಟಿಸಿದರು.

ದೊಡ್ಡ ಇನಿಂಗ್ಸ್ ತಪ್ಪಿದ್ದಕ್ಕೆ ಮಯಾಂಕ್​ಗೆ ನಿರಾಸೆ

ಸತತ 2ನೇ ಪಂದ್ಯದಲ್ಲೂ ದೊಡ್ಡ ಮೊತ್ತ ಪೇರಿಸುವ ಅವಕಾಶ ತಪ್ಪಿದ್ದಕ್ಕೆ ಮಯಾಂಕ್ ನಿರಾಸೆ ವ್ಯಕ್ತಪಡಿಸಿದ್ದಾರೆ. ಈ ಸಲವೂ ದೊಡ್ಡ ಇನಿಂಗ್ಸ್ ಆಡಲು ತಪ್ಪಿದ್ದು ನಿರಾಸೆಯಾಯಿತು. ನಾನು ಈ ತಪ್ಪನ್ನು ಮತ್ತೆ ಪುನರಾವರ್ತಿಸದಿದ್ದರೆ, ಕಲಿಯಲು ಸುಲಭ. ನಾಥನ್ ಲ್ಯಾನ್ ಎದುರು ಮೇಲುಗೈ ಸಾಧಿಸಲು ಪ್ರಯತ್ನಿಸಿದೆ. ಆದರೆ ಕೈಯಾರೆ ವಿಕೆಟ್ ಕೊಟ್ಟೆ ಎಂದು ಮಯಾಂಕ್ ಅಗರ್ವಾಲ್ ನಿರಾಸೆ ವ್ಯಕ್ತಪಡಿಸಿದರು. ಇತ್ತೀಚೆಗೆ ನಾನು ನ್ಯೂಜಿಲೆಂಡ್ ಎ ಸರಣಿಯಲ್ಲಿ ಶಾರ್ಟ್ ಎಸೆತಗಳನ್ನು ಎದುರಿಸಿದ್ದೆ. ಆದರೆ ಇಲ್ಲಿ ಆಸೀಸ್ ಬೌಲಿಂಗ್ ಎದುರಿಸುವುದು ದೊಡ್ಡ ಸವಾಲು. ಪೂಜಾರ ಅವರ ಬ್ಯಾಟಿಂಗ್​ನಿಂದ ನಾವು ಕಲಿಯಲು ಸಾಕಷ್ಟು ಅಂಶಗಳಿವೆ. ಕಳೆದ 4-6 ತಿಂಗಳಲ್ಲಿ ರಾಹುಲ್ ದ್ರಾವಿಡ್ ಅವರಿಂದ ಸಿಕ್ಕಿದ ಸಲಹೆಗಳು ನೆರವಾಗಿದೆ ಎಂದು ಮಯಾಂಕ್ ಹೇಳಿದರು.