ರಾಯಚೂರು(Raichur): ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಾಣಂತಿ ಸರಸ್ವತಿ (24) ಹೆರಿಗೆಯಾದ ಬಳಿಕ ಮೃತಪಟ್ಟಿದ್ದಾರೆ. ಜನವರಿ 2 ರಂದು ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಸರಸ್ವತಿಗೆ ಸಿಸೇರಿಯನ್ ಮೂಲಕ ಹೆರಿಗೆ ಆಗಿತ್ತು. ಬಾಣಂತಿಯರ ಸಾವು ಮುಂದುವರಿದಿದ್ದು ಕಳೆದ ಮೂರು ತಿಂಗಳಲ್ಲಿ 12 ಮಂದಿ ಬಾಣಂತಿಯರು ಸಾವನ್ನಪ್ಪಿದ್ದಾರೆ.
ಇದನ್ನು ಓದಿ: ಅಪಘಾತದಲ್ಲಿ ಸೀಟಿನಲ್ಲಿ ಸಿಲುಕಿದ ಚಾಲಕ; ಸಹಾಯ ಮಾಡಲು ಬಂದವರು ಮಾಡಿದ್ದು ಮಾತ್ರ.. | Viral Video
ಹೆರಿಗೆ ಬಳಿಕ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಭಾನುವಾರ (ಜನವರಿ 5)ದಂದು ಸರಸ್ವತಿ ಮೃತಪಟ್ಟಿದ್ದಾರೆ. ವೆಂಟಿಲೇಟರ್ನಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಿಂಧನೂರು ತಾಲೂಕು ಆಸ್ಪತ್ರೆಗೆ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ನಾಲ್ವರು ಬಾಣಂತಿಯರು ಸಿಸೇರಿಯನ್ ಬಳಿಕ ಮೃತಪಟ್ಟಿದ್ದರು. ರಾಯಚೂರು ಜಿಲ್ಲೆಯವರೇಯಾದ ಮೌಸಂಬಿ ಮಂಡಲ್, ಚನ್ನಮ್ಮ, ಚಂದ್ರಕಲಾ, ರೇಣುಕಮ್ಮ ಮೃತ ಬಾಣಂತಿಯರು. ಈ ನಾಲ್ವರು ಬಾಣಂತಿಯರಿಗೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಕೆಯಾಗಿದ್ದ IV ದ್ರಾವಣವೇ ನೀಡಲಾಗಿತ್ತು ಎಂದು ಹೇಳಲಾಗಿದೆ.
ಬಳ್ಳಾರಿ, ರಾಯಚೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿನ ಬಾಣಂತಿಯರ ಸಾವಿನ ಸಂಖ್ಯೆ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. ಕಳೆದ ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ ಎಷ್ಟು ಬಾಣಂತಿಯರು ಮೃತಪಟ್ಟಿದ್ದಾರೆ? ಇವರ ಸಾವಿಗೆ ಕಾರಣವೇನು? ಎಂಬುವುದರ ಕುರಿತು ಸಮಗ್ರವಾಗಿ ತನಿಖೆ ನಡೆಸುತ್ತಿದ್ದು, ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಿದೆ.