More

    ರಮೇಶ್​ಗೆ ಇನ್ನು ಸಾಹಸವೂ ಪ್ರಿಯ

    ಬೆಂಗಳೂರು: ರೊಮ್ಯಾಂಟಿಕ್ ಹಾಗೂ ಭಾವನಾತ್ಮಕ ಪಾತ್ರಗಳಿಂದಲೇ ಗುರುತಿಸಿಕೊಂಡಿರುವ ನಟ ರಮೇಶ್ ಅರವಿಂದ್ ಇನ್ನುಮುಂದೆ ಆಕ್ಷನ್ ಹೀರೋ ಆಗಿ ಹೆಚ್ಚು ಕಾಣಿಸಿಕೊಂಡರೂ ಅಚ್ಚರಿ ಇಲ್ಲ. ಯಾಕೆ ಎಂದರೆ ಅದಕ್ಕೆ ‘ನೂರು’ ಕಾರಣವಿದೆ. ಅರ್ಥಾತ್, ರಮೇಶ್ ಅರವಿಂದ್ ನಿರ್ದೇಶನ ಹಾಗೂ ಅಭಿನಯದ ‘100’ ಚಿತ್ರ ಅವರಿಗೆ ಆಕ್ಷನ್​ನತ್ತ ಒಲವು ಮೂಡಿಸಿದೆ.

    ಹೌದು.. ‘ಸೂರಜ್ ಪ್ರೊಡಕ್ಷನ್’ ಬ್ಯಾನರ್​ನಲ್ಲಿ ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡಿರುವ ‘100’ ಚಿತ್ರದಲ್ಲಿ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿರುವುದಷ್ಟೇ ಅಲ್ಲ, ಫೈಟ್ ಕೂಡ ಮಾಡಿದ್ದಾರೆ. ಈ ಚಿತ್ರದಲ್ಲಿ ಇಬ್ಬಿಬ್ಬರು ಫೈಟ್ ಮಾಸ್ಟರ್​ಗಳ ನಿರ್ದೇಶನದಲ್ಲಿ ಅವರು ನಾಲ್ಕು ಫೈಟ್​ಗಳನ್ನು ಮಾಡಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ ಈಗಾಗಲೇ ನೂರಾರು ಸಿನಿಮಾಗಳಲ್ಲಿ ನಟಿಸಿರುವ ರಮೇಶ್ ಇದುವರೆಗೆ ಹೀರೋ ಆಗಿ ವಿಲನ್ ಎದುರು ನೇರಾನೇರ ಹೊಡೆದಾಡಿದ್ದಿಲ್ಲವಂತೆ. ‘ಈ ವರೆಗಿನ ಹಲವು ಸಿನಿಮಾಗಳಲ್ಲಿ ನನಗೆ ಪರಿಸ್ಥಿತಿ ಅಥವಾ ಸನ್ನಿವೇಶವೇ ವಿಲನ್ ಆಗಿರುತ್ತಿತ್ತು. ಆದರೆ ಈ ಚಿತ್ರದಲ್ಲಿ ನನಗೆ ಅಕ್ಷರಶಃ ಒಬ್ಬ ವಿಲನ್ ಎದುರಿಗಿದ್ದಾನೆ. ನಾನೂ ಫೈಟ್ ಮಾಡಿದ್ದೇನೆ. ಇನ್ನುಮುಂದೆ ಆಕ್ಷನ್ ಸಿನಿಮಾಗಳಿಗೂ ಆದ್ಯತೆ ಕೊಡುತ್ತೇನೆ’ ಎನ್ನುತ್ತಾರೆ ರಮೇಶ್. ಜತೆಗೆ ಅವರು ಸ್ಯಾಂಡಲ್​ವುಡ್​ಗೆ ‘ಉತ್ತಮ ವಿಲನ್’ ಒಬ್ಬರ ಪರಿಚಯ ಕೂಡ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದ ನಟ ವಿಶ್ವಕರ್ಣ ‘100’ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸುವ ಮೂಲಕ ಇದೇ ಮೊದಲ ಸಲ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ವಿಶ್ವ ಉತ್ತಮವಾಗಿ ಅಭಿನಯಿಸಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ರಮೇಶ್.

    ಮತ್ತೊಂದೆಡೆ ರಮೇಶ್ ಮುಖಾರವಿಂದದಲ್ಲಿ ಈಗ ಖಾಕಿ ಖದರ್ ಕಾಣಿಸತೊಡಗಿದೆ. ಅದಕ್ಕೆ ಮೂರು ಕಾರಣಗಳಿವೆ. ಅಂದರೆ ತಮ್ಮ ಅಭಿನಯದ ‘100’, ‘ಭೈರಾದೇವಿ’ ಹಾಗೂ ‘ಶಿವಾಜಿ ಸುರತ್ಕಲ್’ ಮೂರೂ ಸಿನಿಮಾಗಳಲ್ಲಿ ರಮೇಶ್ ಪೊಲೀಸ್ ಅಧಿಕಾರಿ ಆಗಿ ನಟಿಸಿದ್ದಾರೆ. ಇದು ಕೂಡ ಅವರ ಪಾಲಿಗೆ ವಿಶೇಷವೇ. ‘ಒಂದು ಕಾಲದಲ್ಲಿ ನಾನು ಬರೀ ತ್ಯಾಗರಾಜನ ಪಾತ್ರಗಳಲ್ಲಿ ಕಾಣಿಸಿಕೊಂಡೆ. ಆಮೇಲೆ ಒಂದಷ್ಟು ಕಾಮಿಡಿ ರೋಲ್​ಗಳು ಬಂದವು. ಈಗ ಬ್ಯಾಕ್ ಟು ಬ್ಯಾಕ್ ಪೊಲೀಸ್ ಪಾತ್ರಗಳೇ ಸಿಕ್ಕಿವೆ. ಈ ಮೂರೂ ಚಿತ್ರಗಳು ಇದೇ ವರ್ಷ ಬಿಡುಗಡೆ ಆಗಲಿವೆ. ಆದರೆ ಪ್ರತಿಪಾತ್ರವೂ ವಿಭಿನ್ನವಾಗಿದೆ’ ಎನ್ನುತ್ತಾರೆ ರಮೇಶ್. ರಚಿತಾ ರಾಮ್ ಪೂರ್ಣ ನಾಯಕಿಯರಾಗಿರುವ ‘100’ ಪೂರ್ಣಗೊಂಡಿದ್ದು, ಶೀಘ್ರ ಬಿಡುಗಡೆ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts