More

    ರಾಬರ್ಟ್​ಗೆ ಐಶ್ವರ್ಯಾ ದರ್ಶನ್​ಗೆಷ್ಟು ನಾಯಕಿಯರು?!

    ಬೆಂಗಳೂರು:  ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರತಂಡ ಒಂದಾದ ಮೇಲೊಂದು ವಿಷಯಗಳನ್ನು ಬಿಟ್ಟುಕೊಡುತ್ತ ಸಿನಿಮಾ ಕುರಿತ ಕುತೂಹಲವನ್ನು ಹೆಚ್ಚಿಸುತ್ತ ಹೋಗುತ್ತಿದೆ.

    ಇದೀಗ, ಆ ಚಿತ್ರದಲ್ಲಿನ ಮತ್ತೊಬ್ಬ ನಾಯಕಿಯ ಹೆಸರನ್ನು ಬಹಿರಂಗ ಪಡಿಸುವ ಮೂಲಕ ದರ್ಶನ್ ಅಭಿಮಾನಿಗಳ ಸಂಭ್ರಮವನ್ನಷ್ಟೇ ಅಲ್ಲದೆ ಖುದ್ದು ಆ ನಟಿಯ ಖುಷಿಯನ್ನೂ ಹೆಚ್ಚಿಸಿದೆ. ಏಕೆಂದರೆ.. ಜ. 26ರಂದೇ ಆ ನಟಿಯ ಬರ್ತ್​ಡೇ. ನಟಿ ಐಶ್ವರ್ಯಾ ಪ್ರಸಾದ್​ಗೆ ಜ. 26ರಂದು ಜನ್ಮದಿನದ ಶುಭಾಶಯ ಕೋರಿರುವ ನಿರ್ದೇಶಕ ತರುಣ್ ಸುಧೀರ್, ‘ರಾಬರ್ಟ್’ ತಂಡದಲ್ಲಿ ನಿಮ್ಮನ್ನು ಹೊಂದಿರುವುದಕ್ಕೆ ಸಂತೋಷವಾಗುತ್ತದೆ ಎಂದೂ ಹೇಳಿಕೊಂಡಿದ್ದಾರೆ.

    ಆ ಮೂಲಕ ರಾಬರ್ಟ್​ನಲ್ಲಿ ಮತ್ತೊಬ್ಬ ನಾಯಕಿ ಇರುವುದು ಸ್ಪಷ್ಟವಾಗಿದೆ. ಆರಂಭದಲ್ಲಿ ನಾಯಕಿ ಆಶಾ ಭಟ್ ಒಬ್ಬರ ಹೆಸರನ್ನಷ್ಟೇ ಬಹಿರಂಗಗೊಳಿಸಿದ್ದ ಚಿತ್ರತಂಡ ಬಳಿಕ ನಟಿ ತೇಜಸ್ವಿನಿ ಪ್ರಕಾಶ್, ಆ ನಂತರ ಇತ್ತೀಚೆಗೆ ನಟಿ ಸೋನಲ್ ಮೊಂತೆರೊ ಅವರ ಹೆಸರನ್ನೂ ಹೊರಬಿಟ್ಟಿತ್ತು. ಇದೀಗ ಐಶ್ವರ್ಯಾ ಪ್ರಸಾದ್ ಅವರು ತಂಡವನ್ನು ಸೇರಿರುವುದರಿಂದ ಚಿತ್ರದಲ್ಲಿನ ನಾಯಕಿಯರ ಸಂಖ್ಯೆ ನಾಲ್ಕಕ್ಕೇರಿದೆ. ಇನ್ನು ಚಿತ್ರತಂಡ ಶೂಟಿಂಗ್ ಮುಗಿದಿರುವುದನ್ನು ಈಗಾಗಲೇ ಘೋಷಿಸಿರುವುದರಿಂದ ಐಶ್ವರ್ಯಾ ಹೆಸರನ್ನು ಇಷ್ಟು ದಿನ ಗುಟ್ಟಾಗಿರಿಸಿಕೊಂಡಿತ್ತು ಎನ್ನಬಹುದು.

    ಐಶ್ವರ್ಯಾ ಮೂಲಕ ನಾಲ್ವರು ಕನ್ನಡತಿಯರು ‘ರಾಬರ್ಟ್’ ನಾಯಕಿಯರ ಪಟ್ಟಿಯಲ್ಲಿದ್ದಂತಾಗಿದೆ. ಮೂಲತಃ ಮೈಸೂರಿನವರಾಗಿರುವ ಐಶ್ವರ್ಯಾ ಪ್ರಸಾದ್ ಮಾಡೆಲಿಂಗ್​ನಲ್ಲಿಯೂ ತೊಡಗಿಸಿಕೊಂಡಿರುವವರು. ಈಗಾಗಲೇ ‘ಪಡ್ಡೆಹುಲಿ’ ಹಾಗೂ ‘ಶಾರ್ದೂಲಾ’ ಸಿನಿಮಾಗಳಲ್ಲಿ ಅಭಿನಯಿಸಿರುವುದರಿಂದ ಕನ್ನಡದಲ್ಲಿ ಅವರಿಗೆ ಇದು ಮೂರನೇ ಸಿನಿಮಾ. ಈ ಸಿನಿಮಾದಲ್ಲಿ ದರ್ಶನ್ ಜತೆಗೆ ಜಗಪತಿ ಬಾಬು, ವಿನೋದ್ ಪ್ರಭಾಕರ್, ರವಿಶಂಕರ್, ರವಿಕಿಶನ್ ಮುಂತಾದವರೂ ಅಭಿನಯಿಸಿದ್ದಾರೆ.

    ಆದರೆ ಈ ನಾಲ್ವರೂ ನಾಯಕಿಯರು ದರ್ಶನ್​ಗೆ ಜೋಡಿ ಆಗಿರುತ್ತಾರೋ ಇಲ್ಲವೋ ಎಂಬುದನ್ನು ನಿರ್ದೇಶಕರು ಬಿಟ್ಟುಕೊಡದ್ದರಿಂದ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮತ್ತೊಂದೆಡೆ ಸಿನಿಮಾ ಬಿಡುಗಡೆ ಆಗುವವರೆಗೂ ತರುಣ್ ಹೀಗೆ ಮತ್ತಷ್ಟು ವಿಷಯಗಳನ್ನು ಬಿಟ್ಟುಕೊಡುತ್ತ ಚಿತ್ರದ ಕುರಿತ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದರೂ ಅಚ್ಚರಿ ಏನಿಲ್ಲ.

    ಅಂದಹಾಗೆ ‘ಉಮಾಪತಿ ಫಿಲಮ್್ಸ’ ಬ್ಯಾನರ್​ನಲ್ಲಿ ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ, ಸದ್ಯದ ಯೋಜನೆ ಪ್ರಕಾರ ಏ. 9ಕ್ಕೆ ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ‘ರಾಬರ್ಟ್’ ಬಗ್ಗೆ ದರ್ಶನ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವುದಂತೂ ನಿಜ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts