ಅನೂಪ್ ಜತೆ ಸುದೀಪ್ ಆಕ್ಷನ್ ಸಿನಿಮಾ

ಬೆಂಗಳೂರು: ‘ರಂಗಿತರಂಗ’ ಚಿತ್ರದಿಂದ ಭಾರಿ ಯಶಸ್ಸು ಕಂಡ ನಿರ್ದೇಶಕ ಅನೂಪ್ ಭಂಡಾರಿ ಸ್ಯಾಂಡಲ್​ವುಡ್​ನ ಭರವಸೆಯ ನಿರ್ದೇಶಕ ಎನಿಸಿಕೊಂಡರು. ಅವರ ಕಸುಬುದಾರಿಕೆ ಕಂಡು ಮೆಚ್ಚಿಕೊಂಡವರ ಪೈಕಿ ‘ಕಿಚ್ಚ’ ಸುದೀಪ್ ಕೂಡ ಒಬ್ಬರು. ಅನೂಪ್ ಎರಡನೇ ಸಿನಿಮಾ ‘ರಾಜರಥ’ ತೆರೆಕಂಡಾಗ ಅದರ ಮೇಕಿಂಗ್ ನೋಡಿ ಖುಷಿಪಟ್ಟು, ನಿರ್ದೇಶಕರನ್ನು ಮನೆಗೆ ಕರೆಸಿ ಮಾತನಾಡಿಸಿದ್ದರಂತೆ ಸುದೀಪ್. ಅಷ್ಟಕ್ಕೂ ಈಗ ಯಾಕೆ ಆ ಹಳೇ ಕಥೆ ಅಂತೀರಾ? ಈ ನಟ-ನಿರ್ದೇಶಕನ ಜೋಡಿ ಈಗ ಹೊಸ ಸಿನಿಮಾ ಮಾಡಲು ಸಜ್ಜಾಗಿದೆ. ಅನೂಪ್ ಹೇಳಿದ ಕಥೆಯ ಎಳೆಯೊಂದು ಸುದೀಪ್​ಗೆ ಇಷ್ಟವಾಗಿದ್ದು, ನಾಯಕನಾಗಿ ನಟಿಸುವುದರ ಜತೆಗೆ ಬಂಡವಾಳ ಹೂಡಲೂ ಅವರು ಮುಂದೆಬಂದಿದ್ದಾರೆ. ಅಂದಹಾಗೆ, ಸುದೀಪ್​ಗೆ ಆಕ್ಷನ್-ಕಟ್ ಹೇಳಬೇಕು ಎಂದು ಅನೂಪ್ ಆಸೆ ಇಟ್ಟುಕೊಂಡಿದ್ದು ಇಂದು-ನಿನ್ನೆಯಿಂದಲ್ಲ.

ಬರೋಬ್ಬರಿ 18 ವರ್ಷ ಹಿಂದೆಯೇ ಅವರು ಅಂಥದ್ದೊಂದು ಕನಸು ಕಟ್ಟಿಕೊಂಡಿದ್ದರು. ‘2000ನೇ ವರ್ಷದಲ್ಲಿ ಸುದೀಪ್ ಸಲುವಾಗಿಯೇ ನಾನು ಮೊದಲ ಸ್ಕ್ರಿಪ್ಟ್ ಬರೆದಿದ್ದೆ. ನಂತರ ಅವರನ್ನು 2010ರಲ್ಲಿ ಭೇಟಿಯಾಗಿ ವಿಷಯ ತಿಳಿಸಿದ್ದೆ. ಕಥೆ ತಿದ್ದುಪಡಿ ಮಾಡಿಕೊಳ್ಳಿ ನೋಡೋಣ ಎಂದು ಅವರು ಭರವಸೆ ನೀಡಿದ್ದರು. ಆದರೆ ಆ ಕಥೆಯನ್ನು ಈಗ ಸಿನಿಮಾ ಮಾಡಲಾಗುತ್ತಿಲ್ಲವಾದರೂ ಹೊಸ ಕಥೆಯೊಂದಿಗೆ ಪ್ರೇಕ್ಷಕರೆದುರು ಬರಲಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ ಅನೂಪ್. ಅವರಿಬ್ಬರ ಕಾಂಬಿನೇಷನ್ ಎಂದಾಗ ಅಭಿಮಾನಿಗಳಲ್ಲಿ ನಿರೀಕ್ಷೆ ಸಹಜ. ಅದನ್ನು ತಲುಪುವ ನಿಟ್ಟಿನಲ್ಲಿ ಕಥೆ ಸಿದ್ಧಪಡಿಸಲಾಗುತ್ತಿದೆ ಯಂತೆ. ಆಕ್ಷನ್ ಅಡ್ವೆಂಚರ್ ಪ್ರಕಾರದ ಸಿನಿಮಾ ಮಾಡಬೇಕು ಎಂಬ ಲೆಕ್ಕಾಚಾರ ಹಾಕಿಕೊಂಡಿರುವ ಅನೂಪ್, ಪ್ರಿ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚು ಸಮಯ ಮೀಸಲಿಡಲಿದ್ದಾರೆ. ವಿಶೇಷವೆಂದರೆ ಸುದೀಪ್ ‘ಸುಪ್ರಿಯಾನ್ವಿ ಪ್ರೊಡಕ್ಷನ್’ ಎಂಬ ಹೊಸ ನಿರ್ಮಾಣ ಸಂಸ್ಥೆ ಆರಂಭಿಸುತ್ತಿದ್ದು, ತಮ್ಮ ಹೆಸರಿನ ಜತೆ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಹೆಸರುಗಳನ್ನು ಒಂದಾಗಿಸಿ ಈ ಬ್ಯಾನರ್​ಗೆ ನಾಮಕರಣ ಮಾಡಿದ್ದಾರೆ. ಈ ಹೊಸ ಬ್ಯಾನರ್​ನಲ್ಲಿ ತಯಾರಾಗಲಿರುವ ಮೊದಲ ಚಿತ್ರಕ್ಕೆ ತಾವು ಆಕ್ಷನ್-ಕಟ್ ಹೇಳಲಿರುವುದು ಅನೂಪ್​ಗೆ ಖುಷಿ ನೀಡಿದೆ. ಪ್ರಸ್ತುತ ‘ಕೋಟಿಗೊಬ್ಬ 3’ ಮತ್ತು ‘ಪೈಲ್ವಾನ್’ ಚಿತ್ರದ ಕೆಲಸಗಳಲ್ಲಿ ಸುದೀಪ್ ಬಿಜಿ. ಅವು ಪೂರ್ಣಗೊಂಡ ಬಳಿಕವೇ ಅನೂಪ್ ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ ಅವರು ಕಾಲ್​ಶೀಟ್ ನೀಡಲಿದ್ದಾರೆ.

ಸದ್ಯಕ್ಕೆ ಈ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಹೊಸ ಗೆಟಪ್ ಮತ್ತು ಮ್ಯಾನರಿಸಂನಲ್ಲಿ ಸುದೀಪ್​ರನ್ನು ತೋರಿಸುವ ಪ್ಲಾ್ಯನ್ ಹಾಕಿಕೊಂಡಿದ್ದೇವೆ. ಡಿ.20ರಂದು ಶೀರ್ಷಿಕೆ ಪೋಸ್ಟರ್ ಬಿಡುಗಡೆ ಆಗಲಿದ್ದು, ಅದರ ಜತೆ ಹೆಚ್ಚಿನ ಮಾಹಿತಿ ನೀಡುತ್ತೇವೆ.

| ಅನೂಪ್ ಭಂಡಾರಿ ನಿರ್ದೇಶಕ