More

  ಅಂಧರಿಗೆ ವರದಾನ ಆ್ಯನಿ

  ಅಂಧರಿಗಾಗಿ ಬ್ರೖೆಲ್ ಲಿಪಿ ಇದ್ದರೂ, ಇಡೀ ತರಗತಿಯ ಮಕ್ಕಳಿಗೆ ಒಟ್ಟಿಗೇ ಹೇಳಿಕೊಡುವುದು ಶಿಕ್ಷಕರಿಗೆ ಸವಾಲಿನ ಕೆಲಸವೇ ಸರಿ. ಒಬ್ಬ ವಿದ್ಯಾರ್ಥಿ ಐದು ನಿಮಿಷಗಳಷ್ಟೇ ಶಿಕ್ಷಕರ ವೈಯುಕ್ತಿಕ ಗಮನವನ್ನು ಪಡೆದುಕೊಳ್ಳಲು ಸಮರ್ಥರಾಗುತ್ತಿರುವುದನ್ನು ಅರಿತ ನಾಲ್ವರು ಯುವ ಇಂಜಿನಿಯರ್ಸ್, ಈ ಬಗೆಯ ಬೋಧನಾ ಪದ್ಧತಿಯು ನಿರೀಕ್ಷಿತ ಕಲಿಕಾ ಫಲವನ್ನು ಪಡೆಯುವುದರಲ್ಲಿ ಅಸಮರ್ಥವಾಗುತ್ತಿದೆ ಎಂದರಿತರು. ಇದರ ಫಲವೇ ‘ಆನಿ’. ಅಲ್ಪ ಕಾಲದಲ್ಲಿಯೇ ದೇಶಾದ್ಯಂತ ಪ್ರಸಿದ್ಧಿ ಹೊಂದಿರುವ ಈ ಉಪಕರಣದ ಬಗ್ಗೆ ಇಲ್ಲಿದೆ ವಿವರ…

  2016ರ ಮೇ ತಿಂಗಳಿನಲ್ಲಿ ಇಂಜಿನಿಯರಿಂಗ್ ಪದವಿಯೊಂದಿಗೆ ಗೋವಾದ ಬಿಟ್ಸ್ ಪಿಲಾನಿಯಿಂದ ಹೊರಬಂದ ನಾಲ್ಕು ಮಂದಿ ಉತ್ಸಾಹಿ ಯುವಕರಿಗೆ ಉದ್ಯೋಗದ ಅವಕಾಶಗಳ ಹಲವು ಬಾಗಿಲುಗಳು ತೆರೆದುಕೊಂಡಿದ್ದವು. ಆದರೆ, ಅವು ಯಾವುವೂ ಅವರಿಗೆ ಆಕರ್ಷಕವೆನಿಸಿರಲಿಲ್ಲ. ಏಕೆಂದರೆ, ಪದವಿಯ ಕಡೆಯ ಹಂತಕ್ಕೆ ಬರುವಷ್ಟರಲ್ಲಿಯೇ ಅವರೆಲ್ಲ ಒಂದು ನಿರ್ಧಾರಕ್ಕೆ ಬಂದಿದ್ದರು. ಅದೇ ಸಮಾಜದಲ್ಲಿ ದೃಷ್ಟಿವಂಚಿತರಾದ ಸಮುದಾಯಕ್ಕೆ ತಾವು ನೆರವಾಗಬೇಕೆಂಬುದು.

  ಆರಂಭಿಕ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು (ಮುಖ್ಯವಾಗಿ ಹಣಕಾಸಿನ ವಿಷಯ) ಎದುರಿಸಲು ಸಿದ್ಧರಾಗಿದ್ದರು. ಅದರ ಫಲವಾಗಿಯೇ ರೂಪುಪಡೆದಿರುವುದು ‘ಥಿಂಕರ್ ಬೆಲ್ ಲ್ಯಾಬ್ಸ್’. ಸಮಾಜಮುಖಿ ಪ್ರಾಜೆಕ್ಟ್ ಮಾಡಬೇಕೆಂಬ ಅಪೇಕ್ಷೆಯೊಂದಿಗೆ ಹುಡುಕಾಟ ನಡೆಸುತ್ತಿರುವಾಗ ಈ ಯುವಕರಿಗೆ ಗೋಚರವಾದದ್ದು ಬ್ರೈಲ್ ಸಾಕ್ಷರತಾ ಜ್ಞಾನದ ಕ್ಷೇತ್ರ. ಅದು ಹೆಚ್ಚು ಕಾರ್ಯನಡೆದಿಲ್ಲದ ಕ್ಷೇತ್ರವೆಂದು ತಿಳಿಯಿತು. ದೃಷ್ಟಿವಂಚಿತರ ಶಿಕ್ಷಣಕ್ಷೇತ್ರದಲ್ಲಿ ಬಹುದೊಡ್ಡ ಪರಿಣಾಮವನ್ನು , ಸುಧಾರಣೆಯನ್ನು ತರಬಹುದೆಂಬುದೂ ಅವರಿಗೆ ಅರಿವಾಗಿತ್ತು. ಮುಂದೆ ಕಚ್ಚಾರೂಪದಲ್ಲಿಯೇ ಉಪಕರಣವೊಂದನ್ನು ಸಿದ್ಧಪಡಿಸಿದ್ದರು. ಅದೇ ‘ಪ್ರಾಜೆಕ್ಟ್ ಮುದ್ರಾ’ ಎಂಬ ಮೊದಲ ಯೋಜನೆ. ಅದರಲ್ಲಿ ಭಾಗಿಗಳಾಗಿದ್ದವರು ಮೊದಲಿಗೆ ಸಂಸ್ಕೃತಿ ದಾವ್ಲೆ ಮತ್ತು ಅಮನ್ ಶ್ರೀವಾಸ್ತವ ಎಂಬ ಇಬ್ಬರು ವಿದ್ಯಾರ್ಥಿಗಳು.

  ಏನಿದು ‘ಪ್ರಾಜೆಕ್ಟ್ ಮುದ್ರಾ’?: ಪ್ರಾಜೆಕ್ಟ್ ಮುದ್ರಾ ಎಂದರೆ ಬ್ರೈಲ್ ಅಕ್ಷರ ಜ್ಞಾನವನ್ನು ಪ್ರಾರಂಭಿಸುವ ಒಂದು ಸಾಫ್ಟ್​ವೇರ್ ಮತ್ತು ಹಾರ್ಡ್​ವೇರ್. ಅದು ದೃಷ್ಟಿವಂಚಿತರ ಉಪಕರಣಕ್ಕೆ ಪ್ರತಿಧ್ವನಿ ವ್ಯವಸ್ಥೆಯನ್ನು ಒದಗಿಸುತ್ತದೆ. ವಿನ್ಯಾಸ ಮತ್ತು ತಂತ್ರಜ್ಞಾನ ಎರಡನ್ನೂ ದೃಷ್ಟಿವಂಚಿತರಿಗೋಸ್ಕರವೇ ಸಿದ್ಧಪಡಿಸಿ ಅವರಿಗೆ ಶೈಕ್ಷಣಿಕ ತಂತ್ರಜ್ಞಾನದ ಅನುಭವ ದೊರೆಯುವಂತೆ ಮಾಡಲಾಗಿತ್ತು. ಅದನ್ನು ಮಾಡಿದ್ದು 2014ರಲ್ಲಿ . ಅದಕ್ಕೆ ಎಲ್ಲರಿಂದ ಸಕಾರಾತ್ಮಕ ಪ್ರತಿಕ್ರಿಯೆ (ಕಾಲೇಜಿನಿಂದ ’ಎ’ಗ್ರೇಡ್) ಬಂದಿತ್ತು. ಆದರೆ ಅದನ್ನು ಕಮರ್ಷಿಯಲ್ ಆಗಿ ಅನುಷ್ಠಾನಕ್ಕೆ ತರುವ ಬಗ್ಗೆ ರ್ಚಚಿಸಬೇಕಾಯಿತು. ಏಕೆಂದರೆ, ಸಾಮಾನ್ಯವಾಗಿ ಇಂಥ ಸಾಧನಗಳನ್ನು ಧರ್ವರ್ಥವಾಗಿ ಅಥವಾ ಯಾವುದೋ ಒಂದು ಸಂಸ್ಥ್ಥೆಗೆ ಸಹಾಯಾರ್ಥವಾಗಿ ಮಾಡುತ್ತಾರೆ. ಆದರೆ ವ್ಯಾಪಾರಿ ದೃಷ್ಟಿಯಿಂದ ಮಾಡಿದರೆ ಕೊಳ್ಳುವವರಿಗೆ ಅದು ಸಾಧ್ಯವೇ? ಬಂಡವಾಳ ಹೂಡುವ ಮಂದಿ ಬೇಕಾಗುತ್ತದಲ್ಲವೇ? ಉತ್ಪಾದನೆ ಚೆನ್ನಾಗಿದ್ದರೂ ಜನ ಖರೀದಿಸಬೇಕಲ್ಲ? ಎಂಬೆಲ್ಲಾ ನಿಟ್ಟಿನಲ್ಲಿ ಒಂದಷ್ಟು ಸಂಶೋಧನೆ ಮಾಡಲು ಸಲಹೆಗಳು ಬಂದಿದ್ದುವು. ಮುಂದೆ ಕಾಲೇಜಿನಲ್ಲಿ ಡೀನ್ ಸುರೇಶ್ ರಾಮಸ್ವಾಮಿ ಮೆಮೋರಿಯಲ್ ಕಾಂಪಿಟಿಷನ್​ನಲ್ಲಿ ಪಾಲ್ಗೊಳ್ಳಲು ಈ ಎಲ್ಲಾ ಅಂಶಗಳು ಪ್ರೇರಣೆ ನೀಡಿದ್ದವು. ಅದು ವಿಜ್ಞಾನ ಮತ್ತು ತಂತ್ರಜ್ಞಾನದ ಯೋಜನೆಯಲ್ಲಿ ಕಾರ್ಯನಿರತರಾಗಿರುವ ಯಾರೇ ವಿದ್ಯಾರ್ಥಿ ಭಾಗವಹಿಸುವಂತಹುದಾಗಿತ್ತು. ಅದರಲ್ಲಿ ಪ್ರಾಜೆಕ್ಟ್ ಮುದ್ರಾ ತಂಡ ಪಾಲ್ಗೊಂಡು ಬಹುಮಾನ ವಿಜೇತರಾಗಿ 40 ಸಾವಿರ ರೂ.ಗಳ ನಗದಿನೊಂದಿಗೆ ಕಾಲೇಜಿನ ಪ್ರಯೋಗಶಾಲೆಯಲ್ಲಿ ಅವರ ಕಾರ್ಯವನ್ನು ಮುನ್ನಡೆಸುವ ಅನುಮತಿ ಕೂಡ ದೊರಕಿತ್ತು. ಅಷ್ಟರಲ್ಲಿ ಈ ಗುಂಪಿಗೆ ಸಯೀಫ್ ಸೈಕತ್ ಸೇರ್ಪಡೆಯಾದರು. ಈ ಪ್ರಾಜೆಕ್ಟ್​ನ ಮುಂದುವರೆದ ಭಾಗವಾಗಿ ಯುವಕರು, ಹೈದರಾಬಾದಿನ ಎಲ್.ವಿ.ಪ್ರಸಾದ್ ಕಣ್ಣಿನ ಆಸ್ಪತ್ರೆ ಮತ್ತು ಪುನಶ್ಚೇತನ ಕೇಂದ್ರಕ್ಕೆ ಹೋಗಿ ಬ್ರೈಲ್ ಕಲಿತರು.

  ಅಲ್ಲಿಯೇ ದೇವನಾರ್ ಅಂಧಮಕ್ಕಳ ಶಾಲೆಗೆ ಹೋಗಿ ತಮ್ಮ ಉಪಕರಣದ ಪ್ರದರ್ಶನ ಮಾಡಿದರು. ಉಪಕರಣವನ್ನು ಬಳಸಿದಾಗ ಮಕ್ಕಳಲ್ಲಿ ಕಂಡ ಸಂಭ್ರಮ ಅವರಿಗೆ ತಾವು ಸರಿಯಾದ ದಾರಿಯಲ್ಲಿ ಸಾಗಿದ್ದೇವೆಂದು ಬೆನ್ನು ತಟ್ಟಿಕೊಳ್ಳವಂತಾಗಿತ್ತು. ಆಗ ಅವರ ತಂಡ ಸೇರಿಕೊಂಡವರು ಸ್ಟಾರ್ ಪೋ›ಗ್ರಾಮರ್ ಆಗಿರುವ ದಿಲೀಪ್ ರಮೇಶ್. ಹೀಗೆ ಸಂಖ್ಯೆ ನಾಲ್ಕಕ್ಕೆ ಏರಿತು.

  ತಮ್ಮ ಉಪಕರಣವನ್ನು ಸಾರ್ವಜನಿಕ ಕ್ಷೇತ್ರಕ್ಕೆ ಪರಿಚಯಿಸುವ ನಿರ್ಧಾರ ಮಾಡಿದ ತಂಡ ದೇಶದಲ್ಲಿ ಎಷ್ಟು ಜನ ದೃಷ್ಟಿವಂಚಿತರಿದ್ದಾರೆ, ಯಾವ ಯಾವ ರೀತಿಯ ಸಾಧನಗಳನ್ನು ಅವರೆಲ್ಲ ಬಳಸುತ್ತಿದ್ದಾರೆ ಎಂಬಿತ್ಯಾದಿ ಸರ್ವೆ ಮಾಡಿತು.

  2016ರ ಜನವರಿಯಲ್ಲಿ ಸಾಧನದ ಮೊದಲ ವಿನ್ಯಾಸ ರೂಪುಗೊಂಡಿತು. ಗೋವಾದಲ್ಲಿ ಇದಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕರೂ ಶಾಲೆಗೆ ಇದನ್ನು ಕೊಂಡುಕೊಳ್ಳಲು ಆರ್ಥಿಕ ಬಲವಿರಲಿಲ್ಲ. ಆಗ ಯುವಕರು ದಾನಿಯೊಬ್ಬರನ್ನು ಸಂರ್ಪಸಿದರು. ಈ ತಂಡದ ಸಾಧನೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಎರಡು ಯುನಿಟ್​ಗಳನ್ನು ಕೊಳ್ಳುವುದಾಗಿ ಹೇಳಿ 40 ಸಾವಿರ ರೂಪಾಯಿಗಳ ನಗದನ್ನು ಮುಂಗಡವಾಗಿ ಕೊಟ್ಟೇಬಿಟ್ಟಿದ್ದರು. ಆ ಅನಿರೀಕ್ಷಿತ ಪ್ರತಿಕ್ರಿಯೆ ಕಂಡ ವಿದ್ಯಾರ್ಥಿಗಳಿಗೆ ಸಂತೋಷದೊಂದಿಗೆ ಅತ್ಯಾಶ್ಚರ್ಯವೂ ಆಗಿತ್ತು. ಅದವರ ಮೊದಲ ಮಾರಾಟವಾಗಿತ್ತು. ಅಲ್ಲಿಂದ ಇದೀಗ ಈ ಉಪಕರಣ ಈಗ ರಾಂಚಿ, ಪುಣೆ, ಗೋವಾ, ತೆಲಂಗಾಣ, ನಾಗಪುರ, ದೆಹಲಿ, ಚಂಡೀಗಢ, ಛತ್ತೀಸ್​ಗಢ ಮತ್ತು ಬೆಂಗಳೂರಿನಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ತನ್ನ ಗ್ರಾಹಕರನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

  ಇಂಥದ್ದೊಂದು ಉಪಕರಣ ತಯಾರಿಸುವ ಯೋಚನೆ ಹೇಗೆ ಬಂತು ಎಂದು ಈ ಯುವಕರು ವಿವರಿಸುವುದು ಹೀಗೆ: ‘ಕಾಲೇಜಿನಲ್ಲಿದ್ದಾಗ ಪಠ್ಯಕ್ರಮದಲ್ಲಿ ‘ನ್ಯೂವೆಂಚರ್ ಕ್ರಿಯೇಶನ್ಸ್’ ಎಂಬ ಒಂದು ಕೋರ್ಸ್ ಅಳವಡಿಸಲಾಗಿತ್ತು. ಯಾವುದಾದರೊಂದು ಉದ್ಯಮವನ್ನು ಪ್ರಾರಂಭಿಸುವ ಯೋಜನೆಯೊಂದಿಗೆ ಆರು ತಿಂಗಳ ಅವಧಿಯಲ್ಲಿ ಅದು ಎರಡನೇ ಹಂತ ತಲುಪುವಂತೆ ಬೆಳೆಸಬೇಕಾಗಿತ್ತು. ಬೇರೆ ಬೇರೆ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಕಾಲೇಜಿಗೆ ಆಹ್ವಾನಿಸಿ ಅಥವಾ ವಿಡಿಯೋ ಕರೆಯ ಮೂಲಕ ಭಾಗಿಯಾಗುವಂತೆ ವ್ಯವಸ್ಥೆಮಾಡಿ ಅವರ ಅನುಭವಗಳನ್ನು ಹಂಚಿಕೊಳ್ಳುವ, ಸಲಹೆಪಡೆಯುವ ಅವಕಾಶಗಳನ್ನು ಒದಗಿಸಲಾಗುತ್ತಿತ್ತು. ಹೈದರಾಬಾದ್, ಪಿಲಾನಿ ಮತ್ತು ಗೋವಾ- ಮೂರೂ ಕೇಂದ್ರಗಳು ಸೇರಿ ಈ ಆಯೋಜನೆ ಮಾಡುತ್ತಿದ್ದವು.

  ಕೇವಲ ಹಣ ಸಂಪಾದನೆಯಿಂದಲೇ ಮನಸ್ಸಿಗೆ ನಿಜವಾದ ತೃಪ್ತಿ, ಸಂತೋಷ ಸಿಕ್ಕುವುದಿಲ್ಲವೆಂಬ ಅರಿವು ನಮಗಾದದ್ದು ಆಗಲೇ. ಅದರ ಪರಿಣಾಮವಾಗಿಯೇ ಹೊಸದೇನನ್ನಾದರೂ ಮಾಡಬೇಕೆಂಬ ತುಡಿತವೂ ಶುರುವಾಗಿತ್ತು.

  ಆ್ಯನಿಯಾದ ಪ್ರಾಜೆಕ್ಟ್ ಮುದ್ರಾ…

  ಗೋವಾದಲ್ಲಿ ‘ಗ್ರೇಟ್ ಟೆಕ್ ರಾಕೆಟ್​ಷಿಪ್ಸ್’ ಎಂಬ ಸ್ಪರ್ಧೆಗಾಗಿ ಒಂದು ಅವಾರ್ಡ್ ಇಡಲಾಗಿದೆ. ಅದನ್ನು ವ್ಯವಸ್ಥೆ ಮಾಡುವವರು ‘ಯು.ಕೆ ಡಿಪಾರ್ಟಮೆಂಟ್ ಆಫ್ ಇಂಟರ್ ನ್ಯಾಷನಲ್ ಟ್ರೇಡ್’. ಪ್ರಾಜೆಕ್ಟ್ ಮುದ್ರಾ ಅಲ್ಲಿ ಬಹುಮಾನ ಪಡೆದುಕೊಂಡಿತ್ತು. ಜತೆಗೆ ಇಂಗ್ಲೆಂಡ್​ನಲ್ಲಿ ನಡೆದ ‘ಟೆಕ್ ವೀಕ್’ಗೆ ಭೇಟಿ ಕೊಡಲು ಆಹ್ವಾನವೂ ಸಿಕ್ಕಿತ್ತು. ಅಲ್ಲಿಯ ರಾಜಮನೆತನದ ಡ್ಯೂಕ್ ಆಂಡ್ ಡಚಸ್ ಆಫ್ ಕೇಂಬ್ರಿಡ್ಜ್​ನ ವಿಲಿಯಮ್ ಕ್ಯಾರೊಲಿನ್ ದಂಪತಿ ಮುಂಬೈ ಪ್ರವಾಸಕ್ಕೆ ಬಂದಾಗ ಅಲ್ಲಿ ನಡೆದ ಉಪಕರಣಗಳ ಪ್ರದರ್ಶನದಲ್ಲಿ ಈ ತಂಡಕ್ಕೆ ಆಹ್ವಾನ ಬಂದಿತ್ತು. ಪ್ರತಿಸ್ಪಂದನವನ್ನು ಪಡೆಯಬೇಕೆಂದು ಯೋಚಿಸಿ ಅನೇಕ ಸುಧಾರಣೆಗಳೊಂದಿಗೆ ಅದನ್ನೊಂದು ಕೌಶಲಪೂರ್ಣವಾದ ವಿನ್ಯಾಸದೊಂದಿಗೆ ಪ್ರದರ್ಶನಕ್ಕಿಟ್ಟಿದ್ದರು. ಆಗಲೇ ಪ್ರಾಜೆಕ್ಟ್ ಮುದ್ರಾ ಎಂಬುದು ‘ಆನಿ’ ಎಂದು ಮರುನಾಮಕರಣಗೊಂಡಿತ್ತು.

  ಯಾರು ಈ ಆ್ಯನಿ?:

  ಆನಿ ಸಲ್ಲಿವಾನ್ ಶಾಲೆಗೇ ಹೋಗದ ಒಬ್ಬಳು ಬಾಲಕಿ. ‘ರವೆಗಣ್ಣು’ ಎಂಬ ಕಣ್ಣಿನ ವ್ಯಾಧಿಯಿಂದ ಬಹುಪಾಲು ಅಂಧಳಾಗಿಯೇ ಉಳಿದವಳು. ಮುಂದೆ, ಅಮೆರಿಕದ ಪ್ರತಿಭಾನ್ವಿತ ಶಿಕ್ಷಕಿಯಾಗಿ ನಂತರ ಹೆಲೆನ್ ಕೆಲರ್​ಳ ಆಜೀವ ಜೊತೆಗಾತಿಯಾಗಿದ್ದವಳು. ‘ಮುದ್ರಾ ಪ್ರಾಜೆಕ್ಟ್’ನ ತಂಡಕ್ಕೆ ಇದೇ ಸೂಕ್ತ ಹೆಸರು ಎನಿಸಿದ್ದರಿಂದ ‘ಆನಿ’ ರೂಪುಗೊಂಡಿದ್ದಳು. ಬೆಂಗಳೂರನ್ನು ಕೇಂದ್ರವನ್ನಾಗಿಸಿಕೊಂಡ ಕಂಪನಿ ಪ್ರಾರಂಭವಾಗಿತ್ತು. ದೃಷ್ಟಿವಂಚಿತರಿಗೆ ಓದಲು ,ಬರೆಯಲು ಹೇಗೆ ಕಲಿಸಬಹುದೆಂದು ಯೋಚಿಸಿ, ತಮ್ಮೊಂದಿಗೆ ಒಬ್ಬ ಸಮರ್ಥ ಶಿಕ್ಷಕರನ್ನು ಉಪಕರಣದ ರೂಪದಲ್ಲಿ ಪರಿಚಯಿಸಿದ್ದರು ಈ ಇಂಜಿನಿಯರ್ಸ್.

  ‘ಆ್ಯನಿ’ ಏನು ಮಾಡುತ್ತದೆ?

  ಆ್ಯನಿ’ ಬ್ರೈಲ್ ಕಲಿಕೆಯನ್ನು ರಂಜನೀಯವಾಗಿಸುತ್ತದೆ. ಸ್ಪರ್ಶಜ್ಞಾನದ ಹಾರ್ಡ್​ವೇರ್ ಘಟಕಗಳನ್ನು ಎಚ್ಚರಿಕೆಯಿಂದ ಸಿದ್ಧಪಡಿಸಲಾಗಿದ್ದು ಅವು ಕಲಿಸಲು ಸಹಾಯಕವಾಗಿವೆ. ಅದಕ್ಕೆ ಅಳವಡಿಸಿದ ಮೃದುವಾದ , ಆತ್ಮೀಯವಾದ ಮಾನವ ಧ್ವನಿಯು ಪಾಠಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ಕೈಯನ್ನೇ ಬಳಸಿ ಉಪಕರಣ ಹಿಡಿಯುವುದನ್ನು ಮತ್ತು ನಿರಂತರ ಮೇಲ್ವಿಚಾರಣೆಯ ಅಗತ್ಯವಿಲ್ಲದಂತೆ ಮಾಡುತ್ತದೆ.

  ಆ್ಯನಿ’ ವಿದ್ಯಾರ್ಥಿಗಳಿಂದ ಬಂದ ಉತ್ತರಗಳನ್ನು ತಕ್ಷಣವೇ ಮೌಲ್ಯಮಾಪನ ಮಾಡುತ್ತಾ ಅಚ್ಚುಕಟ್ಟಾದ ಪ್ರತಿಸ್ಪಂದನವನ್ನು ನೀಡುತ್ತದೆ. ವಿಶೇಷ ಅನುಕೂಲವೆಂದರೆ, ಶಿಕ್ಷಕರು ಒಂದೇ ಸಮಯದಲ್ಲಿ ಬಹು ಸಂಖ್ಯೆಯ ವಿದ್ಯಾರ್ಥಿಗಳಿಗೆ ಕಲಿಸಲು, ಅವರನ್ನು ಗಮನಿಸಲು ಸಾಧ್ಯಮಾಡುತ್ತದೆ. ಇದು ವಿದ್ಯಾರ್ಥಿಗಳು ಅವರವರ ಸ್ಥಳೀಯ ಭಾಷೆಯ ಮೂಲಕ ಕಲಿಯಲು ನೆರವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಒಂದು ಲೋಕಲ್ ಸರ್ವರ್ ಮೂಲಕ ಸಂಪರ್ಕ ನೀಡಲಾಗಿರುತ್ತದೆ. ಶಿಕ್ಷಕರ ಬಳಿಯಿರುವ ‘ಆನಿ’ಯ ಕೀಬೋರ್ಡ್ ಮೂಲಕ ಸೂಚನೆಗಳನ್ನು ಕಳುಹಿಸಿದಾಗ ವಿದ್ಯಾರ್ಥಿಗಳು ತಮ್ಮ ಬಳಿಯಿರುವ ‘ಆನಿ’ಯಲ್ಲಿ ಕೀಬೋರ್ಡ್ ಬಳಸಿ ಕಲಿಯುತ್ತಾರೆ. ಇದರಲ್ಲಿ ಎರಡು ಔಟ್​ಪುಟ್​ಗಳಿರುತ್ತವೆ. ಒಂದು ದೊಡ್ಡ ಗಾತ್ರದ ಬ್ರೈಲ್ ಸಂಕೇತಗಳಿದ್ದು ಸಣ್ಣ ಮಕ್ಕಳು ಅಕ್ಷರಗಳನ್ನು ಗುರುತಿಸುವುದಕ್ಕಾಗಿದ್ದರೆ, ಎರಡನೆಯದರಲ್ಲಿ ಸ್ಟಾ್ಯಂಡರ್ಡ್ ಗಾತ್ರದಲ್ಲಿ ಬ್ರೈಲ್ ಸಂಕೇತಗಳು ಇರುತ್ತವೆ. ಭಾರತದ ಹೆಚ್ಚಿನ ಈ ವಿಶೇಷ ಶಾಲೆಗಳು ಹಳೆಯ ಉಪಕರಣಗಳನ್ನೇ ಅಂದರೆ ಪರ್ಕನ್ ಬ್ರೈಲರ್ -(ಟೈಪ್​ರೈಟರ್ ಬ್ರೈಲ್ ನಲ್ಲಿ ಬಳಸುವಂತಹುದು) ಮರದ ಬ್ಲಾಕ್​ಗಳು ಅಥವಾ ಬ್ರೈಲ್ ಸ್ಲೇಟ್​ಗಳು ಮತ್ತು ಒಂದು ಸ್ಪೀಕರ್ ಬಳಸುತ್ತಿದ್ದಲ್ಲಿ, ಆನಿ ಅವುಗಳ ಸ್ಥಾನದಲ್ಲಿ ಬಳಕೆಗೆ ಬಂದರೆ ಹಲವು ರೀತಿಗಳಲ್ಲಿ ಆ ದೃಷ್ಟಿವಂಚಿತ ಮಕ್ಕಳ ಕಲಿಕಾ ವಿಧಾನದಲ್ಲಿ ಸುಧಾರಣೆಯೊಂದಿಗೆ ಶೀಘ್ರ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆಯಬಹುದಾಗಿದೆ.

  ‘ಆ್ಯನಿ’ಯ ತಂಡ

  ಥಿಂಕರ್​ಬೆಲ್ ಲ್ಯಾಬ್ಸ್​ನಲ್ಲಿ ಸಂಸ್ಕೃತಿ ದಾವ್ಲೆ ಕಂಪೆನಿಯ ಸಿ.ಇ.ಓ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಮನ್ ಶ್ರೀವಾಸ್ತವ ವ್ಯಾಪಾರೀ ವ್ಯವಹಾರಗಳ ಹೊಣೆ ಹೊತ್ತಿದ್ದು, ದಿಲೀಪ್ ರಮೇಶ್ ಎಲ್ಲ ಬಗೆಯ ಪ್ರೋಗ್ರಾಂಗಳನ್ನು ನಿರ್ವಹಿಸುತ್ತಾ ಪ್ರಾಡಕ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸಯೀಫ್ ಶೈಕತ್ ಯಂತ್ರವಿನ್ಯಾಸದ ತಜ್ಞರಾಗಿರುತ್ತಾರೆ.

  | ನಂ. ನಾಗಲಕ್ಷ್ಮಿ

  ಸಂಪರ್ಕಕ್ಕೆ ವೆಬ್​ಸೈಟ್: www.thinkerbelllabs.com

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts