More

    ಕೃಷಿ ಭೂಮಿಯಲ್ಲಿ ಹೂಳೆತ್ತದ ಅಧಿಕಾರಿಗಳು

    ಮಡಿಕೇರಿ: ಕೊಡಗಿನಲ್ಲಿ ಪ್ರಕೃತಿ ವಿಕೋಪ ಘಟಿಸಿ ಎರಡು ವರ್ಷ ಕಳೆದರೂ ಸಂಬಂಧಪಟ್ಟ ಇಲಾಖೆಯವರು ಕೃಷಿ ಭೂಮಿಯಲ್ಲಿ ಹೂಳು ತೆಗೆಯಲು ವಿಫಲರಾಗಿದ್ದಾರೆ ಎಂಬ ಅಸಮಾಧಾನ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ವ್ಯಕ್ತವಾಯಿತು.
    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ನಾಮನಿರ್ದೇಶಕ ಸದಸ್ಯ ರವಿ ಕುಶಾಲಪ್ಪ ವಿಷಯ ಪ್ರಸ್ತಾಪಿಸಿದರು.
    ಕೊಡಗಿನಲ್ಲಿ ಸತತ ಎರಡು ವರ್ಷವೂ ಪ್ರಕೃತಿ ವಿಕೋಪ ಉಂಟಾಗಿದೆ. ಆದರೆ, ಮುಕ್ಕೋಡ್ಲು ಸೇರಿ ಜಿಲ್ಲೆಯ ನಾನಾ ಕಡೆ ಸಂಬಂಧಪಟ್ಟ ಇಲಾಖೆಯವರು ಕೃಷಿಭೂಮಿಯಲ್ಲಿ ಹೂಳು ತೆಗೆಯಲು ವಿಫಲರಾಗಿದ್ದಾರೆ. ಮಾತ್ರವಲ್ಲದೆ, ಮುಕ್ಕೋಡ್ಲು ಸಮೀಪವಿರುವ ಸೇತುವೆಯಲ್ಲಿ ಬೃಹತ್ ಆಕಾರದ ಮರ ಬಿದ್ದಿದೆ. ಆದರೂ ಇಲಾಖೆ ಅಧಿಕಾರಿಗಳು ಇದನ್ನು ತೆಗೆಯಲು ಮುಂದಾಗಿಲ್ಲ. ಅರಣ್ಯ ಇಲಾಖೆಯವರ ಬೇಜವಾಬ್ದಾರಿಯೇ ಇದಕ್ಕೆ ಕಾರಣವೆಂದು ದೂರಿದರು.
    ಡಿಎಫ್‌ಒ ಪ್ರಭಾಕರ್ ಮಾತನಾಡಿ, ಕೆಲವು ಜಾಗದಲ್ಲಿ ಖಾಸಗಿಯವರ ಮರವೂ ಸೇರಿಕೊಂಡಿದೆ. ಇದರಿಂದ ಮರ ತೆಗೆಯಲು ಸಾಧ್ಯವಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮೊದಲು ಸೇತುವೆಯಲ್ಲಿ ಬಿದ್ದಿರುವ ಮರವನ್ನು ತೆರವುಗೊಳಿಸುವ ಕಾರ್ಯ ಮಾಡಿ. ಖಾಸಗಿಯವರ ಮರವಿದ್ದರೂ ಅದನ್ನು ನಿಮ್ಮ ಡಿಪೋದಲ್ಲಿಟ್ಟು ನಂತರ ಸಮಸ್ಯೆ ಬಗೆಹರಿಸಿಕೊಳ್ಳಿ. ಅರಣ್ಯ ಇಲಾಖೆಯವರಿಂದ ಈ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಗ್ರಾಮ ಪಂಚಾಯಿತಿಯವರೆ ಈ ಕೆಲಸ ಮಾಡಲಿ ಎಂದು ಸೂಚಿಸಿದರು.
    ವೈದ್ಯಕೀಯ ಕಾಲೇಜಿನ ಡೀನ್ ಡಾ.ಕಾರ್ಯಪ್ಪ ಮಾತನಾಡಿ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 450 ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ 15 ದಿನದೊಳಗೆ ಚಾಲನೆ ನೀಡಲಾಗುವುದು. 450 ಹೆಚ್ಚುವರಿ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಿನ ಬೋಧಕ ಆಸ್ಪತ್ರೆ ಆವರಣದಲ್ಲಿಯೇ ಕಟ್ಟಡ ತಲೆ ಎತ್ತಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
    ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಎಂಎಲ್‌ಸಿ ಸುನಿಲ್ ಸುಬ್ರಮಣಿ ಇದ್ದರು. ನಾನಾ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಮಾಹಿತಿಯನ್ನು ಸಭೆಗೆ ನೀಡಿದರು.
    ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಸೂಚನೆ: ಜಿಲ್ಲೆಯ ಎಲ್ಲೆಡೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರಾಪಂಗಳಲ್ಲಿ ಮಾರ್ಚ್ ಅಂತ್ಯದೊಳಗೆ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಪೂರ್ಣ ಮಾಡುವಂತೆ ತಾಪಂ ಇಒಗಳಿಗೆ ಸಂಸದರು, ಶಾಸಕರು ಸೂಚಿಸಿದರು.
    ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಸ ವಿಲೇವಾರಿ ಘಟಕದ ಕುರಿತು ತಾಪಂ ಇಒಗಳಿಂದ ಮಾಹಿತಿ ಪಡೆದ ಸಂಸದರು, ಶಾಸಕರು, ಪ್ರತಿಯೊಂದು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಗ್ರಾಪಂಗಳಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಈ ಸಂಬಂಧ ಜಾಗ ಗುರುತಿಸಿ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಜತೆಗೆ ವಾಹನ ಖರೀದಿ, ಇತ್ಯಾದಿ ಕೆಲಸಗಳು ಜತೆಯಲ್ಲಿಯೇ ಆಗಬೇಕು ಎಂದು ಸೂಚಿಸಿದರು.
    ಜಿಪಂ ಸಿಇಒ ಲಕ್ಷ್ಮೀಪ್ರಿಯ ಮಾತನಾಡಿ, ಜಿಲ್ಲೆಯಲ್ಲಿ 104 ಗ್ರಾಪಂಗಳಿವೆ. ಇದರಲ್ಲಿ 17 ಗ್ರಾಪಂನಲ್ಲಿ ವಿಲೇವಾರಿ ಘಟಕ ನಿರ್ಮಾಣ ಪೂರ್ಣಗೊಂಡಿದ್ದು, 68 ಘಟಕ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
    ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಜಾಗದ ಸರ್ವೇ ಮಾಡಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಪ್ರತಿಭಟನೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಮೊದಲು ಗ್ರಾಪಂನಲ್ಲಿ ಗ್ರಾಮಸ್ಥರೊಂದಿಗೆ ಗ್ರಾಮ ಸಭೆ ಆಯೋಜಿಸಿ, ಘಟಕದ ಉದ್ದೇಶ ಹಾಗೂ ಜಾಗೃತಿ ಮೂಡಿಸಬೇಕು ಎಂದು ಇಒಗಳಿಗೆ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts