ಆಲ್ದೂರು: ಭಾರತದ ಧರ್ಮ, ಸಂಸ್ಕಾರವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
ಸಮೀಪದ ಗೌತಮೇಶ್ವರ ಗ್ರಾಮದಲ್ಲಿ ಪುರತತ್ವ ಇಲಾಖೆಯಿಂದ ಮರು ನಿರ್ಮಾಣವಾಗಿರುವ ಗೌತಮೇಶ್ವರ ಸ್ವಾಮಿಯ ಪುರಾತನ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾತರದ ಮೇಲೆ ಎಷ್ಟೇ ದಾಳಿಗಳು ನಡೆದಿದ್ದರೂ ನಮ್ಮ ಸಂಸ್ಕಾರ, ಸಂಸ್ಕೃತಿ ಇಂದಿಗೂ ಹಾಗೇ ಉಳಿದಿದೆ. ಹಿಂದುತ್ವದ ಉಳಿವಿಗಾಗಿ ಹಿಂದು ಸಾಮ್ರಾಜ್ಯಗಳು ಶ್ರಮಿಸಿದವು ಎಂದರು.
ಮಹಾಶಿವರಾತ್ರಿ ಅಂಗವಾಗಿ ಗೌತಮೇಶ್ವರ ಸ್ವಾಮಿಗೆ ವಿಶೇಷ ರುದ್ರಹೋಮ, ಪೂರ್ಣಾಹುತಿ, ಮಹಾಮಂಗಳರಾತಿ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಪುರಾತತ್ವ ಇಲಾಖೆ ಮೂಲಕ 1 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದ ಸಿ.ಟಿ.ರವಿ, ಗೌತಮೇಶ್ವರ ದೇವಸ್ಥಾನದ ಅರ್ಚಕರಾಗಿ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶೇಷಾಚಲ ಭಟ್ ಅವರನ್ನು ದೇವಸ್ಥಾನ ಸಮಿತಿಯಿಂದ ಗೌರವಿಸಲಾಯಿತು.
ವಿದ್ವಾಂಸ ಅಂಬಳೆ ಕೃಷ್ಣಮೂರ್ತಿ, ಅರ್ಚಕ ಕೂದುವಳ್ಳಿ ವಿಶ್ವನಾಥ ಭಟ್, ರಾಮಚಂದ್ರ ಭಟ್ ತಂಡದವರಿಂದ ಪೂಜಾ ಕಾರ್ಯಗಳು ನಡೆದವು. ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಸುರೇಶ್, ಉಪಾಧ್ಯಕ್ಷ ನಾರಾಯಣ ಗೌಡ, ಕಾರ್ಯದರ್ಶಿ ಮನೋಹರ್, ತಾಪಂ ಮಾಜಿ ಅಧ್ಯಕ್ಷ ಸುರೇಶ್, ಕೂದುವಳ್ಳಿ ಗ್ರಾಪಂ ಸದಸ್ಯ ಅರವಿಂದ್, ಪ್ರಮುಖರಾದ ಶ್ರೀಧರ್, ಶಶಿ, ಕೇಶವಮೂರ್ತಿ, ಸುಬ್ಬೇಗೌಡ, ರಮೇಶ್, ಭರತ್ ಗೌಡ ಇತರರಿದ್ದರು.