ಲೋಕಪಾಲ್​, ಲೋಕಾಯುಕ್ತಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

ಮುಂಬೈ: ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಹೋರಾಟ ಆರಂಭಿಸಿದ್ದಾರೆ.

ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ ಹಾಗೂ ಕೇಂದ್ರ ಮಟ್ಟದಲ್ಲಿ ಲೋಕಪಾಲ್​ ಅನ್ನು ಪ್ರಾರಂಭಿಸುವಂತೆ ಬೇಡಿಕೆಯಿಟ್ಟಿರುವ ಅಣ್ಣಾ ಹಜಾರೆ ಅವರು ಇಂದಿನಿಂದ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.

ಪ್ರಧಾನಿ ವಿರುದ್ಧ ಸಾಕ್ಷಿ ಸಮೇತ ದೂರು ನೀಡಿದರೆ ಲೊಕಪಾಲ್​ ಅಡಿಯಲ್ಲಿ ಅವರ ವಿರುದ್ಧವೂ ತನಿಖೆ ನಡೆಸಬಹುದಾಗಿದೆ. ಇದಕ್ಕೆ ಪ್ರತಿರೂಪವಾಗಿರುವ ಲೋಕಾಯುಕ್ತದ ಅಡಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿ ಎಲ್ಲ ಮಂತ್ರಿಗಳ ವಿರುದ್ಧ ಸಾಕ್ಷಿ ಸಮೇತ ಯಾವುದೇ ದೂರು ದಾಖಲಾದರೂ ತನಿಖೆ ನಡೆಸಬಹುದಾಗಿದೆ. ಇದೇ ಕಾರಣದಿಂದಾಗಿ ಇದನ್ನು ನಿರಾಕರಿಸುತ್ತಿದ್ದಾರೆ. ಅಲ್ಲದೇ ಯಾವುದೇ ಪಕ್ಷಕ್ಕೂ ಇದು ಬೇಕಾಗಿಲ್ಲ. 2013ರಲ್ಲೇ ಸಂಸತ್ತಿನಲ್ಲಿ ಲೋಕಪಾಲ್​ ಬಿಲ್​ ಪಾಸಾಗಿದೆ. ಆದರೆ, ಇದುವರೆಗೂ ಯಾರನ್ನೂ ನೇಮಕ ಮಾಡಿಕೊಂಡಿಲ್ಲ ಎಂದು ಆರೋಪಿಸಿ ತಮ್ಮ ಸ್ವಗ್ರಾಮವಾದ ಮಹರಾಷ್ಟ್ರದ ರಾಲೆಗಾಂವ್​ ಸಿದ್ದಿಯಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.

ನಿಮ್ಮ ಹಿಂದಿನ ಸತ್ಯಾಗ್ರಹದ ವೇಳೆ ಇದ್ದ ಅನೇಕ ಬೆಂಬಲಿಗರು ಇಂದು ರಾಜಕಾರಣಿಗಳಾಗಿದ್ದಾರೆ. ಅವರು ನಿಮ್ಮೊಂದಿಗೆ ಮತ್ತೆ ಸೇರಲು ಅನುಮತಿ ಮಾಡಿಕೊಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮೊಂದಿಗೆ ಯಾವೊಬ್ಬ ರಾಜಕಾರಣಿಯು ಬೇಡ ಎಂದು ನೇರವಾಗಿ ತಿರಸ್ಕರಿಸಿದರು.

ನಾನು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಪ್ರತಿಭಟನೆ ಕುಳಿತಿಲ್ಲ. ಬದಲಾಗಿ ದೇಶದ ಒಳಿತಿಗಾಗಿ ಸತ್ಯಾಗ್ರಹ ಕೈಗೊಂಡಿದ್ದೇನೆ ಎಂದು ಹೇಳಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನದಂದೇ ಸತ್ಯಾಗ್ರಹ ಆರಂಭಿಸಿದ್ದಾರೆ.(ಏಜೆನ್ಸೀಸ್​)