ಎಂ.ಪಿ.ವೆಂಕಟೇಶ್ ಮದ್ದೂರು
ತಾಲೂಕಿನ ಆತಗೂರು ಹೋಬಳಿಯ ಚಿಕ್ಕ ಅಂಕನಹಳ್ಳಿಯ ಗ್ರಾಮದ ಪುರಾಣ ಪ್ರಸಿದ್ಧ ಹಾಗೂ ಶಿಂಷಾ ನದಿಯ ಎಡಭಾಗದಲ್ಲಿ ನೆಲಸಿರುವ ಶ್ರೀ ನಂದಿ ಬಸವೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ಬುಧವಾರ ಆರಂಭಗೊಂಡಿದ್ದು, ಈ ಬಾರಿ ಹೆಚ್ಚಿನ ಕಳೆ ತುಂಬಿಕೊಂಡಿದೆ.
ಕೋವಿಡ್ ನಂತರ ರಾಸುಗಳಿಗೆ ಬಂದ ಚರ್ಮ ಗಂಟು ರೋಗಗಳಿಂದ 4 ವರ್ಷಗಳಿಂದ ಸುಮಾರು 60 ವರ್ಷಗಳಷ್ಟು ಇತಿಹಾಸಿವರು ಜಾತ್ರೆ ನಡೆಯದೆ ಕಳೆಗುಂದಿತ್ತು. ಈ ವರ್ಷ ಯಾವುದೇ ಆತಂಕ ಇಲ್ಲದ ಕಾರಣ ವರ್ಷದ ಮೊದಲ ಜಾತ್ರೆ ಕಳೆಗಟ್ಟಿದೆ. ಜ 17 ರಿಂದ 23ವರೆಗೆ ನಡೆಯುವ ಭಾರೀ ದನಗಳ ಜಾತ್ರೆಗೆ ಈಗಾಗಲೇ ರಾಜ್ಯದ ವಿವಿದ ಭಾಗಗಳಿಂದ ಸಾವಿರಾರು ರಾಸುಗಳು ಆಗಮಿಸಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಸುಗಳು ಆಗಮಿಸಲಿದ್ದು, ಜಾತ್ರೆ ಅದ್ಧೂರಿಯಾಗಿ ನಡೆಯಲಿದೆ.
ಜಾತ್ರೆಯಲ್ಲಿ ಬಹುತೇಕ ಹಳ್ಳಿಕಾರ ತಳಿಯ ರಾಸುಗಳೇ ಕಾಣುತ್ತಿವೆ. ಸಣ್ಣ ಹಲ್ಲುಗಳು, ಗಾಡಿ ಎತ್ತುಗಳು, 4 ಮತ್ತು 2 ಹಲ್ಲಿನ ಹಸುಗಳು ಜಾತ್ರೆಗೆ ಹೆಚ್ಚಿ ಸಂಖ್ಯೆಯಲ್ಲಿ ಬರುತ್ತಿವೆ. ಇದರ ಜತೆಗೆ ಸೀಮೆ ಹೋರಿ, ಟಗರು, ಕುರಿಗಳು ಸಹ ಬರುತ್ತವೆ. ಜಾತ್ರೆಗೆ ಮಂಡ್ಯ, ತುಮಕೂರು, ರಾಮನಗರ, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ರಾಸುಗಳನ್ನು ಕಟ್ಟುತ್ತಾರೆ. ಜತೆಗೆ ರಾಜ್ಯದ ವಿವಿಧ ಭಾಗಗಳಿಂದ ರೈತರು ರಾಸುಗಳನ್ನು ಖರೀದಿಸಲು ಇಲ್ಲಿಗೆ ಬರುತ್ತಾರೆ. ಇದರಿಂದ ಜಾತ್ರೆಯಲ್ಲಿ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ. 50 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ರಾಸುಗಳು ಮಾರಾಟವಾಗುತ್ತದೆ. ಸಂಜೆ ಆಗುತ್ತಿದ್ದಂತೆ ರಾಸುಗಳಿಗೆ ಇರುವ ಶಾಮಿಯಾನಕ್ಕೆ ವಿದ್ಯುತ್ ಅಲಂಕಾರ, ಧ್ವನಿ ವರ್ಧಕ ಹಾಕಿ, ವಿಶೇಷವಾಗಿ ಅಲಂಕಾರ ಮಾಡಿ ಮೆರವಣಿಗೆ ಮಾಡುವುದು ವಿಶೇಷವಾಗಿದೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಜಾತ್ರೆಯಲ್ಲಿ ಕಾಣುತ್ತಿದ್ದು, ದೇಗುಲದ ಆವರಣ ಸೇರಿದಂತೆ ಸುತ್ತಮತ್ತಲ ಆವರಣದಲ್ಲಿ ಹಾಗೂ ರಸ್ತೆ ಇಕ್ಕೆಲಗಳಲ್ಲಿ ದನಗಳನ್ನು ಕಟ್ಟಲಾಗಿದೆ.
ಅಂಗಡಿಗಳ ಮಾಲೀಕರಿಗೂ ಖುಷಿ: ಜಾತ್ರೆಯಲ್ಲಿ ಬೊಂಡ, ಬಜ್ಜಿ, ಕಡ್ಲೆಪುರಿ, ಮಿಕ್ಸರ್, ಗೋಬಿ ಮಂಚೂರಿ, ಹೂ, ಬಾಳೆ, ಸೌತೆಕಾಯಿ ಮಾರಾಟದ ಅಂಗಳಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗಿದ್ದು, ಈ ಬಾರಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಜನರ ಆಗಮನ, ಬಂದೋಬಸ್ತ್: ಜಾತ್ರೆಯಲ್ಲಿ ಹೆಚ್ಚು ರಾಸುಗಳನ್ನು ಕಟ್ಟಿರುವುದರಿಂದ ಹಾಗೂ ನಂದಿ ಬಸವೇಶ್ವರ ಸ್ವಾಮಿ ದೇವರ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ರೈತರು ಆಗಮಿಸುತ್ತಿರುವುದು ವಿಶೇಷ. ಜಾತ್ರೆಯಲ್ಲಿ ಲಕ್ಷಾಂತರ ರೂ. ವ್ಯವಹಾರ ನಡೆಯುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಉದಯ್ ಸೇವಾ ಟ್ರಸ್ಟ್‌ನಿಂದ ಸುಂಕ: ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಸುಗಳ ಮೇಲಿನ ಸುಂಕ ಮತ್ತು ಅಂಗಡಿಗಳ ಸುಂಕವನ್ನು ಭರಿಸಲಾಗುತ್ತಿದೆ. ಇದರಿಂದ ರೈತರಿಗೆ ಹಾಗೂ ವರ್ತಕರಿಗೆ ಅನುಕೂಲವಾಗಿದೆ. ಜತೆಗೆ ಟ್ರಸ್ಟ್ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ನೀಡಲು ಟ್ರಸ್ಟ್ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಉದಯ್ ಮುಂದಾಗಿರುವುದರಿಂದ ರೈತರಿಗೆ ಮತ್ತು ವರ್ತಕರಿಗೆ ಸಂತಸ ತಂದಿದೆ. ಇದರೊಂದಿಗೆ ತಾಲೂಕು ಆಡಳಿತ ವತಿಯಿಂದ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಜಾತ್ರೆಯಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ತಾಲೂಕು ಆಡಳಿತ ವತಿಯಿಂದ ಕಲ್ಪಿಸಲಾಗಿದೆ. ಇದರಿಂದ ದನಗಳನ್ನು ಕಟ್ಟಲು ಯಾವುದೇ ರೀತಿಯ ಸಮಸ್ಯೆಯಿಲ್ಲ.
ರಮೇಶ್ ಬ್ಯಾಡರಹಳ್ಳಿ, ಚನ್ನಪಟ್ಟಣ
