ರಾಮನಗರಕ್ಕೆ ಜೆಡಿಎಸ್​ನಿಂದ ಅನಿತಾ ಕುಮಾರಸ್ವಾಮಿ ಅವರೇ ಅಭ್ಯರ್ಥಿ: 15 ರಂದು ನಾಮಪತ್ರ

ಬೆಂಗಳೂರು: ರಾಮನಗರ ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್​ನಿಂದ ಯಾರು ಅಭ್ಯರ್ಥಿಯಾಗಬೇಕು ಎಂಬುದರ ಕುರಿತು ಚರ್ಚಿಸಲು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಇಂದು (ಅ.10) ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಅನಿತಾ ಕುಮಾರಸ್ವಾಮಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರವನ್ನು ಮೈತ್ರಿ ಆಧಾರದಲ್ಲಿ ಕಾಂಗ್ರೆಸ್​ ಪಕ್ಷವು ಜೆಡಿಎಸ್​ಗೆ ಬಿಟ್ಟುಕೊಡಲು ಬುಧವಾರವಷ್ಟೇ ತೀರ್ಮಾನ ಕೈಗೊಂಡಿತ್ತು. ಆದರೆ, ಅದಕ್ಕೂ ಮೊದಲಿನಿಂದಲೇ ಜೆಡಿಎಸ್​ನಿಂದ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ, ಪಕ್ಷದ ಹಲವು ಕಾರ್ಯಕರ್ತರು ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬ ರಾಜಕಾರಣದ ಹಣಪಟ್ಟಿ ಕಳಚಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಇದೇ ಹಿನ್ನೆಲೆಯಲ್ಲಿ ಇಂದು ಎಚ್​.ಡಿ ದೇವೇಗೌಡರು ರಾಮನಗರದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಅನಿತಾ ಕುಮಾರಸ್ವಾಮಿ ಅವರ ಹೆಸರನ್ನೇ ಅಂತಿಮ ಮಾಡಲಾಗಿದೆ. ಈ ಮೂಲಕ ಕ್ಷೇತ್ರವನ್ನು ಕುಟುಂಬದ ಹಿಡಿತದಲ್ಲೇ ಉಳಿಸಿಕೊಳ್ಳಲು ದೇವೇಗೌಡರು ನಿರ್ಧಾರ ಕೈಗೊಂಡಿದ್ದಾರೆ.

ಅನಿತಾ ಕುಮಾರಸ್ವಾಮಿ ಅವರು ಇದೇ ಸೋಮವಾರ, ಅಂದರೆ, ಅ.15ರಂದು ನಾಮ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್​ ಮೂಲಗಳು ತಿಳಿಸಿವೆ.
ಇನ್ನು ಸಾರ್ವತ್ರಿಕ ಚುನಾವಣೆ ವೇಳೆ ರಾಮನಗರದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಮತಗಳು ಸಿಕ್ಕಿರಲಿಲ್ಲ ಎನ್ನಲಾಗಿತ್ತು. ಈ ಬಾರಿ ಹಾಗಾಗದಿರುವಂತೆ ಜೆಡಿಎಸ್​ ಎಚ್ಚರಿಕೆ ವಹಿಸುತ್ತಿದೆ. ಇದೇ ಕಾರಣಕ್ಕೆ ದೇವೇಗೌಡರು ರಾಮನಗರ ಅಲ್ಪಸಂಖ್ಯಾತ ಮುಖಂಡರ ಜತೆ ಗಹನ ಚರ್ಚೆ ನಡೆಸಿದ್ದಾರೆ. ಈ ಬಾರಿ ಬೆಂಬಲಿಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.