18 C
Bangalore
Friday, December 6, 2019

ಕೊರತೆ ಬಜೆಟ್ಟಿನ ಸರ್ಕಾರದಲ್ಲಿ ನಷ್ಟದಲ್ಲಿರುವ ಶಾಲೆಗಳು!

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಕುಡಿಯುವ ನೀರು, ರಸ್ತೆ, ಬೆಳಕು ಒದಗಿಸುವಷ್ಟೇ ಪ್ರಮುಖವಾಗಿ ಸರ್ವರಿಗೂ ಶಿಕ್ಷಣವನ್ನೂ ಒದಗಿಸಬೇಕಾಗುತ್ತದೆ ಎಂಬುದನ್ನು ಆಡಳಿತಗಾರರು ಅರ್ಥ ಮಾಡಿಕೊಳ್ಳಬೇಕು. ಅನ್ನಭಾಗ್ಯ ಕೊಡುವ ನೀವು ಅನ್ನ ಗಳಿಸಲು ಅಗತ್ಯವಾದ ಶಿಕ್ಷಣದ ವಿಷಯದಲ್ಲೇಕೆ ಲಾಭ- ನಷ್ಟದ ಲೆಕ್ಕ ಹಾಕುತ್ತೀರಿ? 

ಗುಜರಾತ್​ನ ಗಿರ್ ಅಭಯಾರಣ್ಯ ವ್ಯಾಪ್ತಿಯಲ್ಲಿ ಬನೇಜ್ ಎಂಬ ಹಳ್ಳಿಯೊಂದಿದೆ. ಅಲ್ಲಿ ಸಿಂಹಗಳು ಅಧಿಕ ಸಂಖ್ಯೆಯಲ್ಲಿವೆ. ಈ ಕಾರಣದಿಂದ ಆ ಹಳ್ಳಿಯಲ್ಲಿ ವಾಸ್ತವ್ಯ ಹೂಡಲು ಅರಣ್ಯ ಇಲಾಖೆ ಯಾರಿಗೂ ಅವಕಾಶ ಕೊಟ್ಟಿಲ್ಲ- ಒಬ್ಬರನ್ನು ಬಿಟ್ಟು. ಅಲ್ಲೊಂದು ದೇವಸ್ಥಾನವಿದೆ. ಭರತದಾಸ್ ದರ್ಶನ್ ದಾಸ್ ಎಂಬವರು ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದಾರೆ. ಆ ಇಡೀ ಊರಿನಲ್ಲಿರುವ ಏಕೈಕ ಮನುಷ್ಯನೆಂದರೆ ಭರತ್ ದಾಸ್. ಹಾಗಿದ್ದರೂ 2002ರಿಂದ ಪ್ರತಿ ಚುನಾವಣೆಯ ಸಂದರ್ಭದಲ್ಲೂ ಚುನಾವಣಾ ಆಯೋಗ ಅಲ್ಲೊಂದು ಮತಗಟ್ಟೆ ತೆರೆಯುತ್ತದೆ. ಆತನನ್ನು ಬೇರೆ ಮತಗಟ್ಟೆಯ ಮತದಾರರ ಯಾದಿಯಲ್ಲಿ ಸೇರಿಸಿ, ಮತಹಾಕಲು ಅನುಕೂಲವಾಗುವಂತೆ ವಾಹನ ವ್ಯವಸ್ಥೆ ಮಾಡುವ ಗೋಜಿಗೆ ಆಯೋಗ ಹೋಗಿಲ್ಲ. ಆತ ಮುಂಜಾನೆಯೇ ಮತ ಚಲಾಯಿಸಲಿ, ಮತಹಾಕಲು ಬಾರದೇ ಇರಲಿ, ಇಡೀ ದಿನ ಅಲ್ಲಿ ಬೇರೆಡೆಯಂತೆ ಮತಗಟ್ಟೆ ಕಾರ್ಯನಿರ್ವಹಿಸುತ್ತದೆ. ಪ್ರಜಾಪ್ರಭುತ್ವವೊಂದು ಪ್ರಜೆಗೆ ನೀಡಬೇಕಾದ ಗೌರವ ಇದು. ಅಲ್ಲದೆ, ಪ್ರತಿ ಮತದಾರನೂ ಮತಗಟ್ಟೆಗೆಂದು ದೂರ ಹೋಗದೆ, ಹತ್ತಿರದಲ್ಲೇ ಮತ ಚಲಾಯಿಸಲು ಅನುಕೂಲ ಮಾಡಿಕೊಡುವುದು ಆಯೋಗದ ಹೊಣೆಗಾರಿಕೆ.

***

ಮಲೆನಾಡಿನ ಕಾಡಿನ ಮೂಲೆಯಲ್ಲೊಂದು ಹಳ್ಳಿ. ಅಲ್ಲಿ ಏಳೆಂಟು ಮನೆಗಳಿವೆ. ಅವರಿಗೆ ಬಸ್ ಹಿಡಿಯಬೇಕೆಂದರೆ ಕನಿಷ್ಠ 8 ಕಿಲೋಮೀಟರ್ ನಡೆಯಬೇಕಾಗುತ್ತದೆ. ಅಲ್ಲಿರುವುದೇ 30-35 ಮಂದಿ. ಅಂದರೆ ದಿನಕ್ಕೆ ಮೂರ್ನಾಲ್ಕು ಮಂದಿ ಪೇಟೆಗೆ ಹೋಗಿ ಬರುತ್ತಿರುತ್ತಾರೆ. ಆ ಊರಿಗೆ ಸರ್ಕಾರಿ ಬಸ್ ಓಡಿಸಬೇಕೋ ಬೇಡವೋ ಎಂಬ ಪ್ರಶ್ನೆ ಬಂದರೆ, ಅದು ನಷ್ಟದ ಬಾಬ್ತು, ಹಾಗಾಗಿ ಬೇಡ ಎಂದು ಹೇಳುವವರೇ ಅಧಿಕ. ಪಿ. ಜಿ. ಆರ್. ಸಿಂಧ್ಯಾ ಸಾರಿಗೆ ಸಚಿವರಾಗಿದ್ದಾಗ ಇಂಥದೊಂದು ಪ್ರಶ್ನೆ ಪತ್ರಕರ್ತರಿಂದ ಎದುರಾಯಿತು. ಕೆಎಸ್​ಆರ್​ಟಿಸಿ ಯಾವಾಗಲೂ ನಷ್ಟದಲ್ಲೇ ಇರುತ್ತಲ್ಲ ಯಾಕೆ? ಎಂದು. ಅದಕ್ಕೆ ಸಿಂಧ್ಯಾ ಉತ್ತರಿಸಿದ್ದು ಹೀಗೆ: ‘ಕೆಎಸ್​ಆರ್​ಟಿಸಿ ಇರುವುದು ಲಾಭ ಮಾಡುವುದಕ್ಕಲ್ಲ. ಹಾಗೆ ನಿರೀಕ್ಷಿಸುವುದೂ ಸರಿಯಲ್ಲ. ನಷ್ಟದ ಕಾರಣ ನೀಡಿ ಸೌಲಭ್ಯ ನೀಡದಿದ್ದರೆ ಸರ್ಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುತ್ತದೆ. ಏಕೆಂದರೆ ಪ್ರಜೆಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ’.

***

ಸಿಂಧ್ಯಾ ಹೇಳಿರುವುದು ನಿಜ. ಬೇಜವಾಬ್ದಾರಿ ಸರ್ಕಾರಗಳು ಮಾತ್ರ ಮೂಲ ಸೌಕರ್ಯ ಕಲ್ಪಿಸುವಲ್ಲಿಯೂ ಲಾಭ- ನಷ್ಟ ಎಂದೆಲ್ಲ ಯೋಚಿಸಲು ಸಾಧ್ಯ. ಅಂಥ ಯೋಚನೆಗಳ ಪರಿಣಾಮವಾಗಿಯೇ ಇಂದಿಗೂ ಎಷ್ಟೋ ಕುಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ. ಇದೀಗ ಶಾಲೆಗಳ ವಿಲೀನ ಮಾಡಹೊರಟಿರುವುದು ಕೂಡ ಆಡಳಿತಗಾರರು ಸರ್ಕಾರದ ಹೊಣೆಗಾರಿಕೆ ಮರೆತ ವರ್ತನೆ ಅಷ್ಟೇ. ಪ್ರಜಾಪ್ರಭುತ್ವದ ಸ್ಪಷ್ಟ ಕಲ್ಪನೆಯಿದ್ದವರಿಗೆ ಮಾತ್ರ ಅರ್ಥವಾಗುವ ಸತ್ಯ ಇದು.

ಸುಮಾರು 10 ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಚರ್ಚೆ ಚಾಲ್ತಿಯಲ್ಲಿದೆ. ಈ ಸಲವೂ ವಿಲೀನಗೊಳಿಸಬಹುದಾದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಪಟ್ಟಿ ಸಿದ್ಧವಾಗಿದೆ. ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ 30ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 14 ಸಾವಿರ ಶಾಲೆಗಳು ಆ ಪಟ್ಟಿಯಲ್ಲಿವೆ. ಅಂದರೆ ಅಷ್ಟು ಕನ್ನಡ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲು ಸರ್ಕಾರ ಸಿದ್ಧವಾಗಿದೆ! ಹಾಗೆ ಹೇಳಿದಾಕ್ಷಣ ‘ನಾವು ಮುಚ್ಚುತ್ತಿಲ್ಲ, ವಿಲೀನಗೊಳಿಸುತ್ತಿದ್ದೇವೆ’ ಎಂದು ತಿಪ್ಪೆ ಸಾರಿಸಲು ಆಡಳಿತಗಾರರು ಹೊರಡುತ್ತಾರೆ. ಹಾಗಾದರೆ ನಡೆಯದ ಶಾಲೆಗಳ ಕಟ್ಟಡ ಏನು ಮಾಡುತ್ತೀರಿ, ಅಲ್ಲಿ ನಾಳೆ ಮಕ್ಕಳು ಬಂದರೆ ಮತ್ತೆ ಶಾಲೆ ಶುರು ಮಾಡುತ್ತೀರಾ, ಅಲ್ಲಿಯವರೆಗೆ ಅದು ಹಾವು, ಚೇಳು, ಗೆದ್ದಲುಗಳ ವಾಸಸ್ಥಾನವಾಗಿರಬೇಕೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಅಂದ ಮೇಲೆ ವಿಲೀನ ಮತ್ತು ಮುಚ್ಚುವುದೆಂದರೆ ಅಳಿಯ ಅಲ್ಲ, ಮಗಳ ಗಂಡ ಎಂದಂತೆ.

ಮಗುವಿನ ಮೂಲಭೂತ ಹಕ್ಕು: ನಮ್ಮ ಸಂವಿಧಾನ ಹೇಳುವಂತೆ 6ರಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವು ತನ್ನ ಹತ್ತಿರದ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವುದು ಆ ಮಗುವಿನ ಮೂಲಭೂತ ಹಕ್ಕು. ಅಲ್ಲದೆ, ಮಗು ಪ್ರಾಥಮಿಕ ಶಿಕ್ಷಣ ಪಡೆಯಲು ಮತ್ತು ಪೂರ್ಣಗೊಳಿಸಲು ಅಡ್ಡಿಯುಂಟು ಮಾಡಬಹುದಾದ ಯಾವುದೇ ಬಗೆಯ ಶುಲ್ಕ ಅಥವಾ ಖರ್ಚುಗಳನ್ನು ಮಗು ಸಂದಾಯಮಾಡಬೇಕಿಲ್ಲ. ಈ ಹಕ್ಕನ್ನು ಸಾಕಾರಗೊಳಿಸಲು ಸರ್ಕಾರ ಮಗುವಿನ ನೆರೆಹೊರೆಯಲ್ಲಿ ಶಾಲೆಯನ್ನು ಕಲ್ಪಿಸಬೇಕು. ಸಂವಿಧಾನದ ನಾಲ್ಕನೇ ಭಾಗದ ನಿರ್ದೇಶಕ ತತ್ವಗಳಲ್ಲಿದ್ದ ಶಿಕ್ಷಣವನ್ನು ಸಂವಿಧಾನದ ಮೂರನೇ ಭಾಗದಲ್ಲಿ ಮಕ್ಕಳ ಮೂಲಭೂತ ಹಕ್ಕಾಗಿ ಸೇರಿಸಿ 16 ವರ್ಷಗಳಾದವು. ಆದರೆ ಆಡಳಿತಗಾರರಿಗೆ ಮಾತ್ರ ಅದು ಮಕ್ಕಳ ಮೂಲಭೂತ ಹಕ್ಕು ಎಂಬುದೇ ಮರೆತುಹೋಗಿದೆ.

ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಈ ಹಿಂದೆ ನೀಡಿದ ಒಂದು ಮಾಹಿತಿಯಂತೆ 2015-16 ರಲ್ಲಿ ಸರ್ಕಾರ 194 ಸರ್ಕಾರಿ ಕನ್ನಡಶಾಲೆಗಳನ್ನು ಮುಚ್ಚಿದೆ. ಇದೇ ಅವಧಿಯಲ್ಲಿ, 157 ಖಾಸಗಿ ಅನುದಾನರಹಿತ ಶಾಲೆಗಳು ಜಾಸ್ತಿ ಯಾಗಿವೆ. ಇದು ಸರ್ಕಾರ ಮಕ್ಕಳ ಮೂಲಭೂತ ಹಕ್ಕನ್ನು ಗೌರವಿಸುತ್ತಿರುವ ರೀತಿ!

ಹಾಗೆ ನೋಡಿದರೆ ಒಂದು ಶಾಲೆಯನ್ನು ಮುಚ್ಚಬೇಕು ಎಂಬ ಯೋಚನೆಯೇ ಸರ್ಕಾರಕ್ಕೆ ಬರಬಾರದು. ಆ ಯೋಚನೆ ಬರುವುದು ಶಿಕ್ಷಣ ವ್ಯಾಪಾರೀಕರಣಗೊಂಡಾಗ ಮಾತ್ರ. ಸರ್ಕಾರ ಶಿಕ್ಷಣದ ವ್ಯಾಪಾರ ಮಾಡಬೇಕಿಲ್ಲ. ಶಿಕ್ಷಣ ಒದಗಿಸುವ ಹೊಣೆಗಾರಿಕೆ, ಕರ್ತವ್ಯವನ್ನು ಎತ್ತಿಹಿಡಿಯಬೇಕು. ಏಕೆಂದರೆ ಅದು ಮಗುವಿನ ಕುರಿತು ತಾಯಿಗೆ ಇರುವಂತಹ ಜವಾಬ್ದಾರಿ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯಾಗಿಸುವುದು ಹೇಗೆ ಪಾಲಕರ ಜವಾಬ್ದಾರಿಯೋ ಹಾಗೆಯೇ, ಪಾಲಕರ ಅಂದರೆ ಪ್ರಜೆಗಳ ಜವಾಬ್ದಾರಿ ನಿರ್ವಹಣೆಗೆ ಬೇಕಾದ ಮೂಲಭೂತ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಜನರ ತೆರಿಗೆ ಹಣವನ್ನು ಯಾರ್ಯಾರೋ ಕದಿಯಲು ಬಿಟ್ಟು ಈ ಬದ್ಧತೆಗೆ ದ್ರೋಹಮಾಡುವುದು ಸರಿಯಲ್ಲ. ಆಡಳಿತ ನಡೆಸುವವರು ಈ ನಿಟ್ಟಿನಲ್ಲಿ ಯೋಚಿಸಿದ್ದರೆ ನಾವು ಸರ್ಕಾರಿ ಶಾಲೆಗಳನ್ನು ಸುಸಜ್ಜಿತವಾಗಿ ರೂಪಿಸುವಲ್ಲಿ ಸೋಲುತ್ತಿರಲಿಲ್ಲ.

ಹಾಗಾದರೆ ಮಕ್ಕಳ ಸಂಖ್ಯೆ ಕಡಿಮೆ, ವೆಚ್ಚ ಹೆಚ್ಚಾಗುತ್ತದೆ, 30 ಮಕ್ಕಳಿಗಾಗಿ ಇಷ್ಟೆಲ್ಲ ಖರ್ಚು ಮಾಡುವುದು ಎಷ್ಟು ಸರಿ ಎನ್ನುವ ವಾದದಲ್ಲಿ ಹುರುಳಿಲ್ಲವೆ? ಮೇಲ್ನೋಟಕ್ಕೆ ಇದೆ. ಆದರೆ ಭ್ರಷ್ಟಾಚಾರ, ದೊಡ್ಡ ದೊಡ್ಡ ಸಂಸ್ಥೆಗಳು ಉಳಿಸಿಕೊಂಡ ತೆರಿಗೆ ಬಾಕಿ, ವಿದ್ಯುತ್ ಬಿಲ್ ಬಾಕಿ, ಉದ್ಯಮಿಗಳು ಮಾಡಿಕೊಂಡ ಕಟ್ಟಬಾಕಿ ಸಾಲಗಳು ಇತ್ಯಾದಿ ಕಾರಣಗಳಿಂದ ಸೋರಿಹೋಗುತ್ತಿರುವ ಹಣವನ್ನು ವಸೂಲಿ ಮಾಡಲು ಸರ್ಕಾರಗಳಿಗೆ ಸಾಧ್ಯವಾಗಿದ್ದರೆ, ಸರ್ಕಾರಿ ಶಾಲೆಗಳಿಗಾಗಿನ ಖರ್ಚಿನ ಬಗ್ಗೆ ಮಾತನಾಡುವ ನೈತಿಕತೆಯಾದರೂ ಇರುತ್ತಿತ್ತು. 2015-16 ನೇ ಸಾಲಿನಲ್ಲಿ, ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಜೂರಾದ ಹುದ್ದೆಗಳ ಪೈಕಿ ಸುಮಾರು 9180 ಶಿಕ್ಷಕರ ಹುದ್ದೆಗಳು ಖಾಲಿಯಿದ್ದರೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ 28,395. 2015-16ನೇ ಸಾಲಿನಲ್ಲಿ ರಾಜ್ಯದಲ್ಲಿ ಖಾಲಿಯಿರುವ ಒಟ್ಟು ಎಲಿಮೆಂಟರಿ ಶಿಕ್ಷಕರ ಸಂಖ್ಯೆ 37,575. ಇದನ್ನು ಗಮನಿಸಿದರೆ, ಸರ್ಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗದಿರುವುದಕ್ಕೆ ಮತ್ತು ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿ ತಲುಪಲು ನಿಜವಾದ ಕಾರಣವೇನೆಂಬುದು ತಿಳಿಯುತ್ತದೆ.

ಕುಡಿಯುವ ನೀರು, ರಸ್ತೆ, ಬೆಳಕು ಒದಗಿಸುವಷ್ಟೇ ಪ್ರಮುಖವಾಗಿ ಸರ್ವರಿಗೂ ಶಿಕ್ಷಣವನ್ನೂ ಒದಗಿಸಬೇಕಾಗುತ್ತದೆ ಎಂಬುದನ್ನು ಆಡಳಿತಗಾರರು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಅನ್ನಭಾಗ್ಯ ಕೊಡುವ ನೀವು ಅನ್ನ ಗಳಿಸಲು ಅಗತ್ಯವಾದ ಶಿಕ್ಷಣದ ವಿಷಯದಲ್ಲೇಕೆ ಲಾಭ- ನಷ್ಟದ ಲೆಕ್ಕ ಹಾಕುತ್ತೀರಿ? ಹೊಣೆಗಾರಿಕೆಯಿಂದೇಕೆ ಹಿಂದೆ ಸರಿಯುತ್ತೀರಿ? ಸಾರಿಗೆ ನಿಗಮ ನಷ್ಟದಲ್ಲಿದೆ. ಅಪಾರ ಸಂಖ್ಯೆಯ ಮಂದಿ ಬದುಕು ಕಂಡುಕೊಂಡ ಸರ್ಕಾರಿ ಸ್ವಾಮ್ಯದ ಎಷ್ಟೋ ಕೈಗಾರಿಕೆಗಳು ನಷ್ಟದಲ್ಲಿವೆ. ಅವುಗಳನ್ನೂ ಮುಚ್ಚುತ್ತೀರಾ? ಹಾಗೆ ನೋಡಿದರೆ ಸದಾ ಕೊರತೆ ಬಜೆಟ್ ಮಂಡಿಸುವ ಸರ್ಕಾರವೂ ನಷ್ಟದಲ್ಲಿಯೇ ವ್ಯವಹರಿಸುತ್ತಿರುತ್ತದೆ. ಅದನ್ನು ಮುಚ್ಚಲಾದೀತೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಇನ್ನೊಂದು ಪ್ರಮುಖ ಸಂಗತಿಯೆಂದರೆ ಏಕರೂಪದ ಶಿಕ್ಷಣ. 1994 ರ ನಂತರ ಕರ್ನಾಟಕದಲ್ಲಿ ಎಲ್ಲಿಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಅನುಮತಿಯಿಲ್ಲ. ಆದರೆ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ನಡೆಯುತ್ತಲೇ ಇದೆ. ಇದೇಕೆ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ? ಅನುಮತಿ ಇಲ್ಲದಿದ್ದರೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಹಲವು ಖಾಸಗಿ ಶಾಲೆಗಳನ್ನೂ ಮುಚ್ಚುವ ಬಗ್ಗೆ ಸರ್ಕಾರ ಯಾಕೆ ಯೋಚಿಸುತ್ತಿಲ್ಲ?. ಸಮಾಧಾನದ ಸಂಗತಿಯೆಂದರೆ ಆಯ್ದ 1000 ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ಸಕಾರಾತ್ಮಕ ಪ್ರಯತ್ನ ನಡೆಯುತ್ತಿದೆ. ಕನಿಷ್ಠ ಪಕ್ಷ ಎಸ್ಸೆಸ್ಸೆಲ್ಸಿವರೆಗಾದರೂ ಏಕರೂಪ ಶಿಕ್ಷಣ ಪದ್ಧತಿ ಇರುವಂತಾಗಬೇಕು. ಅದರೊಂದಿಗೆ ಬದುಕನ್ನು ಕಲಿಸುವ ಶಿಕ್ಷಣವೂ ದೊರೆಯುವಂತಾಗಬೇಕು. ಆದರೆ ಈಗ ಅದಿಲ್ಲ. ಬಡವರಿಗೊಂದು, ಶ್ರೀಮಂತರ ಮಕ್ಕಳಿಗೊಂದು ಶಿಕ್ಷಣ ನೀಡುತ್ತಿರುವ ನಾವು ಬಡವರನ್ನು ಮತ್ತು ಶ್ರೀಮಂತರನ್ನು ಅದೇ ಸ್ಥಿತಿಯಲ್ಲಿ ಶಾಶ್ವತವಾಗಿ ಇರಿಸಲು ಪೂರಕವಾಗಿ ಕೆಲಸಮಾಡುತ್ತಿದ್ದೇವೆ. ಹೀಗಿದ್ದಾಗ ಸಾಮಾಜಿಕ ನ್ಯಾಯದ ಮಾತನಾಡಲು ನಾವೆಷ್ಟು ಅರ್ಹರು ಎಂದು ಆಡಳಿತದಲ್ಲಿದ್ದವರು ಅವಲೋಕನ ಮಾಡಿಕೊಳ್ಳಬೇಕಿದೆ.

ಇನ್ನೊಂದು ಸಂಗತಿಯಿದೆ. ಪ್ರಾದೇಶಿಕ ಭಿನ್ನತೆ ಇರುವ ಕರ್ನಾಟಕದಂಥ ರಾಜ್ಯದಲ್ಲಿ ಶಾಲೆಗಳನ್ನು ವಿಲೀನಗೊಳಿಸುವುದರಿಂದ ಆಗಬಹುದಾದ ತೊಂದರೆಗಳು ಮನವರಿಕೆಯಾಗದೇ ಆಡಳಿತಗಾರರು ಇದು ಭಾವನಾತ್ಮಕ ಸಂಗತಿ ಎಂದಷ್ಟೇ ಪರಿಗಣಿಸುತ್ತಿರುವಂತಿದೆ. ವಾಸ್ತವ ಸಮಸ್ಯೆ ಬೇರೆಯೇ ಇದೆ.

ಮಲೆನಾಡು, ಕರಾವಳಿ ಭಾಗದ ಎಷ್ಟೋ ಕಡೆ ಒಂದೆರಡು ಕಿಲೋಮೀಟರ್ ಕಾಲುದಾರಿಯಲ್ಲಿ ಸಾಗಿ ಮಕ್ಕಳು ಶಾಲೆಗೆ ಹೋಗುತ್ತಿರುತ್ತಾರೆ. ಅಲ್ಲಿ ವಾಹನ ಹೋಗಬೇಕೆಂದರೆ 5-6 ಕಿ. ಮೀ. ಸುತ್ತುಬಳಸಿ ಹೋಗಬೇಕು. ಮಳೆಗಾಲದಲ್ಲಂತೂ ಮಗುವಿನ ಮನೆಯವರೆಗೆ ಯಾವ ವಾಹನವೂ ತಲುಪದಂಥ ಪರಿಸ್ಥಿತಿಯಿದೆ. ಅಂಥ ಕಡೆ ಸರ್ಕಾರ ಒದಗಿಸುವ ವಾಹನ ವ್ಯವಸ್ಥೆ ಪ್ರಯೋಜನಕ್ಕೆ ಬರುವುದಿಲ್ಲ. ಎರಡು ಕಿ.ಮೀ. ನಡೆಯುತ್ತಿದ್ದ ಮಗು 4 ಕಿ. ಮೀ. ನಡೆಯಬೇಕಾಗಬಹುದು ಅಷ್ಟೇ. ಶಾಲೆ ಹತ್ತಿರವಿದೆ ಹಾಗೂ ಬಿಸಿಯೂಟ ಸಿಗುತ್ತದೆ ಎಂಬ ಕಾರಣಕ್ಕೆ ಎಷ್ಟೋ ಬಡ ಮಕ್ಕಳು, ಕೂಲಿಕಾರರ ಮಕ್ಕಳು ಈಗ ಶಾಲೆಗೆ ಬರುತ್ತಿದ್ದಾರೆ. ಶಾಲೆ ದೂರವಾದರೆ ಅಂಥ ಮಕ್ಕಳನ್ನು ಪಾಲಕರು ಶಾಲೆ ಬಿಡಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅವರೆಲ್ಲ ಬಾಲಕಾರ್ವಿುಕರಾಗಿ ಬದಲಾಗುವ ಅಪಾಯವಿದೆ. ಸರ್ಕಾರ ಮಾಡುವ ವಾಹನ ವ್ಯವಸ್ಥೆ ಸಮರ್ಪಕವಾಗಿರುತ್ತದೆ ಎಂಬ ವಿಶ್ವಾಸವಂತೂ ಸದ್ಯಕ್ಕಿಲ್ಲ.

ಪ್ರತಿ ಪ್ರಜೆಗೂ ಹಕ್ಕು ಮತ್ತು ಕರ್ತವ್ಯಗಳಿರುವಾಗ ಸರ್ಕಾರಕ್ಕೂ ಅದು ಇರಬೇಕಲ್ಲವೆ? ಅದನ್ನು ಅರ್ಥ ಮಾಡಿಕೊಳ್ಳದೆ ನಷ್ಟದ ಹೆಸರಲ್ಲಿ ಸರ್ವರಿಗೂ ಶಿಕ್ಷಣ ಸುಲಭದಲ್ಲಿ ದೊರೆಯದಂತೆ ಮಾಡುವುದು ಹಾಗೂ ಪ್ರಾಥಮಿಕ ಶಿಕ್ಷಣ ನೀಡುವುದು ಲಾಭದಾಯಕ ವ್ಯವಹಾರವಲ್ಲವೆಂದು ಸರ್ಕಾರವೇ ಭಾವಿಸುವುದು ಖಾಸಗಿ ಶಾಲೆಗಳು ಇನ್ನಷ್ಟು ಹೆಚ್ಚಲು ಕಾರಣವಾಗಬಹುದು. ಅದು ಸರ್ಕಾರದ ಹೊಣೆಗಾರಿಕೆಯನ್ನೇ ಅಣಕಿಸಬಹುದು.

(ಲೇಖಕರು ‘ವಿಜಯವಾಣಿ’ ಸುದ್ದಿಸಂಪಾದಕರು)

(ಓದುಗರ ಗಮನಕ್ಕೆ: ಅನಿವಾರ್ಯ ಕಾರಣದಿಂದ ಸಜನ್ ಪೂವಯ್ಯ ಅವರ ‘ಲಾ – ಆರ್ಡರ್’ ಅಂಕಣ ಪ್ರಕಟವಾಗಿಲ್ಲ)

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...