ಪ್ರಾಣಿಗಳನ್ನು ದತ್ತು ಪಡೆದ ದರ್ಶನ್​, ಸೃಜನ್​ ಲೋಕೇಶ್​, ದೇವರಾಜ್​ ಕುಟುಂಬ

ಮೈಸೂರು: ನಟರಾದ ದೇವರಾಜ್​, ದರ್ಶನ್​ ಹಾಗೂ ಸೃಜನ್​ ಲೋಕೇಶ್​ ಮತ್ತಿರರು ಜಯಚಾಮರಾಜೇಂದ್ರ ಮೃಗಾಲಯದಿಂದ ಪ್ರಾಣಿಗಳನ್ನು ದತ್ತು ಪಡೆದರು.

ದೇವರಾಜ್​ ಕುಟುಂಬ ಒಂದು ಚಿರತೆಯನ್ನು ದತ್ತು ಪಡೆದರೆ, ಸೃಜನ್​ ಲೋಕೇಶ್​, ದರ್ಶನ್​ ಸೇರಿ ಜಿರಾಫೆ ಮರಿಯನ್ನು ದತ್ತು ಸ್ವೀಕಾರ ಮಾಡಿದರು.

ಈ ವೇಳೆ ಮಾತನಾಡಿದ ನಟ ದರ್ಶನ್​, ನಾವು ಹಣವನ್ನು ಎಲ್ಲೋ ಕಳೆದುಬಿಡುತ್ತೇವೆ. ಅದೇ ಪ್ರಾಣಿಗಳನ್ನು ಸಾಕಲು ವಿನಿಯೋಗಿಸಿದರೆ ಒಂದು ತೃಪ್ತಿ ಇರುತ್ತದೆ. ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಹಾಗಾಗಿ ಮೃಗಾಲಯದಲ್ಲೇ ದತ್ತು ಪಡೆದು ಪೋಷಿಸಬೇಕು. ಅರಣ್ಯಕ್ಕೆ ಮನುಷ್ಯರು ಅತಿಕ್ರಮಣ ಮಾಡಿದ್ದರಿಂದ ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದರು.

ಅರಣ್ಯ ಉಳಿಸಬೇಕು. ಹೆಚ್ಚೆಚ್ಚು ಗಿಡ ನೆಟ್ಟು ಪೋಷಿಸಬೇಕು. ಒಂದು ಗಿಡ ಹಾಕಿ ಅದರ ಎದುರು ಸೆಲ್ಫಿ ತೆಗೆದುಕೊಂಡರೆ ಮುಗಿಯುವುದಿಲ್ಲ. ಅದಕ್ಕೆ ಸರಿಯಾಗಿ ನೀರೆರೆದು ಪೋಷಿಸಬೇಕು. ಯುವಕರು ವೀಕೆಂಡ್​ ನೆಪದಲ್ಲಿ ಖರ್ಚು ಮಾಡುತ್ತಾರೆ. ಅದೇ ಹಣವನ್ನು ಉಳಿಸಿ ಪ್ರಾಣಿಗಳನ್ನು ದತ್ತುಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ನನಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಪ್ರೀತಿ. ಹೀಗೆ ದತ್ತು ಪಡೆಯಲು ಮಾರ್ಗದರ್ಶನ ಮಾಡಿದ್ದು ನನ್ನ ಮಗನ ಸಮಾನರಾಗಿರುವ ದರ್ಶನ್​ ಎಂದು ದೇವರಾಜ್​ ಪತ್ನಿ ಚಂದ್ರಲೇಖ ಹೇಳಿದರು.

ಜಿರಾಫೆ ಮರಿಗೆ ತೂಗುಲೋಕ ಹೆಸರು

ನಾನು, ದರ್ಶನ್​ ಸೇರಿ ದತ್ತು ಪಡೆದ ಜಿರಾಫೆ ಮರಿಗೆ ಮೃಗಾಲಯದ ಸಿಬ್ಬಂದಿ ಅನುಮತಿ ನೀಡಿದರೆ ತೂಗುಲೋಕ ಎಂದು ಹೆಸರಿಡುತ್ತೇವೆ ಎಂದು ನಟ ಸೃಜನ್​ ಲೋಕೇಶ್​ ತಿಳಿಸಿದರು.