ಪ್ರಾಣಿಗಳ ಮಿಂಚಿನ ಓಟ

ಚಿರತೆ ಅತ್ಯಂತ ವೇಗವಾಗಿ ಓಡುತ್ತದೆ ಎಂಬುದು ನಿಮಗೆಲ್ಲ ತಿಳಿದಿರುವ ಸಂಗತಿ. ಎಲ್ಲ ಪ್ರಾಣಿಗಳೂ ಆಕ್ರಮಣ ಮಾಡುವಾಗ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಂಡು ವೇಗ ಪಡೆದುಕೊಳ್ಳುತ್ತವೆ. ಹಾಗಾದರೆ ಅವುಗಳ ಆ ರೀತಿಯ ವೇಗಕ್ಕೆ ಕಾರಣವೇನು? ಹಾಗೆ ಓಡಲು ಅವುಗಳ ದೇಹಾಕೃತಿ ಹೇಗೆ ಸಹಾಯವಾಗುತ್ತದೆ?

| ವೀರೇಶ ಮಾಶೆಟ್ಟಿ ನಿಡಗುಂದಿ

ಪೂರ್ಣಪಾದವನ್ನು ನೆಲಕ್ಕೂರಿ ನಡೆಯುವ ಮಾನವ, ಬೆರಳುಗಳನ್ನು ನೆಲಕ್ಕೂರಿ ನಡೆಯುವ ನಾಯಿ ಮುಂತಾದ ಮಾಂಸಾಹಾರಿ ಪ್ರಾಣಿಗಳು ಮತ್ತು ಗೊರಸಿನ ಆಧಾರದ ಮೇಲೆ ಓಡುವ ಕುದುರೆ, ಜಿಂಕೆ ಮುಂತಾದ ಸಸ್ಯಾಹಾರಿ ಪ್ರಾಣಿಗಳ ಕೈಕಾಲುಗಳಲ್ಲಿನ ಮೂಳೆಗಳಲ್ಲಿ ವ್ಯತ್ಯಾಸ ಇರುತ್ತದೆ. ಗೊರಸು ಇರುವ ಪ್ರಾಣಿಗಳ ಕೈಕಾಲುಗಳಲ್ಲಿರುವ ತಂತುಕಟ್ಟು ಕಾಲಿನ ಆಕಾರದಲ್ಲಿ ಬದಲಾವಣೆಗಳನ್ನು ಮಾಡುತ್ತದೆ. ಕುದುರೆಗಳಲ್ಲಿ ಈ ತಂತುಕಟ್ಟು ನಿರ್ದಿಷ್ಟ ಕಾಲಾವಧಿಯಲ್ಲಿ ಸ್ಪ್ರಿಂಗ್​ನಂತೆ ತೂಗಾಡಬಲ್ಲದಾಗಿದ್ದು, ಕಾಲಿನ ಖುರಪುಟವನ್ನು ನಿಯಂತ್ರಿಸುತ್ತದೆ. ನಾವು ನಡೆಯುವಾಗ ಒಂದು ಪಾದವನ್ನು ನೆಲಕ್ಕೆ ಊರಿ ಇನ್ನೊಂದು ಪಾದವನ್ನು ಮುಂದಕ್ಕೆ ಇಡುತ್ತೇವೆ. ಮುಂದಿಟ್ಟ ಹೆಜ್ಜೆಗೆ ದೇಹವನ್ನು ಮುಂದೆ ಚಾಚಿ ಸನ್ನೆ ಆಗಿ ಮಾಡಿಕೊಳ್ಳುತ್ತೇವೆ. ಆ ಕಾಲು ನಮ್ಮ ಸೊಂಟದಿಂದ ಲೋಲಕದ ರೀತಿ ತೂಗಾಡುತ್ತಾ ಮುಂದೆ ಸಾಗುತ್ತದೆ. ಓಡುವಾಗ ಪೂರ್ಣವಾಗಿ ಹೆಜ್ಜೆ ಊರದೇ ವೇಗವನ್ನು ಹೆಚ್ಚಿಸಿಕೊಳ್ಳಬಹುದು.

ಪ್ರಾಣಿಗಳ ಚಲನೆಯ ವೇಗ

ಆನೆ ತನ್ನ ‘ಗಜಗಮನ’ಕ್ಕೆ ಹೆಸರುವಾಸಿ. ಕುದುರೆಯ ಓಟ, ಒಂಟೆಯ ನಡಿಗೆ, ಚಿರತೆಯ ನಾಗಾಲೋಟ, ನಾಯಿಯ ಹಾರಿಕೆಯ ಓಟ ಮತ್ತು ಜಿಂಕೆಯ ಜಿಗಿತದ ಓಟಗಳಲ್ಲಿ ನಾಲ್ಕೂ ಕಾಲುಗಳ ಬಳಕೆ ಭಿನ್ನವಾಗಿರುತ್ತದೆ. ವೇಗದಲ್ಲೂ ಅನೇಕ ವ್ಯತ್ಯಾಸಗಳಿರುತ್ತವೆ. ಚಿರತೆ ಗಂಟೆಗೆ ಸುಮಾರು 160 ಕಿಮೀ, ಕುದುರೆ 88 ಕಿಮೀ, ಸಿಂಹ 80 ಕಿಮೀ, ಆಫ್ರಿಕಾದ ಆನೆ 72.5 ಕಿಮೀ, ಕೆಂಪು ಕಾಂಗರೂ 70 ಕಿಮೀ, ಹೇಸರಗತ್ತೆ 64.5 ಕಿಮೀ ವೇಗದಲ್ಲಿ ಓಡುತ್ತವೆ. ಇಷ್ಟು ವೇಗಕ್ಕೆ ಇವುಗಳ ಹಸಿವೂ ಕಾರಣವಾಗಿರಬಲ್ಲದು. ಅಷ್ಟಕ್ಕೂ, ಪ್ರಾಣಿಗಳು ಮಾತ್ರ ವೇಗವಾಗಿ ಓಡುವುದಿಲ್ಲ. ಪಕ್ಷಿಗಳು ಕೂಡ ಶರವೇಗದಲ್ಲಿ ಹಾರುತ್ತವೆ. ಪಕ್ಷಿಗಳಲ್ಲೇ ಅತಿ ದೊಡ್ಡ ಪಕ್ಷಿ ಆಸ್ಟ್ರಿಚ್ ವೇಗದ ಓಟಕ್ಕೆ ಹೆಸರುವಾಸಿ. ಓಟಕ್ಕೆ ಹೆಸರಾಗಿರುವ ಆಸ್ಟ್ರಿಚ್ ದ್ವಿಪಾದಿಯಾದರೂ ಸಮತೋಲನ ಸಾಧಿಸಲು ಹಿಂಗಾಲುಗಳು ದೇಹದ ಮಧ್ಯಭಾಗಕ್ಕೆ ಸರಿದಿರುತ್ತವೆ. ಆಸ್ಟ್ರಿಚ್​ನಂತೆ ರಿಯಾ, ಎಮು, ಕ್ಯಾಸೋವರಿ ಪಕ್ಷಿಗಳೂ ಓಡುವ ಹಕ್ಕಿಗಳಾಗಿದ್ದು ಅವು ಉದ್ದ ಮತ್ತು ಬಲಿಷ್ಠ ಕಾಲುಗಳನ್ನು ಹೊಂದಿವೆ. ವಿಶೇಷವಾಗಿ ಭಾರಿ ವೇಗದ ಜೀವಿಗಳಾದ ಪೆರಿಗ್ರೀನ್ ಫಾಲ್ಕನ್ ಗಂಟೆಗೆ 200 ಮೈಲು, ಇಗಾಟೆ ಬರ್ಡ್ 95 ಮೈಲು, ಸೇಲ್ ಫಿಶ್ 68 ಮೈಲು, ಚಿರತೆ 61 ಮೈಲು ವೇಗವಾಗಿ ಚಲಿಸಬಲ್ಲವು. ಅತಿ ನಿಧಾನವಾಗಿ ಚಲಿಸುವ ಜೀವಿಗಳೆಂದರೆ ಸ್ಲೋಥ್, ಸ್ಟಾರ್​ಫಿಷ್, ಗಾರ್ಡನ್ ಸ್ನೇಲ್, ಜಯಂಟ್ ಆಮೆ, ಕರಡಿ ಮುಂತಾದವುಗಳು.

ಚಿರತೆಯ ಅದ್ಭುತ ವೇಗ

ಅತ್ಯಂತ ವೇಗವಾಗಿ ಓಡುವ ಪ್ರಾಣಿ ಚಿರತೆ. ಅತಿ ಶೀಘ್ರವಾಗಿ ಓಡುವ ಚಿರತೆ ಮತ್ತು ಬೇಟೆ ನಾಯಿಗಳ ಓಟದಲ್ಲಿ ವ್ಯತ್ಯಾಸ ಕಾಣಬಹುದು. ಚಿರತೆ ಬೇಟೆಯ ಹಿಂದೆ ಅಟ್ಟಿಸಿಕೊಂಡು ಹೋದಾಗ ಅದು ಸಿಗದಿದ್ದಲ್ಲಿ ಕೆಲವೇ ಮೀಟರುಗಳಷ್ಟು ಓಡಿ ಸುಮ್ಮನಾಗುತ್ತದೆ. ಆದರೆ ಬೇಟೆ ನಾಯಿಗಳು ಕಿಲೋಮೀಟರುಗಟ್ಟಲೆ ಓಡಿಸಿಕೊಂಡು ಹೋಗಿ ಬೇಟೆಯನ್ನು ಹಿಡಿಯುತ್ತವೆ. ಶೀಘ್ರಗಾಮಿಯಾದ ಚಿರತೆಯ ಓಟದಲ್ಲಿ ಇಡೀ ಶರೀರ ಬದಲಾವಣೆಗಳನ್ನು ತೋರುತ್ತದೆ. ಇದು ಗಂಟೆಗೆ ಸುಮಾರು 160 ಕಿಮೀ ವೇಗದಲ್ಲಿ ಚಲಿಸಬಲ್ಲದಾದರೂ ಒಂದೇ ವೇಗದಲ್ಲಿ ಬಹುದೂರ ಓಡಲಾರದು. ಒಂದು ಸಲಕ್ಕೆ 7 ಕಿಮೀಗಳಷ್ಟು ಓಡುವ ಸ್ನಾಯು ನಿಯಂತ್ರಣ ಇದಕ್ಕಿದೆ. ಯಾವ ಸ್ನಾಯು ತನ್ನ ಉದ್ದದಲ್ಲಿ ಹೆಚ್ಚು ವ್ಯತ್ಯಾಸಗೊಳ್ಳದೆ ಸಂಕುಚಿತಗೊಳ್ಳುತ್ತದೆಯೋ ಅಂತಹ ಸ್ನಾಯುಗಳಲ್ಲಿ ಹೆಚ್ಚಿನ ಬಲ ಇರುತ್ತದೆ ಎಂಬುದು ಸಾಬೀತಾಗಿದೆ. ಜಿಗಿಯುವ ಅಥವಾ ಕುಪ್ಪಳಿಸಿ ಹಾರುವ ಸಸ್ತನಿಯಾದ ಕಾಂಗರೂ ಚತುಷ್ಪಾದಿಯಾದರೂ ನೀಳವಾದ ಹಿಂಗಾಲುಗಳನ್ನು ಚಲನೆಗೆ ಬಳಸುತ್ತದೆ. ಕಾಂಗರೂಗಳಲ್ಲಿ ಶ್ವಾಸಕೋಶವು ಜೈವಿಕಯಂತ್ರದಂತೆ ಕುಪ್ಪಳಿಸಲು ಸಹಾಯಕ. ಒಂದು ಬಾರಿ ಕುಪ್ಪಳಿಸಿದಾಗ ಒಮ್ಮೆ ಶ್ವಾಸವನ್ನು ಒಳಗೆಳೆದುಕೊಳ್ಳುತ್ತದೆ. ಕುಪ್ಪಳಿಸುವಾಗ ಶರೀರದಲ್ಲಿ ಉಂಟಾಗುವ ಬದಲಾವಣೆಯೇ ಉಚ್ವಾಸಕ್ಕೆ ಅನುವು ಮಾಡಿಕೊಡುತ್ತದೆ. ಇದೇ ಬಗೆಯ ಶ್ವಾಸಕೋಶದ ನೆರವು ವೇಗಗತಿಯ ಕುದುರೆ, ನಾಯಿ, ಮೊಲಗಳಲ್ಲಿಯೂ ಕಾಣುತ್ತದೆ. ಕಪ್ಪೆಗಳು ಉಭಯಜೀವಿಗಳಾದರೂ ನೆಲದ ಮೇಲೆ ಕುಪ್ಪಳಿಸಲು ಅವುಗಳ ಉದ್ದಕಾಲು ಸಹಾಯಕ. ಮಂದಗತಿಗೆ ಹೆಸರು ಮಾಡಿರುವ ಆಮೆ ಲಯಬದ್ಧ ರೀತಿಯಲ್ಲಿ ಮುಂದಿನ ಮತ್ತು ಹಿಂದಿನ ಕಾಲುಗಳನ್ನು ಬಳಸುತ್ತದೆ. ಆಮೆಯಲ್ಲಿ ಗುರುತಿಸಬಹುದಾದ ತಂತ್ರವನ್ನೇ ಶೀಘ್ರಗಾಮಿಗಳಾದ ನಾಯಿ, ಕುದುರೆ ಮುಂತಾದ ಚತುಷ್ಪಾದಿಗಳು ಬಳಸಿದರೂ ಅವುಗಳ ಚಲನಾಂಗಗಳು ನಿರ್ದಿಷ್ಟ ಅವಧಿಯಲ್ಲಿ ಬಳಸಿಕೊಳ್ಳುವುದಿಲ್ಲ. ಮಂದಗತಿಗೆ ಹೆಸರಾಗಿರುವ ಮತ್ತೊಂದು ಜೀವ ಎಂದರೆ ತೆವಳಿಕೊಂಡು ಮುಂದೆ ಚಲಿಸುವ ಬಸವನಹುಳು.

ಚಿರತೆಯ ಓಟದ ಸೀಕ್ರೆಟ್

ಪೂರ್ತಿಯಾಗಿ ದೇಹವನ್ನು ಚಾಚಿದಾಗ ಅದು ಭೂಮಿಗೆ ಸಮಾನಾಂತರವಾಗಿ ಅದರ ಬೆನ್ನಿನ ಭಾಗ ಕೆಳಬಾಗುತ್ತದೆ. ಇಂತಹ ಬಾಗುವಿಕೆಗೆ ಅನುಕೂಲವಾಗುವಂತೆ ಇದರ ಕಶೇರುಕಗಳು ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿವೆ. ದೇಹದ ಸಮತೋಲನ ಕಾಯ್ದುಕೊಳ್ಳಲು ಬಾಲವನ್ನೂ ಮೇಲೆ-ಕೆಳಗೆ ಮಾಡಿಕೊಳ್ಳಬಲ್ಲದು. ಮತ್ತೊಂದು ಜಿಗಿತಕ್ಕೆ ಅಣಿಯಾಗಲು ಬೆನ್ನಿನ ಮೂಳೆಯನ್ನು ಮೇಲಕ್ಕೆ ಬಾಗಿಸಿ ಹಿಂದಿನ ಕಾಲುಗಳನ್ನು ಮುಂದಕ್ಕೆ ತೂಗಿಸಿಕೊಂಡು ದೇಹದ ಸಮತೋಲನ ಕಾಪಾಡಿಕೊಳ್ಳುತ್ತದೆ.

Leave a Reply

Your email address will not be published. Required fields are marked *