ಜವಾಬ್ದಾರಿ ಮರೆತ ಶಾಸಕ ಎಚ್ಕೆ

ಗದಗ: ಶಾಸಕ ಎಚ್.ಕೆ. ಪಾಟೀಲ ಅವರು ಪಬ್ಲಿಸಿಟಿ ಸ್ಟಂಟ್ ಮಾಸ್ಟರ್ ಆಗಿದ್ದು, ವಿಧಾನಸಭೆ ಚುನಾವಣೆಗೂ ಮುನ್ನ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದ್ದರು. ಶಾಸಕರಾದ ಬಳಿಕ ಸಚಿವ ಸ್ಥಾನ ಸಿಗದ ಕಾರಣ ಹತಾಶೆಗೊಂಡು ಜವಾಬ್ದಾರಿ ಮರೆತು, ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಮರೆತುಬಿಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾನಾಡಿದ ಅವರು, ಎಚ್.ಕೆ. ಪಾಟೀಲ ಅವರು ಸಚಿವರಾಗಿದ್ದ ವೇಳೆ ಹಮ್ಮಿಕೊಂಡಿದ್ದ 24*7 ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ಕಾಮಗಾರಿಗಳು ಅಲ್ಲಲ್ಲಿ ಸ್ಥಗಿತಗೊಂಡಿವೆ. ಬೇರೆ ಕೆಲಸ ಇಲ್ಲದ ಕಾರಣ ಉದ್ಘಾಟನೆಗೊಂಡಿದ್ದ ಇಂದಿರಾ ಕ್ಯಾಂಟೀನ್ ಅನ್ನು ಮರು ಉದ್ಘಾಟಿಸಲು ಆರಂಭಿಸಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿ ಹರಿಕಾರ ಎಂಬ ಪಟ್ಟ ಕಟ್ಟಿಕೊಂಡಿರುವ ಶಾಸಕ ಎಚ್.ಕೆ. ಪಾಟೀಲರ ಸಾಧನೆ ಶೂನ್ಯ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ರಾಜ್ ವಿವಿಯಲ್ಲಿ ಸಮರ್ಪಕ ಬೋಧಕ ಸಿಬ್ಬಂದಿಯಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಬಗೆಗೆ ಗಮನ ಹರಿಸಿಲ್ಲ ಎಂದರು. 8-10 ತಿಂಗಳಿಗೊಮ್ಮೆ ನಗರಸಭೆ ಅಧ್ಯಕ್ಷರನ್ನು ಬದಲಾಯಿಸುವುದೇ ಶಾಸಕರ ಮಹತ್ವದ ಕೆಲಸವಾಗಿದೆ. ಬದಲಾಗಿ ಮೂರು ತಿಂಗಳಿಗೊಮ್ಮೆ ಅಧ್ಯಕ್ಷನ್ನು ಬದಲಾಯಿಸಿದರೆ, ಒಟ್ಟಾರೆಯಾಗಿ ಸದಸ್ಯರೆಲ್ಲರೂ ಅಧ್ಯಕ್ಷ ಪಟ್ಟ ಅಲಂಕರಿಸಬಹುದಾಗಿದೆ ಎಂದರು.  ಮುಳಗುಂದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ದಬ್ಬಾಳಿಕೆ, ಗೂಂಡಾಗಿರಿ, ಬಡ್ಡಿ ವ್ಯವಹಾರ ಮಾಡುವ ಮೂಲಕ ಜನರನ್ನು ಭಯದ ವಾತಾವರಣದಿಂದ ಅಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಉತ್ತಮ ಪೈಪೋಟಿ ನೀಡಿ ಮೂರು ವಾರ್ಡ್​ಗಳಲ್ಲಿ ಗೆಲುವು ಹಾಗೂ 6 ವಾರ್ಡ್​ಗಳಲ್ಲಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದೇವೆ ಎಂದು ಅನಿಲ ಮೆಣಸಿನಕಾಯಿ ಹೇಳಿದರು. ಬಿಜೆಪಿ ಗದಗ-ಬೆಟಗೇರಿ ಶಹರ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಮುಖಂಡರಾದ ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಕಾಂತೀಲಾಲ ಬನ್ಸಾಲಿ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ ಹಾಗೂ ಇತರರು ಇದ್ದರು.

ಭೀಷ್ಮ ಕೆರೆಗೆ ಸಿಬ್ಬಂದಿ ನಿಯೋಜಿಸಿ

ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಯಲ್ಲಿ ಕಳೆದ ಒಂದು ತಿಂಗಳೊಳಗಾಗಿ ಮೂರು ಸಾವುಗಳು ಸಂಭವಿಸಿವೆ. ಆದರೂ, ಎಚ್ಚೆತ್ತುಕೊಂಡಿಲ್ಲ. ಭೀಷ್ಮ ಕೆರೆ ಸುತ್ತಲೂ ತಡೆಗೊಡೆ ಹಾಗೂ ಭದ್ರತಾ ಸಿಬ್ಬಂದಿ ನಿಯೋಜಿಸುವ ಕೆಲಸವಾಗಬೇಕು ಎಂದು ಅನಿಲ ಮೆಣಸಿನಕಾಯಿ ಆಗ್ರಹಿಸಿದರು.

ರಾಜಕೀಯ ನಿವೃತ್ತಿ ವದಂತಿ ಸುಳ್ಳು

ಕಳೆದ 20 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ಬಿಜೆಪಿ ನನ್ನನ್ನು ಗೌರವದಿಂದ ನೋಡಿಕೊಂಡಿದೆ. ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ. ಗದಗ ಮತಕ್ಷೇತ್ರದ 75 ಸಾವಿರ ಜನರು ನನಗೆ ಮತ ನೀಡಿದ್ದಾರೆ. ಮುಳಗುಂದ ಪಪಂ ಚುನಾವಣೆ ಮಾಡಿದ್ದೇನೆ. ಕೆಲವೊಂದು ವಿಚಾರಗಳಲ್ಲಿ ನೋವಾದ ಸಂದರ್ಭದಲ್ಲಿ ಸ್ನೇಹಿತರ ಬಳಿ ಕೆಲ ಮಾತಗಳನ್ನು ಹಂಚಿಕೊಂಡಿದ್ದೇನೆ. ಆ ಮಾತುಗಳು ವೈರಲ್ ಆಗಿವೆ. ಆದರೆ, ರಾಜಕೀಯ ನಿವೃತ್ತಿ ವದಂತಿ ಸುಳ್ಳು ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಸ್ಪಷ್ಟಪಡಿಸಿದರು.

ವರಿಷ್ಠರು ಬುದ್ಧಿ ಕಲಿಸುತ್ತಾರೆ

ಬಿಜೆಪಿಯನ್ನು ತಾಯಿ ಎಂದು ಹೇಳುತ್ತಿದ್ದವರು ಚುನಾವಣೆ ವೇಳೆ ಮಲ್ಲಪ್ಪಶೆಟ್ಟಿಯಂಥ ಕೆಲಸ ಮಾಡಿದ್ದರಿಂದಲೇ ನಮಗೆ ಸೋಲಾಗಿದೆ. ಈ ವಿಷಯ ಪಕ್ಷದ ವರಿಷ್ಠರ ಗಮನಕ್ಕೆ ಬಂದಿದ್ದು, ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅನಿಲ ಮೆಣಸಿನಕಾಯಿ, ಇನ್ನೆರಡು ತಿಂಗಳಲ್ಲಿ ನಗರಸಭೆಯ ಕಾಂಗ್ರೆಸ್​ನ ಮತ್ತಷ್ಟು ಸದಸ್ಯರು ಬಿಜೆಪಿಗೆ ಬರುತ್ತಾರೆ ಎಂದರು.

 

ಕಾಂಗ್ರೆಸ್​ನಿಂದ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ಸತತ ಮೂರು ಬಾರಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಶಾಸಕ ಎಚ್.ಕೆ. ಪಾಟೀಲ ಅವರ ವಿರುದ್ಧದ ಪ್ರಕರಣ ವಜಾಗೊಂಡಿದೆ. ಈ ಬಗೆಗೆ ಸುಪ್ರೀಂ ಕೋರ್ಟ್​ನಲ್ಲಿ ಮತ್ತೆ ರೀ-ಕಾಲ್ ಮಾಡಿಸಿ, ಚುನಾವಣೆ ಅಕ್ರಮದ ಬಗ್ಗೆ ಹೈಕೋರ್ಟ್​ನಲ್ಲಿ ಹೋರಾಟ ಮುಂದುವರಿಸುತ್ತೇನೆ.

ಅನಿಲ ಮೆಣಸಿನಕಾಯಿ, ಬಿಜೆಪಿ ಮುಖಂಡ