ಹಿನ್ನೆಲೆ ಡಾನ್ಸರ್ ಆಗಿದ್ರು ಅನಿಲ್!

ನಟ ಅನಿಲ್ ಕಪೂರ್ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರ ತಂದೆ ಸುರೀಂದರ್ ಕಪೂರ್ ನಿರ್ವಪಕರು. ಹಾಗಾಗಿ ಅನಿಲ್ ದೊಡ್ಡ ಸ್ಟಾರ್ ಆದರು ಎಂದು ಅನೇಕರು ಮಾತನಾಡಿಕೊಂಡಿದ್ದಿದೆ. ಆದರೆ ಅನಿಲ್ ಈಗ ಅಚ್ಚರಿಯ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ಅವರು ನಟರಾಗಿ ಪರಿಚಯಗೊಳ್ಳುವುದಕ್ಕೂ ಮೊದಲು ಬ್ಯಾಕ್​ಗ್ರೌಂಡ್ ಡಾನ್ಸರ್ ಆಗಿದ್ದರಂತೆ! ಈ ವಿಚಾರವನ್ನು ಸ್ವತಃ ಅನಿಲ್ ಕಪೂರ್ ಬಿಚ್ಚಿಟ್ಟಿದ್ದಾರೆ. ಅನಿಲ್ ನಾಯಕನಾಗಿ ಪರಿಚಯಗೊಂಡಿದ್ದು, 1980ರಲ್ಲಿ ತೆರೆಕಂಡ ‘ವಂಶವೃಕ್ಷ’ ಚಿತ್ರದ ಮೂಲಕ. ಅದಕ್ಕೂ ಮೊದಲು ಅವರು ಅನೇಕ ಹಾಡುಗಳಿಗೆ ಬ್ಯಾಕ್​ಗ್ರೌಂಡ್ ಡಾನ್ಸರ್ ಆಗಿ ಕೆಲಸ ಮಾಡಿದ್ದರಂತೆ. 1979ರಲ್ಲಿ ಜರಿಯಾನಾ ವಹಾಬ್ ಶೋ ಒಂದನ್ನು ಏರ್ಪಡಿಸಿದ್ದರು. ಈ ವೇಳೆ ಬ್ಯಾಕ್​ಗ್ರೌಂಡ್ ಡಾನ್ಸರ್​ಗಳ ಅವಶ್ಯಕತೆ ಇದೆ ಎಂದು ಜಾಹೀರಾತು ನೀಡಲಾಗಿತ್ತು. ಅದನ್ನು ನೋಡಿ ಅನಿಲ್ ಅವಕಾಶ ಕೇಳಿದ್ದರಂತೆ. ಹೀಗೆ ಅವರು ಬಣ್ಣದ ಬದುಕು ಆರಂಭಗೊಂಡಿತು. ‘ನನ್ನ ತಂದೆ ನಿರ್ವಪಕ ಆಗಿರಬಹುದು. ಆದರೆ ನಾವು ಶ್ರಮವಹಿಸಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಹೊಂದಲು ಸಾಧ್ಯ ಎಂಬುದನ್ನು ಹೇಳಿಕೊಟ್ಟಿದ್ದರು. ಆ ಮಾರ್ಗದಲ್ಲಿ ನಡೆದಿದ್ದೇನೆ’ ಎನ್ನುತ್ತಾರೆ ಅನಿಲ್.