ಮಗಳ ಸಾಧನೆಗೆ ಅನಿಲ್ ಖುಷ್

ನಟಿ ಸೋನಮ್ ಕಪೂರ್ ಚಿತ್ರರಂಗಕ್ಕೆ ಕಾಲಿಟ್ಟು ಭರ್ತಿ 10 ವರ್ಷಗಳಾಗಿವೆ. ಅದರಲ್ಲಿ ಸಾಕಷ್ಟು ಸೋಲು-ಗೆಲುವು ಅವರ ಖಾತೆಯಲ್ಲಿ ಜಮೆಯಾಗಿವೆ. ಆದರೆ, ಕಳೆದ ಐದು ವರ್ಷಗಳ ಅವರ ಸಿನಿಸಾಧನೆ ಬಗ್ಗೆ ಅವರ ತಂದೆ ಅನಿಲ್ ಕಪೂರ್ ಮಾತನಾಡಿದ್ದಾರೆ. ಹೌದು, ಪುತ್ರಿ ಸೋನಮ್ ಐದು ವರ್ಷಗಳಲ್ಲಿ ಎಂಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವುದು ಅನಿಲ್ ಕಪೂರ್​ಗೆ ಹೆಮ್ಮೆ ಮೂಡಿಸಿದೆಯಂತೆ. ಅಷ್ಟಕ್ಕೂ ಆ ಎಂಟು ಸಿನಿಮಾಗಳು ಯಾವವು? ‘ರಾಂಝಾಣಾ’, ‘ಭಾಗ್ ಮಿಲ್ಖಾ ಭಾಗ್’, ‘ಖೂಬ್​ಸೂರತ್’, ‘ಪ್ರೇಮ್ ರತನ್ ಧನ್ ಪಾಯೋ’, ‘ನೀರಜಾ’, ‘ಪ್ಯಾಡ್​ವುನ್’, ‘ವೀರೇ ದಿ ವೆಡ್ಡಿಂಗ್’ ಮತ್ತು ಇತ್ತೀಚಿನ ‘ಸಂಜು’. ಹೀಗೆ ಸೋನಮ್ ನಟಿಸಿರುವ ಎಂಟು ಚಿತ್ರಗಳು ಯಶಸ್ಸು ಕಂಡಿರುವುದಕ್ಕೆ ಶುಭ ಕೋರಿರುವ ಅನಿಲ್, ‘ನಮ್ಮ ಆಯ್ಕೆಗಳು ನಮ್ಮ ಜೀವನದ ಗತಿಯನ್ನು ಬದಲಾಯಿಸುತ್ತವೆ. ಕಥೆ, ನಿರ್ದೇಶಕರ ಆಯ್ಕೆಯಲ್ಲಿ ನೀನು ಗೆದ್ದಿದ್ದೀಯಾ. ಈ ಸಿನಿಮಾಗಳು ಗೆಲ್ಲುವುದಕ್ಕೆ ಕೆಲಸದ ಬಗ್ಗೆ ನಿನಗಿರುವ ಬದ್ಧತೆ, ನಿನ್ನ ಶ್ರಮವೇ ಕಾರಣ’ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. -ಏಜೆನ್ಸೀಸ್