ತಿಂಗಳೊಳಗೆ ಹಣ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ: ಎರಿಕ್ಸನ್​ ಪ್ರಕರಣದಲ್ಲಿ ಅನಿಲ್​ ಅಂಬಾನಿಗೆ ಸುಪ್ರೀಂ ತರಾಟೆ

ನವದೆಹಲಿ: ಎರಿಕ್ಸನ್​ ಪ್ರಕರಣದಲ್ಲಿ ಉದ್ಯಮಿ ಅನಿಲ್​ ಅಂಬಾನಿ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ನಾಲ್ಕು ವಾರದೊಳಗೆ 450 ಕೋಟಿ ರೂ.ಗಳನ್ನು ಎರಿಕ್ಸನ್​ ದೂರಸಂಪರ್ಕ ಕಂಪನಿಗೆ ಪಾವತಿಸದಿದ್ದರೆ, ಮೂರು ತಿಂಗಳ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಈ ಹಿಂದೆಯೇ ಆದೇಶ ನೀಡಿದ್ದರು ಅದನ್ನು ಪಾಲಿಸದ ರಿಲಯನ್ಸ್​ ಗ್ರೂಪ್​ನ ಮುಖ್ಯಸ್ಥರಾಗಿರುವ ಅನಿಲ್​ ಅಂಬಾನಿ ಅವರ ನ್ಯಾಯಾಂಗ ನಿಂದನೆಗೆ ಕೋರ್ಟ್​ ದಂಡವಿಧಿಸಿದ್ದು, ಒಂದು ಕೋಟಿ ರೂ.ಗಳನ್ನು ಸುಪ್ರೀಂಕೋರ್ಟ್ ನೋಂದಣಿ ಕಚೇರಿಗೆ ಪಾವತಿಸುವಂತೆ ಆದೇಶಿಸಿದೆ.​

ಅನಿಲ್​ ಅಂಬಾನಿ ಹಾಗೂ ಕಂಪನಿಯ ಇತರರು ಎರಿಕ್ಸನ್ ಕಂಪನಿಯೊಂದಿಗಿನ ತಮ್ಮ​ ಒಪ್ಪಂದವನ್ನು ಉಲ್ಲಂಘಿಸಿದ್ದು, ಇದು ಉದ್ದೇಶಪೂರ್ವಕ ನಡವಳಿಕೆಯಾಗಿದೆ ಎಂದು ಕೋರ್ಟ್​ ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದು, ಖಡಕ್​ ಎಚ್ಚರಿಕೆಯೊಂದಿಗೆ ಹಣ ಪಾವತಿಸುವಂತೆ ತಿಳಿಸಿದೆ.

ಸ್ವೀಡಿಷ್ ಮೂಲದ ಟೆಲಿಫೋನ್​ ಸಾಧನಗಳ ತಯಾರಿಕ ಕಂಪನಿಯಾಗಿರುವ ಎರಿಕ್ಸನ್,​ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿಸಿಲ್ಲ ಎಂದು ಆರೋಪಿಸಿ ಅನಿಲ್​ ಅಂಬಾನಿ ವಿರುದ್ಧ ಸುಪ್ರೀಂಕೋರ್ಟ್​ ಮೊರೆ ಹೋಗಿತ್ತು. ರಫೇಲ್​ ಜೆಟ್​ ಒಪ್ಪಂದದಲ್ಲಿ ರಿಲಯನ್ಸ್​ ಗ್ರೂಪ್​ ಬಂಡವಾಳ ಹೂಡಲು ಒಪ್ಪಿಕೊಂಡಿತ್ತು. ಆದರೆ, ಬಾಕಿಯಿರುವ 550 ಕೋಟಿ ರೂ. ಮೊತ್ತವನ್ನು ಪಾವತಿಸಲು ತೀವ್ರವಾಗಿ ನಿರಾಕರಿಸಿದ್ದಾರೆ ಎಂದು ಭಾರತದಲ್ಲಿರುವ ಎರಿಕ್ಸನ್​ ಕಚೇರಿ ಅನಿಲ್​ ಅಂಬಾನಿ ವಿರುದ್ಧ ಆರೋಪಿಸಿತ್ತು.

ಈ ಬಗ್ಗೆ ಕೋರ್ಟ್​ಗೆ ಸಮರ್ಥನೆ ನೀಡಿರುವ ಅನಿಲ್​ ಅಂಬಾನಿ ಖಚಿತವಾಗಿ ಎರಿಕ್ಸನ್​ ಕಂಪನಿಗೆ ಹಣ ಪಾವತಿಸುತ್ತೇನೆ. ಆದರೆ, ಆಸ್ತಿ ಮಾರಾಟ ವಿಚಾರದಲ್ಲಿ ಮುಖೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಜಿಯೋನೊಂದಿಗಿನ ಒಪ್ಪಂದ ವಿಫಲವಾಗಿರುವುದರಿಂದ ಇಲ್ಲಿಯವರೆಗೆ ಸಾಧ್ಯವಾಗಿಲ್ಲ ಎಂದು ಕೋರ್ಟ್​ ಮುಂದೆ ಹೇಳಿದ್ದಾರೆ.

ಕಳೆದ ಅಕ್ಟೋಬರ್​ 23ರಂದು ಡಿಸೆಂಬರ್​ 15, 2018ರ ಒಳಗೆ ಬಾಕಿ ಮೊತ್ತವನ್ನು ಪಾವತಿಸುವಂತೆ ರಿಲಯನ್ಸ್​ ಟೆಲಿಕಾಂಗೆ ಸುಪ್ರೀಂಕೋರ್ಟ್​ ಆದೇಶಿಸಿತ್ತು. ಹಣ ಪಾವತಿಸಲು ವಿಳಂಬ ಮಾಡಿದರೆ ವಾರ್ಷಿಕ 12 ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ಕೋರ್ಟ್​ ಹೇಳಿತ್ತು.

ಕೋರ್ಟ್​ ಆದೇಶವನ್ನು ಉಲ್ಲಂಘಿಸಿದ್ದರಿಂದ ಉದ್ಯಮಿ ಅನಿಲ್​ ಅಂಬಾನಿ, ರಿಲಯನ್ಸ್​ ಟೆಲಿಕಾಂ ಚೇರ್​ಮನ್​ ಸತೀಶ್​ ಸೇತ್​, ರಿಲಯನ್ಸ್ ಇನ್ಫ್ರಾಟೆಲ್ ಚೇರ್​ಮನ್​ ಛಾಯಾ ವಿರಾಣಿ ಮತ್ತು ಎಸ್​ಬಿಐ ಚೇರ್​ಮನ್​ ವಿರುದ್ಧ ನಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಲಾಗಿತ್ತು. (ಏಜೆನ್ಸೀಸ್​)