ಅಂಗಾರಕ ಸಂಕಷ್ಟಹರ ಚತುರ್ಥಿ ಮಹೋತ್ಸವ

ಮಂಗಳೂರು: ಶರವು ಶ್ರೀ ಮಹಾಗಣಪತಿ, ಸೌತಡ್ಕ ಶ್ರೀ ಮಹಾಗಣಪತಿ, ಆನೆಗುಡ್ಡೆ ಸಿದ್ದಿವಿನಾಯಕ ದೇವಸ್ಥಾನ ಸಹಿತ ಗಣಪತಿ ಕ್ಷೇತ್ರಗಳು ಹಾಗೂ ಇತರ ಪ್ರಮುಖ ದೇವಳದಲ್ಲಿ ಸಂಭ್ರಮದ ಅಂಗಾರಕ ಸಂಕಷ್ಟಹರ ಚತುರ್ಥಿ ಮಹೋತ್ಸವ ಮಂಗಳವಾರ ಶ್ರದ್ಧೆ, ಭಕ್ತಿಯಿಂದ ನಡೆಯಿತು. ಸಾವಿರಾರು ಭಕ್ತರು ಸಂಕಷ್ಟಿ ಉಪವಾಸ ಕುಳಿತು ದೇವರ ದರ್ಶನ ಪಡೆದು ಕೃತಾರ್ಥರಾದರು.
ಬಯಲು ಆಲಯ ಗಣಪತಿ ಎಂದೇ ಪ್ರಸಿದ್ಧವಾದ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ದೇವರಿಗೆ ವಿಶೇಷ ಅಲಂಕಾರ ನಡೆಸಲಾಯಿತು. ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಅರ್ಚಕ ಹರೀಶ್ ಭಟ್ ಅವರ ನೇತೃತ್ವದಲ್ಲಿ 100ಕ್ಕೂ ಅಧಿಕ ಅಧಿಕ ಗಣಪತಿ ಹೋಮ ಸೇವೆ, ಬಾಲಗಣಪತಿಗೆ ಭಕ್ತರಿಂದ ಸೀಯಾಳಾಭಿಷೇಕ ಸೇವೆ ನಡೆಯಿತು. ಸೇವೆ ಮಾಡಿಸಿದ ಭಕ್ತರಿಗೆ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಬಿಕರ್ನಕಟ್ಟೆ, ಉರ್ವ ಶ್ರೀಮಹಾಗಣಪತಿ ದೇವಳ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳ, ಗಣೇಶಪುರ ಮಹಾಗಣಪತಿ ದೇವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳೂರು ಮಾರಿಯಮ್ಮ ದೇವಸ್ಥಾನ ಸೇರಿದಂತೆ ಮಂಗಳೂರಿನ ಪ್ರಮುಖ ದೇವಳಗಳಲ್ಲಿ ವಿಶೇಷ ಪೂಜೆ ನಡೆಯಿತು.

ಉಡುಪಿ ಜಿಲ್ಲೆಯ ಹಟ್ಟಿಯಂಗಡಿ ಗಣಪತಿ ದೇವಸ್ಥಾನ, ಪೆರ್ಣಂಕಿಲ ಮಹಾಗಣಪತಿ ದೇವಸ್ಥಾನ, ಗುಡ್ಡೆಟ್ಟು ವಿನಾಯಕ ದೇವಸ್ಥಾನ, ಪಡುಬಿದ್ರಿ ಮಹಾಗಣಪತಿ, ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆ ಮಹಿಳೆಯರು ಉಪವಾಸ ವ್ರತದಲ್ಲಿ ಆಗಮಿಸಿ ವಿಶೇಷ ಪೂಜೆ ನೆರವೇರಿಸಿದರು. ರಾತ್ರಿ ಚಂದ್ರೋದಯ ಬಳಿಕ ಪ್ರಸಾದ ಭೋಜನ ಸ್ವೀಕರಿಸಿದರು.

ಪುಷ್ಪಾಲಂಕೃತ ಶರವು ದೇಗುಲ:: ಶರವು ಶ್ರೀ ಮಹಾಗಣಪತಿ ದೇವಸ್ಥಾನವನ್ನು ಭಕ್ತರು ಸೇರಿ 18 ಬಗೆಯ 5 ಲಕ್ಷ ಹೂವುಗಳಿಂದ ವೈವಿಧ್ಯಮಯವಾಗಿ ಅಲಂಕರಿಸಿದ್ದರು. ಹೊರಾಂಗಣ, ಒಳಪ್ರಾಂಗಣ, ಗಣಹೋಮ ಮಂಟಪ, ದೇವರ ಎದುರಿನ ಮಂಟಪ, ತೀರ್ಥಮಂಟಪ ಸಹಿತ ಇಡೀ ದೇಗುಲ ಪುಷ್ಪಮಯವಾಗಿತ್ತು. ಗಣಪತಿ, ಆನೆ, ಸ್ವಸ್ತಿಕ್ ಸಹಿತ ವಿವಿಧ ವಿನ್ಯಾಸಗಳನ್ನು ಹೂವಿನಲ್ಲೇ ರಚಿಸಲಾಗಿತ್ತು.

ಚೆಂಡೆ, ಸ್ಯಾಕೋ್ಸೆೆನ್, ವಾದ್ಯ-ಬ್ಯಾಂಡ್‌ಗಳ ನಿನಾದ ಸಂಕಷ್ಟಿ ಮಹೋತ್ಸವಕ್ಕೆ ಮತ್ತಷ್ಟು ಬೆರಗು ನೀಡಿತ್ತು. 10 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದಿದ್ದು, ಗರಿಕೆ, ಹಿಂಗಾರ, ಹೂ ಅರ್ಪಿಸಿ, ಪಂಚಕಜ್ಜಾಯ, ಗಣಹೋಮ, ಅಪ್ಪದ ಪೂಜೆ ಸೇವೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸಿ ಮತ್ತು ಸುದೇಶ್ ಶಾಸಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 11.30ರಿಂದ ಮಹಾಗಣಯಾಗ ಪೂರ್ಣಾಹುತಿ, 12 ಗಂಟೆಗೆ ಮಹಾಗಣಪತಿ ದೇವರಿಗೆ ಮಹಾಪೂಜೆ ನಡೆಯಿತು. ದೇವಳದ ಎಸ್.ರಾಹುಲ್ ಶಾಸಿ, ವಿಠಲ್ ಭಟ್, ಗಣೇಶ್ ಭಟ್, ಶಶೀಂದ್ರ ಭಟ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಆನೆಗುಡ್ಡೆಯಲ್ಲಿ ಅಂಗಾರಕ ಸಂಕಷ್ಟಿ: ಕುಂದಾಪುರ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನ ಆನುವಂಶಿಕ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯ ಮಾರ್ಗದರ್ಶನಲ್ಲಿ ಅರ್ಚಕರು ದೇವರಿಗೆ ವಿಶೇಷ ಅಲಂಕಾರ ಮಾಡಿ, ಗಣ ಹೋಮ ನೆರವೇರಿಸಿದರು. ಬೆಳಗ್ಗಿನಿಂದಲೇ ಭಕ್ತರು ಆಗಮಿಸುತ್ತಿದ್ದು, ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗಿಯಾದರು. ಭಕ್ತರಿಗೆ ಫಲಹಾರ ವ್ಯವಸ್ಥೆ ಮಾಡಲಾಗಿತ್ತ್ತು. ಹಟ್ಟಿಯಂಗಡಿಯಲ್ಲೂ ಸಂಕಷ್ಟಿ ನಿಮಿತ್ತ ಭಕ್ತರ ಸಂಖ್ಯೆ ಹೆಚ್ಚಿತ್ತು.

Leave a Reply

Your email address will not be published. Required fields are marked *