ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಗುರುವಾರ ನೂತನ ಅಂಗನವಾಡಿ ಕಟ್ಟಡವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೊತ್ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಮಕ್ಕಳ ಶೈಕ್ಷಣಿಕ ಹಾಗೂ ಸಮಗ್ರ ಬೆಳವಣಿಗೆಗೆ ಉತ್ತಮ ಸೌಕರ್ಯಗಳಿರುವ ಅಂಗನವಾಡಿ ಕೇಂದ್ರಗಳು ಬಹು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಕೇಂದ್ರಗಳ ನಿರ್ಮಾಣದಲ್ಲಿ ಸಮಾಜದ ಸಹಕಾರ ಪ್ರಶಂಸನೀಯವಾಗಿದೆ. ದಾನಿಗಳು ನಮ್ಮ ಭಾಗದ ಅಂಗನವಾಡಿ ನಿರ್ಮಿಸಲು ಶ್ರಮಿಸಿದ್ದಕ್ಕಾಗಿ ಅಮಿಗಾ ಫೌಂಡೇಷನ್ ಟ್ರಸ್ಟ್ ಹಾಗೂ ವಾಲ್ವಾಯ್ಲಾ ಫ್ಲೂಯಿಡ್ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡನ್ನು ಅಭಿನಂದಿಸಿದರು.
ಅಮಿಗಾ ಫೌಂಡೇಷನ್ ಟ್ರಸ್ಟಿ ಲಕ್ಷ್ಮೀ ರಾಮಮೂರ್ತಿ ಮಾತನಾಡಿ, 2019 ವರ್ಷದಿಂದ ಆರಂಭವಾದ ಅಮಿಗಾ ಫೌಂಡೇಷನ್ ತನ್ನ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಉಚಿತ ಮಾಂಟೆಸ್ಸರಿಯಲ್ಲಿ ಇಂಗ್ಲಿಷ್ ಆಧಾರಿತ ಶಿಕ್ಷಣವನ್ನು ಒದಗಿಸುತ್ತಿದೆ. 600 ಮಕ್ಕಳು ಮತ್ತು 50 ಮಹಿಳೆಯರಿಗೆ ಕೌಶಲ ಅಭಿವೃದ್ಧಿಯನ್ನು ಒದಗಿಸುತ್ತಿದೆ ಎಂದರು.
ಹಲವು ಕಡೆ ಹೊಸ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. 17 ಅಂಗನವಾಡಿ ಕೇಂದ್ರಗಳನ್ನು ನವೀಕರಿಸಲಾಗಿದೆ. 8 ತಿಂಗಳಿನಿಂದ, ದೊಡ್ಡಿಂದುವಾಡಿ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದಾಗಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಅಮಿಗಾ ಫೌಂಡೇಷನ್ ಮತ್ತು ವಾಲ್ವಾಯ್ಲಾ ಫ್ಲೂಯಿಡ್ ಪವರ್ ಇಂಡಿಯಾ ಪ್ರೈ. ಲಿಮಿಟೆಡ್, ಸಹಯೋಗದೊಂದಿಗೆ ದೊಡ್ಡಿಂದುವಾಡಿ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಮಕ್ಕಳಿಗೆ ಅನುಕೂಲವಾಗುವಂತೆ ಹೊಸ ಕಟ್ಟಡ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕಿ ಬಿಂದ್ಯಾ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸಹಾಯಕ ನಿರ್ದೇಶಕ ಗೋಪಾಲಕೃಷ್ಣ, ಸಿಡಿಪಿಒ ಅಂಬಿಕಾ, ಪಿಡಿಒ ಮರಿಸ್ವಾಮಿ, ಸದಸ್ಯರಾದ ಸುರೇಶ್, ರಾಜು, ಗುರುಸ್ವಾಮಿ, ರಾಚಪ್ಪಾಜಿ, ಸೋಮಣ್ಣ, ಮಿಗಾ ಫೌಂಡೇಷನ್ ಟ್ರಸ್ಟಿ ಲಕ್ಷ್ಮೀ ರಾಮಮೂರ್ತಿ, ಮಂಚೇರಿ ಧರ್ಮರಾಜು ಇದ್ದರು.