ಕುಕ್ಕರ್ ಸಿಡಿದು ಇಬ್ಬರು ಮಕ್ಕಳು ಗಾಯ


ಹುಣಸೂರು: ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷೃದಿಂದಾಗಿ ಕುಕ್ಕರ್ ಸಿಡಿದು ಇಬ್ಬರು ಮಕ್ಕಳು ಗಾಯಗೊಂಡಿದ್ದು, ಸಿಬ್ಬಂದಿ ಮೇಲೆ ಕ್ರಮಕ್ಕೆ ಪಾಲಕರು ಆಗ್ರಹಿಸಿದ್ದಾರೆ.

ತಾಲೂಕಿನ ಹೊಸೂರು ಗೇಟ್‌ನಲ್ಲಿರುವ ಅಂಗನವಾಡಿಗೆ ತೆರಳುತ್ತಿದ್ದ ಗ್ರಾಮದ ಶ್ರೀನಿವಾಸ್ ಎಂಬುವರ ಮಕ್ಕಳಾದ ಕೀರ್ತಿ(5) ಮತ್ತು ಕೌಶಿಕ್(3) ಗಾಯಗೊಂಡವರು.

ಮಾ.13ರಂದು ಅಂಗನವಾಡಿ ಶಿಕ್ಷಕಿ ಮಂಗಳಮ್ಮ ಪೋಲಿಯೋ ಲಸಿಕಾ ಅಭಿಯಾನದ ಸರ್ವೇಯಲ್ಲಿದ್ದರು. ಸಹಾಯಕಿ ಮಂಗಳಮ್ಮ ಒಬ್ಬರೇ ಅಂಗನವಾಡಿಯಲ್ಲಿದ್ದು, ಬೆಳಗ್ಗೆ ಅಡುಗೆ ತಯಾರಿಸಲು ಕುಕ್ಕರ್ ಇಟ್ಟಿದ್ದರು. ಈ ವೇಳೆ ಫೋನ್ ಕರೆ ಸ್ವೀಕರಿಸಿಕೊಂಡು ಹೊರಗೆ ಬಂದ ವೇಳೆ ಕುಕ್ಕರ್ ವಿಷಲ್ ಕೂಗಿದ್ದರಿಂದ ಮಕ್ಕಳಿಗೆ ಗ್ಯಾಸ್ ಸ್ಟೌ ಆಫ್ ಮಾಡಲು ಹೇಳಿದ್ದಾರೆ. ಈ ವೇಳೆ ಅಣ್ಣತಮ್ಮಂದಿರಾದ ಕೌಶಿಕ್ ಮತ್ತು ಕೀರ್ತಿ ಗ್ಯಾಸ್ ಸ್ಟೌ ಬಳಿಗೆ ತೆರಳಿ ಸ್ಟೌ ಆಫ್ ಮಾಡುವ ಬದಲಿಗೆ ವಿಷಲ್ ಒತ್ತಿಹಿಡಿದರೆ ಸ್ಟೌ ಆಫ್ ಆಗುವುದೆಂದು ತಿಳಿದು ವಿಷಲನ್ನು ಸೌಟಿನಲ್ಲಿ ಒತ್ತಿ ಹಿಡಿದಿದ್ದಾರೆ. ಕುಕ್ಕರ್‌ನಲ್ಲಿ ಒತ್ತಡ ಹೆಚ್ಚಾಗಿ ಸಿಡಿದಿದ್ದು, ಮಕ್ಕಳಿಗೆ ಬಿಸಿ ತಗುಲಿ ಗಾಯಗೊಂಡಿದ್ದಾರೆ.

ವಿಷಯ ತಿಳಿದ ಪಾಲಕರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ನಡೆದು ವಾರವಾದರೂ ಸಂಬಂಧಪಟ್ಟವರು ಇತ್ತ ತಿರುಗಿ ನೋಡಿಲ್ಲ ಎಂದು ಆರೋಪಿಸಿ ಕಾರ್ಯಕರ್ತೆ ಮತ್ತು ಸಹಾಯಕಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಾಲಕರು ಸಿ.ಡಿ.ಪಿ.ಒ ನವೀನ್‌ಕುಮಾರ್‌ಗೆ ದೂರು ನೀಡಿದ್ದಾರೆ. ಸಂಬಂಧಪಟ್ಟ ಮೇಲ್ವಿಚಾರಕರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಸಿಡಿಪಿಒ ಭರವಸೆ ನೀಡಿದ್ದಾರೆ.