ಅಂಗನವಾಡಿಗಳಲ್ಲಿ ಕಳಪೆ ಆಹಾರ ವಿತರಣೆ

ಬೆಳಗಾವಿ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿದ್ದು, ಮಕ್ಕಳಿಗೆ ನೀಡಿದ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಭಾಗ್ಯಲಕ್ಷ್ಮೀ ಬಾಂಡ್‌ಗಾಗಿ 500 ರಿಂದ 1000 ರೂ. ಕಮಿಷನ್ ಪಡೆಯುತ್ತಿದ್ದಾರೆ ಎಂದು ಬೆಳಗಾವಿ ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿನ ಅವ್ಯವಹಾರ, ಸಹಾಯಯರ ದಬ್ಬಾಳಿಕೆ, ಎಲ್ಲದಕ್ಕೂ ಕಮಿಷನ್ ದಂಧೆ, ಅಕ್ರಮವಾಗಿ ಸಹಾಯಕಿರ ನೇಮಕ ಸೇರಿ ಇನ್ನಿತರರ ಸಮಸ್ಯೆಗಳ ಕುರಿತು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಶೇ.60 ರಷ್ಟು ಮಕ್ಕಳು ಇರುವುದಿಲ್ಲ. ಆದರೆ, ಆಹಾರ ಪದಾರ್ಥಗಳನ್ನು ವಿತರಣೆ ಮಾಡಿರುವುದಾಗಿ ದಾಖಲೆ ಪುಸ್ತಕಗಳಲ್ಲಿ ಉಲ್ಲೇಖಿಸಿದ್ದಾರೆ.

ಪಾಲಕರು ಅಂಗನವಾಡಿ ಕೇಂದ್ರಗಳಲ್ಲಿ ತಮ್ಮ ಮಕ್ಕಳ ಹೆಸರು ನೋಂದಾಯಿಸಿ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಓದಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಆಹಾರ ಪದಾರ್ಥಗಳು ಸಿಗುತ್ತದೆ ಎಂಬ ಕಾರಣಕ್ಕೆ ಅಂಗನವಾಡಿ ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ನಿತ್ಯ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಣೆ, ಹಾಜರಾತಿ ಕುರಿತು ಬಾಲ ವಿಕಾಸ ಸಮಿತಿಗಳನ್ನು ರಚನೆ ಮಾಡಿದ್ದಾರೆ. ಆದರೆ, ಯಾವುದೇ ಸಮಿತಿಗಳು ಪಾರದರ್ಶಕವಾಗಿ ಸಭೆ ನಡೆಸಿ ಕೆಲಸ ಮಾಡುತ್ತಿಲ್ಲ. ಹಾಗಾಗಿಯೇ ಆಹಾರ ಪದಾರ್ಥಗಳು ದುರುಪಯೋಗ ಆಗುತ್ತಿದೆ. ಮತ್ತೊಂದೆಡೆ ರಜೆ ದಿನಗಳಲ್ಲಿಯೂ ಮಕ್ಕಳ ಹೆಸರಿನಲ್ಲಿ ಆಹಾರ ಪದಾರ್ಥ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ನೇಮಕಾತಿಗೆ ಸದಸ್ಯರ ಆಕ್ಷೇಪ

ಬೆಳಗಾವಿ ತಾಲೂಕಿನ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಮತ್ತು ಅಡುಗೆ ಮಾಡಲು ಅನಾರೋಗ್ಯಕ್ಕೆ ಒಳಗಾಗಿರುವವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ ಕೆಲ ಪಾಲಕರು ಅಂಗನವಾಡಿಗೆ ಮಕ್ಕಳನ್ನು ಕಳುಹಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಪರ್ಯಾಯ ಸಿಬ್ಬಂದಿ ನಿಯೋಜಿಸುತ್ತಿಲ್ಲ. ಯಾರು ಹಣ ಕೊಡುತ್ತಾರೋ ಅಂಥವರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿರುವವರನ್ನು ಯಾವುದೇ ಕಾರಣಕ್ಕೂ ನೇಮಕಾತಿ ಮಾಡಿಕೊಳ್ಳಬಾರದು ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಉಪಾಧ್ಯಕ್ಷ ಮಾರುತಿ ಸನದಿ, ತಾಪಂ ಇಒ ಪದ್ಮಜಾ ಪಾಟೀಲ, ತಹಸೀಲ್ದಾರ್ ಮಂಜುಳಾ ನಾಯಕ ಇತರರು ಇದ್ದರು.

ಮಾಸಿಕ 50 ಲಕ್ಷ ರೂ. ಖರ್ಚು

ಬೆಳಗಾವಿ ತಾಲೂಕಿನಲ್ಲಿ 800 ಅಧಿಕ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿರುವ ಮಕ್ಕಳ ಆಹಾರ ಪದಾರ್ಥಗಳಿಗಾಗಿ ಸರ್ಕಾರವು ಮಾಸಿಕ 50 ಲಕ್ಷ ರೂ. ವರೆಗೆ ಖರ್ಚು ಮಾಡುತ್ತಿದೆ. 2018-18ನೇ ಸಾಲಿನ ಅವಧಿಯಲ್ಲಿ 16 ಅಂಗನವಾಡಿ ಕೇಂದ್ರಗಳ ದುರಸ್ತಿಗಾಗಿ ತಲಾ 50 ಸಾವಿರ ರೂ. ಖರ್ಚು ಮಾಡಲಾಗಿದೆ. ಅನಾರೋಗ್ಯ ಪೀಡಿತ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿಲ್ಲ. ಯಾವುದೇ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ಪದಾರ್ಥ ವಿತರಣೆ ಮಾಡುತ್ತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಭಾಗ್ಯಲಕ್ಷ್ಮಿ ಬಾಂಡ್‌ಗೆ 500 ಕಮಿಷನ್!

ಬಡ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಅಂತಹವರಿಗೆ ಸರ್ಕಾರವು 1 ಲಕ್ಷ ರೂ. ಭಾಗ್ಯಲಕ್ಷ್ಮೀ ಬಾಂಡ್ ನೀಡುತ್ತಿದೆ. ಆದರೆ, ಅಂಗನವಾಡಿ ಸಹಾಯಕಿಯರು, ಸಿಬ್ಬಂದಿ 500 ರಿಂದ 1000 ರೂ. ವರೆಗೆ ಕಮಿಷನ್ ನೀಡಿದರೆ ಮಾತ್ರ ಬಾಂಡ್ ಪೇಪರ್‌ಗೆ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಕಮಿನಷ್ ನೀಡದಿದ್ದರೆ ಆಹಾರ ಪದಾರ್ಥ ನೀಡುತ್ತಿಲ್ಲ ಎಂದು ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ಸೇರಿ ಸದಸ್ಯರು ಗಂಭೀರ ಆರೋಪ ಮಾಡಿದರು.

Leave a Reply

Your email address will not be published. Required fields are marked *