ಶಿವಕುಮಾರ ಶಶಿಮಠ ಗಜೇಂದ್ರಗಡ
ತಾಲೂಕಿನ ಅಂಗನವಾಡಿಗಳ ಸ್ಥಿತಿ ಅಯೋಮಯವಾಗಿದೆ. ಗೋಗೇರಿ, ಲಕ್ಕಲಕಟ್ಟಿ, ವೀರಾಪುರ ಸೇರಿ ಹಲವು ಗ್ರಾಮಗಳ ಕೇಂದ್ರಗಳು ಶುಚಿತ್ವದ ಸಮಸ್ಯೆಯಿಂದ ಬಳಲುತ್ತಿವೆ. ಗಜೇಂದ್ರಗಡ ಪಟ್ಟಣದಲ್ಲಿಯೂ ಅಂಗನವಾಡಿಯೊಂದಕ್ಕೆ ಸ್ವಂತ ಸೂರು ಲಭಿಸಿಲ್ಲ.
ಗೋಗೇರಿಯ ಸರ್ಕಾರಿ ಉರ್ದು ಶಾಲೆಯ ಹತ್ತಿರವಿರುವ ಅಂಗನವಾಡಿ ಕೇಂದ್ರ ಸಂಖ್ಯೆ 259ಕ್ಕೆ ಪಾಲಕರು ತಮ್ಮ ಮಕ್ಕಳನ್ನು ಭಯದಿಂದಲೇ ಬಿಡುವಂತಾಗಿದೆ. ಅಂಗನವಾಡಿ ಕೇಂದ್ರದ ಪಕ್ಕದಲ್ಲಿಯೇ ಚರಂಡಿ ಇದೆ. ಸುತ್ತಲೂ ಜಾಲಿಗಿಡ ಬೆಳೆದಿವೆ. ಚರಂಡಿ ನೀರಿನಿಂದ ಸ್ವಚ್ಛತೆ ಇಲ್ಲದೆ ಮಕ್ಕಳು ಪರದಾಡುವಂತಾಗಿದೆ. ಅಂಗನವಾಡಿ ಕೇಂದ್ರದ ಸಿಬ್ಬಂದಿ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ಸ್ವಚ್ಛತೆಗೆ ಗಮನ ಹರಿಸಿಲ್ಲ. ಸರ್ಕಾರ ಅಂಗನವಾಡಿ ಮಕ್ಕಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಅಧಿಕಾರಿಗಳ ನಿಷ್ಕಾಳಜಿಯಿಂದ ಸೌಲಭ್ಯ ಮರೀಚಿಕೆಯಾಗಿದೆ.
ಹಾಜರಾತಿ ಕ್ಷೀಣ: ಈ ಶಾಲೆಯಲ್ಲಿ 16ಕ್ಕೂ ಅಧಿಕ ಮಕ್ಕಳ ಹಾಜರಾತಿ ಇದೆ. ಆದರೆ ಕೇಂದ್ರದ ಸುತ್ತಲಿನ ಅಶುಚಿತ್ವದಿಂದ ಹೆಚ್ಚಿನ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ. ಈ ಕೇಂದ್ರದಲ್ಲಿ ಮಕ್ಕಳಿಗೆ ಕೊಡುವ ಅಹಾರ ಮನೆಗೆ ಒಯ್ದು ತಿನ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಲೀಜು ದಾಟಿ ಆಗಮನ: ಅಂಗನವಾಡಿ ಕೇಂದ್ರಕ್ಕೆ ಹಾಗೂ ಕೇಂದ್ರದ ಹಿಂಭಾಗದ ಸರ್ಕಾರಿ ಉರ್ದು ಶಾಲೆಯ ಮಕ್ಕಳು ರಸ್ತೆ ಮೇಲೆ ಹರಿಯುವ ಚರಂಡಿ ನೀರನ್ನು ತುಳಿದುಕೊಂಡು ಶಾಲೆಗೆ ಬರಬೇಕಾಗಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.
ತಾಲೂಕಿನ ವೀರಾಪುರದ ಅಂಗನವಾಡಿ ಕೇಂದ್ರದ ಮುಂದೆಯೇ ಬಾವಿಯಿದೆ. ಗ್ರಾಮಸ್ಥರು ಅಲ್ಲಿಯೇ ಕಸದ ಗುಂಡಿ ಮಾಡಿದ್ದಾರೆ. ಅದನ್ನು 6 ತಿಂಗಳಿಗೊಮ್ಮೆ ಶುಚಿಗೊಳಿಸುತ್ತಾರೆ. ಗಜೇಂದ್ರಗಡ ಪಟ್ಟಣದ ಅಂಗನವಾಡಿ ಕೇಂದ್ರ 197 ಬಾಡಿಗೆ ಕಟ್ಟಡದಲ್ಲಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗಗಳ ಜನ ವಾಸಿಸುತ್ತಿದ್ದಾರೆ. ಈ ಕೇಂದ್ರದಲ್ಲಿ ಒಟ್ಟು 32 ಮಕ್ಕಳ ದಾಖಲಾತಿ ಇದ್ದು, ಈ ಅಂಗನವಾಡಿ ಕೇಂದ್ರದ ಪಕ್ಕದಲ್ಲಿಯೇ ಸಾರ್ವಜನಿಕ ಶೌಚಗೃಹವಿದ್ದು, ದುರ್ವಾಸನೆಯಿಂದ ಮಕ್ಕಳನ್ನು ಕಳುಹಿಸಲು ಪಾಲಕರು ಮನಸು ಮಾಡುತ್ತಿಲ್ಲ.
ಗಜೇಂದ್ರಗಡ ತಾಲೂಕಿನ ಯಾವ ಅಂಗನವಾಡಿ ಕೇಂದ್ರ ಬಳಿ ಆಶುಚಿತ್ವವಿದೆ ಎಂಬುದರ ಮಾಹಿತಿ ಪಡೆದು ಸ್ಥಳೀಯ ಆಡಳಿತಕ್ಕೆ ಪತ್ರ ಬರೆಯಲಾಗುವುದು. ಪರಿಸರ ಸ್ವಚ್ಛವಾಗಿಡುವಂತೆ ಇಲಾಖೆ ಸಿಬ್ಬಂದಿಗೆ ಸೂಚಿಸುತ್ತೇನೆ. ಮೊಟ್ಟೆ ಗಾತ್ರ ಚಿಕ್ಕದಾಗಿರುವ ಬಗ್ಗೆ ಅನೇಕ ಪಾಲಕರು ಆರೊಪ ಮಾಡಿದ್ದಾರೆ. ಇಲಾಖೆ ವತಿಯಿಂದ ಬಾಲವಿಕಾಸ ಸಮಿತಿಗೆ ದುಡ್ಡು ಹಾಕುತ್ತೇವೆ. ಅವರೇ ಮೊಟ್ಟೆ ಸರಬರಾಜು ಮಾಡುತ್ತಾರೆ.
-ವಿರೂಪಾಕ್ಷಯ್ಯ ಹಿರೇಮಠ, ಪ್ರಭಾರಿ ಸಿಡಿಪಿಒ ರೋಣ.