ಮಿನಿ ವಿಧಾನಸೌಧ ಎದುರು ಪ್ರತಿಭಟನೆ

ರಾಣೆಬೆನ್ನೂರ: ನಿವೃತ್ತಿಯಾಗಿರುವ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ 3 ಸಾವಿರ ರೂ. ಪಿಂಚಣಿ ನೀಡುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಸೋಮವಾರ ನಗರದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ದೇಶದಲ್ಲಿ ಜಾರಿಗೆ ಬಂದು 43 ವರ್ಷವಾಗಿದೆ. ಯೋಜನೆ ಜಾರಿಯಲ್ಲಿ ರಾಜ್ಯ ಅಗ್ರಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಸರ್ಕಾರದ ಯೋಜನೆಗಳ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕನಿಷ್ಠ ಕೂಲಿ, ಪಿಂಚಣಿ, ಭದ್ರತೆ, ಇಎಸ್​ಐ ಹಾಗೂ ಭವಿಷ್ಯ ನಿಧಿ ಯೋಜನೆಗಳಿಗೊಳಪಡದೆ ವಂಚಿತರಾಗಿದ್ದಾರೆ. ಅಲ್ಲದೇ, ನಿವೃತ್ತಿ ಹೊಂದಿದವರ ಜೀವನ ಬೀದಿಪಾಲಾಗಿದೆ. ಯಾವುದೇ ಆಶ್ರಯವಿಲ್ಲದವರು ಭಿಕ್ಷಾಟನೆ ಮಾಡಿ ಬದುಕುತ್ತಿದ್ದಾರೆ. ಪಿಂಚಣಿ ಸೌಲಭ್ಯವಿದ್ದರೆ ಈ ದುಸ್ಥಿತಿ ಒದಗುತ್ತಿರಲಿಲ್ಲ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂಗನವಾಡಿ ಮಹಿಳೆಯರಿಗೆ ಕನಿಷ್ಠ ವೇತನ ಹಾಗೂ ಪಿಂಚಣಿ ನೀಡುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಈಡೇರಿಸಬೇಕು. ಕನಿಷ್ಠ 3 ಸಾವಿರ ರೂ. ಪಿಂಡಣಿ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಫೆಡರೇಷನ್ ವತಿಯಿಂದ ರಾಜ್ಯಮಟ್ಟದ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಪ್ರತಿಭಟನಾನಿರತರು ಮಾಹಿತಿ ನೀಡಿದರು.

ಸಂಘಟನೆಯ ಅಧ್ಯಕ್ಷೆ ನಾಗಮ್ಮ ಮುದಕಣ್ಣನವರ, ಸಂಘಟನಾ ಕಾರ್ಯದರ್ಶಿ ಸಲ್ಮಾಬಾನು ಅತ್ತಾರ, ಕಾರ್ಯದರ್ಶಿ ಭಾರತಿ ಕೊಪರ್ಡ್, ರಾಜ್ಯ ಸಮಿತಿ ಸದಸ್ಯರಾದ ನಾಗರತ್ನಾ ಎಲಿಗಾರ, ಆರ್.ಪಿ. ಚಂದ್ರಕಲಾ, ಕಾರ್ಯಕರ್ತೆಯರಾದ ಪ್ರೇಮಾ ಬುದಾರಪುರ, ರೇಖಾ, ಮಹಾಲಕ್ಷ್ಮೀ ಚಲವಾದಿ, ಸರೋಜಾ ಅರ್ಕಸಾಲಿ, ರತ್ನ ತಳವಾರ, ಪುಷ್ಪ ಬಿಷ್ಟಣ್ಣನವರ, ನಿವೃತ್ತ ಕಾರ್ಯಕರ್ತೆಯರಾದ ಶಾಂತಮ್ಮ ಕಾಟೋಳಕರ, ದಾನಮ್ಮ ಲಮಾಣಿ, ನಾಗಮ್ಮ ಸಿಗಡೇರ, ಗುತ್ಯಮ್ಮ ಕುಸಗೂರ, ಲಕ್ಷ್ಮಮ್ಮ ಬಾಗಲಕೋಟೆ ಮತ್ತಿತರರಿದ್ದರು.