ಪಾಳಾ: ಎಟಿಎಂಗೆ ಹೋಗಿದ್ದ ಅಂಗನವಾಡಿ ಶಿಕ್ಷಕಿಗೆ ದೊಡ್ಡ ಅಚ್ಚರಿಯೊಂದು ಕಾದಿತ್ತು. ತಮ್ಮ ಎಟಿಎಂ ಕಾರ್ಡ್ನ್ನು ಮಶಿನ್ಗೆ ಹಾಕಿ, ಪಿನ್ ನಂಬರ್ ಬರೆದು, ಬೇಕಾದರ ಹಣದ ಮೊತ್ತವನ್ನೂ ದಾಖಲಿಸಿ ಕಾಯುತ್ತ ನಿಂತರು. ಹಣವೇನೋ ಬಂತು. ಆದರೆ ಅದನ್ನು ನೋಡಿದ ಶಿಕ್ಷಕಿ ಕಕ್ಕಾಬಿಕ್ಕಿಯಾದರು.
ಕೇರಳದ ವೆರಾನಲ್ನ ಕರೂರು ಪಂಚಾಯಿತಿಯಲ್ಲಿರುವ ಅಂಗನವಾಡಿ ಶಿಕ್ಷಕಿ ಲಿಸ್ಸಿ ಕಟ್ಟಕತ್ ಎಂಬುವರು ಪಾಳಾದಲ್ಲಿರುವ ಎಸ್ಬಿಐ ಎಟಿಎಂ ಕೇಂದ್ರವೊಂದಕ್ಕೆ ಹೋಗಿ ಹಣ ತೆಗೆದರು. ಅವರು ಎಟಿಎಂ ಯಂತ್ರದಲ್ಲಿ ಕೇವಲ 500 ರೂಪಾಯಿಯಷ್ಟನ್ನು ಮಾತ್ರ ದಾಖಲಿಸಿದರು. ಆದರೆ ಬಂದ ಹಣದ ಮೊತ್ತ 10,000 ರೂಪಾಯಿ.
ಶಿಕ್ಷಕಿ ಕೂಡಲೇ ಆ ಪಂಚಾಯಿತಿ ಸದಸ್ಯನಿಗೆ ವಿಷಯ ತಿಳಿಸಿದರು. ಬಳಿಕ ಎಸ್ಬಿಐ ಅಧಿಕಾರಿಗಳಿಗೂ ವಿಷಯ ತಲುಪಿಸಲಾಯಿತು. ಅವರು ಸ್ಥಳಕ್ಕೆ ಬಂದರೂ ಶಿಕ್ಷಕಿಯಿಂದ ಉಳಿದ ಹಣ ಪಡೆಯಲು ನಿರಾಕರಿಸಿದರು. ಬ್ಯಾಂಕ್ಗೆ ತೆಗೆದುಕೊಂಡು ಹೋಗಿ ಎಂದು ಹೇಳಿದರು.
ಆದರೆ ಇದು ಎಸ್ಬಿಐ ಎಟಿಎಂ ಕೇಂದ್ರದಿಂದ ನಡೆದ ಎಡವಟ್ಟು. ಹಾಗಾಗಿ ನೀವೇ ತೆಗೆದುಕೊಳ್ಳಿ ಎಂದು ಆಗ್ರಹಿಸಿ ಸ್ಥಳೀಯರು, ಪಂಚಾಯಿತಿ ಸದಸ್ಯರು ಎಲ್ಲ ಸೇರಿ ಪ್ರತಿಭಟನೆ ಮಾಡಿದ ಬಳಿಕ ಅಧಿಕಾರಿಗಳು ಹಣವನ್ನು ವಾಪಸ್ ಪಡೆದು, ರಶೀದಿ ಕೊಟ್ಟರು.(ಏಜೆನ್ಸೀಸ್)